ಸಾರಾಂಶ
ದೇಶದ ಭವಿಷ್ಯ ಅಡಗಿರುವುದೇ ಸರ್ಕಾರಿ ಶಾಲೆಗಳಲ್ಲಿ, ಏಕೆಂದರೆ ದೇಶದ ಅನ್ನದಾತರೆನಿಸಿದ ಬಹತೇಕ ರೈತರ ಮಕ್ಕಳು ಇಂದಿಗೂ ಓದುತ್ತಿರುವುದು ಸರ್ಕಾರಿ ಶಾಲೆಗಳಲ್ಲಿ. ಇವರ ಅಭ್ಯುದಯವಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಆಲೂರು ಸಾರ್ವಜನಿಕ ಗ್ರಂಥಾಲಯದ ಗ್ರಂಥಪಾಲಕ ಟಿ.ಕೆ. ನಾಗರಾಜ್ ಅಭಿಪ್ರಾಯಪಟ್ಟರು. ಪ್ರಸಕ್ತ ಕಾಲಮಾನದಲ್ಲಿ ಅತಿಯಾದ ಹಾಗೂ ಅಜಾಗರೂಕತೆಯ ಮೊಬೈಲ್ ಬಳಕೆಯಿಂದ ಮಕ್ಕಳು ಬದುಕಿನಲ್ಲಿ ಪ್ರಬುದ್ಧತೆಯನ್ನು ಸಾಧಿಸುವಲ್ಲಿ ವಿಫಲರಾಗುತ್ತಿದ್ದಾರೆ. ಆದ್ದರಿಂದ ಮೊಬೈಲ್ ಬದಲು ಪುಸ್ತಕಗಳನ್ನು ಹಿಡಿಯಬೇಕು, ಅಂದಾಗ ಮಾತ್ರ ಬದುಕಿನಲ್ಲಿ ಸಾರ್ಥಕತೆ ಕಾಣಲು ಸಾಧ್ಯ ಎಂದರು.
ಕನ್ನಡಪ್ರಭ ವಾರ್ತೆ ಆಲೂರು
ದೇಶದ ಭವಿಷ್ಯ ಅಡಗಿರುವುದೇ ಸರ್ಕಾರಿ ಶಾಲೆಗಳಲ್ಲಿ, ಏಕೆಂದರೆ ದೇಶದ ಅನ್ನದಾತರೆನಿಸಿದ ಬಹತೇಕ ರೈತರ ಮಕ್ಕಳು ಇಂದಿಗೂ ಓದುತ್ತಿರುವುದು ಸರ್ಕಾರಿ ಶಾಲೆಗಳಲ್ಲಿ. ಇವರ ಅಭ್ಯುದಯವಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಆಲೂರು ಸಾರ್ವಜನಿಕ ಗ್ರಂಥಾಲಯದ ಗ್ರಂಥಪಾಲಕ ಟಿ.ಕೆ. ನಾಗರಾಜ್ ಅಭಿಪ್ರಾಯಪಟ್ಟರು.ಅವರು ಆಲೂರು ತಾಲೂಕು ತಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಲೂರು ಬಿಲಿವಿರ್ಸ್ ಚರ್ಚಿನ ವತಿಯಿಂದ ಹಮ್ಮಿಕೊಂಡಿದ್ದ ಶಾಲಾ ಮಕ್ಕಳಿಗಾಗಿ ಕಲಿಕಾ ಸಾಮಗ್ರಿಗಳ ಕೊಡುಗೆ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿ, ಪ್ರಸಕ್ತ ಕಾಲಮಾನದಲ್ಲಿ ಅತಿಯಾದ ಹಾಗೂ ಅಜಾಗರೂಕತೆಯ ಮೊಬೈಲ್ ಬಳಕೆಯಿಂದ ಮಕ್ಕಳು ಬದುಕಿನಲ್ಲಿ ಪ್ರಬುದ್ಧತೆಯನ್ನು ಸಾಧಿಸುವಲ್ಲಿ ವಿಫಲರಾಗುತ್ತಿದ್ದಾರೆ. ಆದ್ದರಿಂದ ಮೊಬೈಲ್ ಬದಲು ಪುಸ್ತಕಗಳನ್ನು ಹಿಡಿಯಬೇಕು, ಜ್ಞಾನ ಸಂಪಾದಿಸಿ ಉತ್ತಮ ಭವಿಷ್ಯ ರೂಪಿಸಿಕೊಂಡು ದೇಶದ ಆಸ್ತಿಯಾಗಬೇಕು. ಅಂದಾಗ ಮಾತ್ರ ಬದುಕಿನಲ್ಲಿ ಸಾರ್ಥಕತೆ ಕಾಣಲು ಸಾಧ್ಯ ಎಂದರು.
ಬಿಲಿವಿರ್ಸ್ ಚರ್ಚಿನ ಫಾದರ್ ಬಸವರಾಜ್ ಮಕ್ಕಳಿಗೆಲ್ಲಾ ಜಾಮಿಟ್ರಿ ಬಾಕ್ಸ್‌ಗಳನ್ನು ವಿತರಿಸಿ ಮಾತನಾಡಿ, ಮಕ್ಕಳಿಗಾಗಿ ಈಗಾಗಲೇ ಹಾಲು, ಮೊಟ್ಟೆ, ಬಿಸಿಯೂಟ, ಸೈಕಲ್, ವಿದ್ಯಾರ್ಥಿ ವೇತನ, ಸಮವಸ್ತ್ರ, ಪಠ್ಯಪುಸ್ತಕ ಹೀಗೇ ಅನೇಕ ಯೋಜನೆಗಳನ್ನು ಜಾರಿಗೆ ತಂದು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಆದರೆ ಅಭ್ಯಾಸಕ್ಕೆ ಪೂರಕವಾದ ಕಲಿಕಾ ಸಲಕರಣೆಗಳಾದ ನೋಟ್‌ಬುಕ್ಸ್, ಪೆನ್, ಪೆನ್ಸಿಲ್, ಜಾಮಿಟ್ರಿ ಬಾಕ್ಸ್, ಬ್ಯಾಗ್ ಮುಂತಾದ ಪರಿಕರಗಳ ಪೂರೈಕೆಯನ್ನು ಇಲ್ಲಿನ ಶಿಕ್ಷಕರ ಶ್ರಮದಿಂದ ನೀವೆಲ್ಲಾ ಪಡೆಯುತ್ತಿದ್ದೀರಿ, ಈ ಎಲ್ಲಾ ಕೊಡುಗೆಗಳನ್ನು ಸದ್ಭಳಕೆ ಮಾಡಿಕೊಂಡು ಉತ್ತಮ ರೀತಿಯ ಕಲಿಕೆಯಲ್ಲಿ ತೊಡಗಿಸಿಕೊಂಡಾಗ ಮಾತ್ರ ಈ ಶ್ರಮಕ್ಕೆ ಸಾರ್ಥಕತೆ ಸಲ್ಲುತ್ತದೆ ಎಂದರು.ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಕೊಟ್ರೇಶ್ ಎಸ್. ಉಪ್ಪಾರ್, ಹಿರಿಯ ಶಿಕ್ಷಕಿ ವಿ. ರವಿತ, ಅತಿಥಿ ಶಿಕ್ಷಕಿ ಎ.ಎಸ್.ರೇಖಾ ಸೇರಿದಂತೆ ಮಕ್ಕಳು ಹಾಜರಿದ್ದರು.