ಇಂದಿನಿಂದ ಸಡಗರ-ಸಂಭ್ರಮದ ಗಗನಚುಕ್ಕಿ ಜಲಪಾತೋತ್ಸವ

| Published : Sep 13 2025, 02:04 AM IST

ಸಾರಾಂಶ

ಪ್ರವಾಸೋದ್ಯಮ ಇಲಾಖೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಗಗನಚುಕ್ಕಿ ಜಲಪಾತೋತ್ಸವ ಶನಿವಾರ ಮತ್ತು ಭಾನುವಾರದಂದು ವಿಜೃಂಭಣೆಯಿಂದ ನಡೆಯಲಿದೆ. ಅಂದು ಸಂಜೆ ೬ ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಸ್ಥಿತರಿರುವರು.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರವಾಸೋದ್ಯಮ ಇಲಾಖೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಗಗನಚುಕ್ಕಿ ಜಲಪಾತೋತ್ಸವ ಶನಿವಾರ ಮತ್ತು ಭಾನುವಾರದಂದು ವಿಜೃಂಭಣೆಯಿಂದ ನಡೆಯಲಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.

ಮಳವಳ್ಳಿ ತಾಲೂಕಿನ ಗಗನಚುಕ್ಕಿ ಜಲಪಾತೋತ್ಸವ ನಡೆಯುವ ಮಲ್ಲಿಕ್ಯಾತನಹಳ್ಳಿ (ಬ್ಲಫ್) ವೇದಿಕೆ ಬಳಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಅಂದು ಸಂಜೆ ೬ ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಸ್ಥಿತರಿರುವರು. ಸಚಿವರಾದ ಎನ್.ಚಲುವರಾಯಸ್ವಾಮಿ, ಎಚ್.ಕೆ.ಪಾಟೀಲ್, ಸತೀಶ್ ಜಾರಕಿಹೊಳಿ, ಜಮೀರ್ ಅಹಮದ್ ಖಾನ್, ಶಿವರಾಜ್ ತಂಗಡಗಿ, ಬಿ.ಎಸ್.ಸುರೇಶ್ ಭಾಗವಹಿಸುವರು ಎಂದರು.

ಬೆಳಗ್ಗೆ ೧೧ ಗಂಟೆಯಿಂದ ಸ್ಥಳೀಯ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾದ್ವಿನಿ ಕೊಪ್ಪ, ರವಿ ಮೂರೂರು, ಹನುಮಂತರವರಿಂದ ಜಾನಪದ ಸಂಗೀತ ಕಾರ್ಯಕ್ರಮ, ಶಿವರಾಜ್ ಕೆ.ಆರ್.ಪೇಟೆ ಅವರಿಂದ ಕಾಮಿಡಿ ಶೋ ನಡೆಯಲಿದೆ. ಸಂಜೆ ೭.೩೦ ರಿಂದ ಅರ್ಜುನ್ ಜನ್ಯ ತಂಡದಿಂದ ಸಂಗೀತ ಕಾರ್ಯಕ್ರಮ, ಖ್ಯಾತ ಗಾಯಕಿ ಮಂಗ್ಲಿ, ನಟಿ ರಾಗಿಣಿ ದ್ವಿವೇದಿ, ಮಾನ್ವಿತಾ ಹರೀಶ್ ಇತರರು ಪಾಲ್ಗೊಳ್ಳುವರು.

ಸೆ.೧೪ರಂದು ಮಧ್ಯಾಹ್ನ ೩ ಗಂಟೆಯಿಮದ ಸವಿತಕ್ಕ, ಶ್ರೀಹರ್ಷ, ಕಂಬದ ರಂಗಯ್ಯ, ಮಲ್ಲಿಕಾರ್ಜುನ ಕೆಂಕೆರೆ ಅವರಿಂದ ಜನಪದ ಸಂಗೀತ, ರಾಜ್ ಇವೆಂಟ್ಸ್‌ನಿಂದ ಡ್ರಮ್ ಫ್ಯೂಷನ್ ಮ್ಯೂಸಿಕ್ ಕಾರ್ಯಕ್ರಮ. ಗಂಗಾವತಿ ಪ್ರಾಣೇಶ್ ತಂಡದಿಂದ ಕಾಮಿಡಿ ಶೋ, ಗುರುಕಿರಣ್ ತಂಡದಿಂದ ಸಂಗೀತ, ಹರ್ಷಿಕಾ ಪೂಣಚ್ಚ ಮತ್ತು ಭಾವನಾರಾವ್ ಅವರಿಂದ ನೃತ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ವಿವರಿಸಿದರು.

ರಾಜ್ಯ ಸರ್ಕಾರ ಗಗನಚುಕ್ಕಿ ಜಲಪಾತೋತ್ಸವಕ್ಕೆ ೨.೫೦ ಕೋಟಿ ರು. ಬಿಡುಗಡೆ ಮಾಡಿದೆ. ಜಲಪಾತಕ್ಕೆ ವರ್ಣರಂಜಿತ ಲೇಸರ್ ಲೈಟ್ ಪ್ರದರ್ಶನ, ದಾರಿಯುದ್ದಕ್ಕೂ ವಿದ್ಯುತ್‌ ದೀಪಾಲಂಕಾರ ಮಾಡಲಾಗುವುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಆರಕ್ಷಕ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ಇತರರಿದ್ದರು.ಈ ಬಾರಿ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ

ಈ ಬಾರಿ ಜಲಪಾತೋತ್ಸವವನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಮಾಡಲಾಗಿದೆ. ನೀರಿನ ಬಾಟಲ್‌ನಿಂದ ಆರಂಭವಾಗಿ ಯಾವುದೇ ವಿಧವಾದ ಪ್ಲಾಸ್ಟಿಕ್ ಬಳಕೆ ಮಾಡುವಂತಿಲ್ಲ. ಅಂಗಡಿಯವರೂ ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ಲೋಟ, ಕುಡಿಯುವ ನೀರಿನ ಬಾಟಲ್ ಸೇರಿದಂತೆ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡದಂತೆ ನಿರ್ಬಂಧಿಸಲಾಗಿದೆ. ಪ್ಲಾಸ್ಟಿಕ್ ಬಳಸದಂತೆ ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ. ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆಗೆ ಪ್ರಧಾನ ಆದ್ಯತೆ ನೀಡಲಾಗಿದೆ ಎಂದು ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.೧೦೦ ಕೋಟಿ ರು. ವೆಚ್ಚದಲ್ಲಿ ಸುರಂಗ ಮತ್ಸ್ಯಾಲಯ

ಗಗನಚುಕ್ಕಿಯನ್ನು ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ ೧೦೦ ಕೋಟಿ ರು. ವೆಚ್ಚದಲ್ಲಿ ಸುರಂಗ ಮತ್ಸ್ಯಾಲಯ ನಿರ್ಮಿಸಲು ಯೋಜನೆ ಸಿದ್ಧಪಡಿಸಿದೆ. ಅದಕ್ಕೆ ೧೦೦ ಎಕರೆ ಜಾಗದ ಅವಶ್ಯಕತೆ ಇದೆ. ಅದರ ಸರ್ವೇ ಕಾರ್ಯ ನಡೆಯುತ್ತಿದೆ. ಜಾಗದ ವಿಚಾರವಾಗಿ ಅರಣ್ಯ ಇಲಾಖೆ ಸಮಸ್ಯೆ ಇದೆ. ನೈಸರ್ಗಿಕವಾಗಿ ಹರಿಯುವ ನೀರನ್ನು ಬಳಕೆ ಮಾಡಿಕೊಂಡು ಸುರಂಗ ಮತ್ಸ್ಯಾಲಯ ನಿರ್ಮಿಸಲಾಗುವುದು. ಮೇಲೆ ಮತ್ಸ್ಯಾಲಯವಿದ್ದು ಕೆಳಗೆ ಪ್ರವಾಸಿಗರು ವೀಕ್ಷಿಸುವಂತೆ ಅವಕಾಶ ಮಾಡಲಾಗುವುದು. ಸುರಂಗ ಮತ್ಸ್ಯಾಲಯದಿಂದ ಈ ಪ್ರದೇಶದ ಮಹತ್ವ ಹೆಚ್ಚಾಗಲಿದೆ. ಸ್ಥಳೀಯ ಜನರಿಗೆ ಉದ್ಯೋಗವಕಾಶಗಳೂ ದೊರೆಯಲಿವೆ. ಪ್ರವಾಸಿಗ ಆಕರ್ಷಣೆಯ ಕೇಂದ್ರವಾಗುವ ಆಶಾಭಾವನೆಯನ್ನು ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.ರೋಪ್-ವೇ ಸದ್ಯಕ್ಕಿಲ್ಲ, ಕೇಬಲ್ ಕಾರ್ ವ್ಯವಸ್ಥೆಗೆ ಚಿಂತನೆ

ಗಗನಚುಕ್ಕಿಯಲ್ಲಿ ರೋಪ್-ವೇ ನಿರ್ಮಾಣ ಯೋಜನೆಯನ್ನು ಸದ್ಯಕ್ಕೆ ಪಕ್ಕಕ್ಕಿಡಲಾಗಿದೆ. ಏಕೆಂದರೆ, ಎಲ್ಲಾ ಕಾಲದಲ್ಲೂ ರೋಪ್-ವೇ ಬಳಕೆಯಾಗುವುದಿಲ್ಲ. ಮಳೆಗಾಲದ ಮೂರು ತಿಂಗಳಲ್ಲಿ ಮಾತ್ರ ಪ್ರವಾಸಿಗರು ಲಭ್ಯವಿರುತ್ತಾರೆ. ಜೊತೆಗೆ ಈ ಕಡೆಯಿಂದ ರೋಪ್-ವೇ ಮೂಲಕ ಆ ಕಡೆ ಹೋದಾಗ ಬೇರೆ ಸ್ಥಳಕ್ಕೆ ಹೋಗುವುದಕ್ಕೆ ಅವಕಾಶವಿಲ್ಲ.. ಸಿಂಗಾಪೂರ್‌ನ ಕಂಪನಿಯವರು ಸ್ಥಳ ವೀಕ್ಷಣೆ ಮಾಡಿಕೊಂಡು ಹೋಗಿದ್ದಾರೆ. ಸದ್ಯಕ್ಕೆ ಆ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಸರ್ಕಾರದಿಂದಲೂ ಅದನ್ನು ಮಾಡಲಾಗುವುದಿಲ್ಲ. ಕೇಬಲ್ ಕಾರ್ ವ್ಯವಸ್ಥೆಗೆ ಚಿಂತನೆ ಮಾಡಲಾಗುತ್ತಿದೆ ಎಂದು ವಿವರಿಸಿದರು.೭೫ ಬಸ್‌ಗಳ ವ್ಯವಸ್ಥೆ

ಗಗನಚುಕ್ಕಿ ಜಲಪಾತೋತ್ಸವ ವೀಕ್ಷಣೆಗೆ ಬರುವವರಿಗೆ ೭೫ ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ೫೦ ಬಸ್‌ಗಳನ್ನು ಮಳವಳ್ಳಿಯಿಂದ ಮಲ್ಲಿಕ್ಯಾತನಹಳ್ಳಿವರೆಗೆ ಮತ್ತು ಅಲ್ಲಿಂದ ಗಗನಚುಕ್ಕಿಗೆ ೨೫ ಬಸ್‌ಗಳನ್ನು ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರವಾಸಿಗರಿಗೆ ೬೦ ಶೌಚಾಲಯ, ಶುದ್ಧ ಕುಡಿಯುವ ನೀರು, ೪೦ ಊಟದ ಕೌಂಟರ್‌ಗಳನ್ನು ತೆರೆಯಲಾಗಿದೆ.