ಅಹಂಕಾರದ ಕಸಕ್ಕೆ ಬೆಂಕಿ ಹಚ್ಚಿ ಸುಡಲೇಬೇಕು ತಾನೆ?

| Published : May 29 2024, 12:50 AM IST

ಸಾರಾಂಶ

ಏನೇ ಆರೋಪ ಮಾಡಿದರೂ ನಮ್ಮ ಉಸ್ತುವಾರಿ ಸಚಿವರು ಲಿಖಿತ ದೂರು ಸಲ್ಲಿಸಲು ಹೇಳುತ್ತಾರೆ. ನಾವು ದೂರು ಸಲ್ಲಿಸಿದರೂ ನಮ್ಮ ದೂರುಗಳು ಕಸದ ಬುಟ್ಟಿಗೆ ಹೋಗುತ್ತಿವೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಏನೇ ಆರೋಪ ಮಾಡಿದರೂ ನಮ್ಮ ಉಸ್ತುವಾರಿ ಸಚಿವರು ಲಿಖಿತ ದೂರು ಸಲ್ಲಿಸಲು ಹೇಳುತ್ತಾರೆ. ನಾವು ದೂರು ಸಲ್ಲಿಸಿದರೂ ನಮ್ಮ ದೂರುಗಳು ಕಸದ ಬುಟ್ಟಿಗೆ ಹೋಗುತ್ತಿವೆ. ಅದಕ್ಕಾಗಿ ಉಸ್ತುವಾರಿ ಸಚಿವರಿಗೆ ಕೇಳುತ್ತೇವೆ. ಈಗಲಾದರೂ ನಮ್ಮ ದೂರುಗಳನ್ನು ತಾವು ತನಿಖೆ ಒಳಪಡಿಸುವಂತೆ ಕೋರುತ್ತೇವೆಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಗೌರವಾಧ್ಯಕ್ಷ ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಯಾವುದೇ ಮಾತಿಗೂ ಪೂರ್ವಾಗ್ರಹ ಪೀಡಿತರಾಗಿ ಮಾತಾನಾಡುತ್ತಿದ್ದಾರೆ. ಮಾತನಾಡುವಲ್ಲಿ ಅವರಷ್ಟು ಕೀಳು ಮಟ್ಟಕ್ಕೆ ನಾವು ಹೋಗುವುದಿಲ್ಲ. ನಾನು ಮೈಮೇಲೆ ಎಣ್ಣೆ ಹಚ್ಚಿಕೊಂಡಿದ್ದೇನೆ ಎಂದು ಸಚಿವರೇ ಹೇಳುತ್ತಾರೆ. ಆ ಎಣ್ಣೆ ಆರಿ ಹೋಗುತ್ತದೆ. ಅವರು ಮೈಗೆ ಗ್ರೀಸ್ ಹಚ್ಚಿಕೊಂಡಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಮತ್ತೆ ಕಿಡಿಕಾರಿದರು.

ಸಚಿವ ಎಂ.ಬಿ. ಪಾಟೀಲ್ ಅವರಿಗೆ ನಾನೇ ಮಾತನಾಡಿದ್ದೇನೆ ಎಂದು ಅವರು ಹೇಳುತ್ತಾರೆ. ನಾವು ನಮ್ಮ ಶಾಸಕರಿಗೆ ಮಾತನಾಡುವುದಿಲ್ಲ, ಇನ್ನು ಎಂಬಿ ಪಾಟೀಲರಿಗೆ ಮಾತನಾಡೋದು ದೂರದ ಮಾತು ಎಂದು ಆಕ್ರೋಶ ಹೊರಹಾಕಿದರು.

ಸಚಿವ ಖರ್ಗೆಯವರು ನನಗೆ ಕಿಡಿ ಹಚ್ಚುವರು, ಬೆಂಕಿ ಹಚ್ಚುವುದು ಎಂದು ಹೇಳುತ್ತಾರೆ. ಎಲ್ಲಿ ಕಸ ಇರುತ್ತದೆಯೋ ಅಲ್ಲಿ ನಾವು ಬೆಂಕಿ ಹಚ್ಚುತ್ತೇವೆ. ಅಹಂಕಾರ, ದುರಹಂಕಾರಕ್ಕೆ ಬೆಂಕಿ ಹಚ್ಚುತ್ತೇವೆ. ಅದು ಒಳ್ಳೆಯದು. ನಮ್ಮ ಚಿಂತೆ ತೆಗೆದುಕೊಂಡು ಅವರೇನು ಮಾಡುತ್ತಾರೆ. ಊರು ಉಸಾಬರಿಗೆ ಮುಲ್ಲಾ ಸೊರಗಿದನಂತೆ. ನಾವು ಏಕೆ ಅವರನ್ನು ಕೇಳಿ ಹೋಗಬೇಕು. ನಾನು ಕಲಬುರ್ಗಿ ಜಿಲ್ಲೆ ಬಿಟ್ಟು ಹೋಗದಂತೆ ಆದೇಶವಾಗಿದೆ. ಇನ್ನೊಂದು ಆದೇಶ ಮಾಡಲಿ ಎಂದು ಅವರು ಸವಾಲು ಹಾಕಿದರು.

ನಮ್ಮ ಹೇಳಿಕೆಯಿಂದ ಸಮಾಜದಲ್ಲಿ ಅಶಾಂತಿ ಮೂಡುತ್ತದೆ, ಕಾನೂನು ಸುವ್ಯವಸ್ಥೆಗೆ ಭಂಗ ಬರುತ್ತದೆಂದು ಸಚಿವರು ಹೇಳುತ್ತಾರೆ, ಲಾಡಮುಗಳಿಯಲ್ಲಿ ಆತ್ಮಹತ್ಯೆ ನಾವು ಮಾಡಿದ್ದೇವೆಯೇ?, ಬೆತ್ತಲೆ ಮಾಡಿ ಅವಮಾನಿಸಿದ್ದು ನಾವೇ ಮಾಡಿದೆವೆಯಾ?, ಕೋಟನೂರಲ್ಲಿ ಮನೆ ಹೊಕ್ಕು ಹೊಡೆದ ಘಟನೆಗೆ ಕಾರಣರು ಯಾರು? ನಮ್ಮ ಹೇಳಿಕೆ ಆಧರಿಸಿ ಕೋಮು ಗಲಭೆ ಎಲ್ಲಿ ಆಗಿದೆ ಹೇಳಲಿ? ಎಂದು ಪ್ರಶ್ನಿಸಿದರು.

ನನ್ನ ಮಾತಿಗೆ ಎಲ್ಲಿ ಕೋಮು ಗಲಭೆ ಆಗಿದೆ ಎಲ್ಲಿದೆ ಹೇಳಿ, 49, 39 ಪ್ರಕರಣಗಳು ನನ್ನ ಮೇಲೆ ಇವೆ ಎಂದು ಹೇಳುತ್ತಾರೆ. ಜವಾಬ್ದಾರಿಯಲ್ಲಿರುವ ಸಚಿವರು ಸರಿಯಾದ ಮಾಹಿತಿ ಪಡೆದುಕೊಂಡು ಪ್ರಜೆಗಳಿಗೆ ತಲುಪಿಸಬೇಕು. ಸರಿಯಾದ ಮಾಹಿತಿ ಇಲ್ಲ. ಜನರಿಗೆ ತಪ್ಪು ಸಂದೇಶ ಕೊಡುವುದು ಅಪರಾಧ. ಕೇವಲ ದೊಡ್ಡ ಸಭೆಯಲ್ಲಿ ಮಾಡಿದರೆ ಪ್ರಚೋದನೆ. ಸುದ್ದಿಗೋಷ್ಠಿಯಲ್ಲಿ ಪ್ರಚೋದನೆ ಮಾಡುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದರು.

ಅಲ್ಲೂರ್ ಗ್ರಾಮದಲ್ಲಿ ಚರಂಡಿ ನೀರು ಮನೆಗಳಿಗೆ ಹೋಗಿದೆ. ಅಲ್ಲಿಗೆ ಕ್ಷೇತ್ರದ ಶಾಸಕರಾಗಿರುವ ಜಿಲ್ಲಾ ಉಸ್ತುವಾರಿ ಸಚಿವರು ಹೋಗಿಲ್ಲ. ಬಿಜೆಪಿಯವರಿಗೆ ತಾವೇ ಮನೆದೇವರು ಎನ್ನುತ್ತಾರೆ. ನನ್ನ ಹೆಸರು ತೆಗೆದುಕೊಳ್ಳದಿದ್ದರೆ ಅವರಿಗೆ ಸಮಾಧಾನ ಇಲ್ಲ ಎಂದು ಶ್ರೀಗಳು ಸಚಿವ ಖರ್ಗೆಯವರಿಗೆ ತೀವ್ರ ತರಾಟೆಗೆ ತೆಗೆದುಕೊಂಡರು.

ಒಬ್ಬ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಖಾತೆಯ ಸಚಿವರಾಗಿ ಮಾದರಿ ಗ್ರಾಮಗಳನ್ನಾಗಿ ಮಾಡಿ ತೋರಿಸಿ, ಬಯಲು ಶೌಚ ಮುಕ್ತ ಮಾಡಿ ತೋರಿಸಲಿ. ಇಂತಹ ಪ್ರಗತಿಪರ ಮಾತನ್ನಾಡಲಿ. ಅದನ್ನೆಲ್ಲ ಬಿಟ್ಟು ಅವರಿಗೆ ಬೈದೆ, ಇವರಿಗೆ ಬೈದೆ, ಒದ್ದು ಒಳಗೆ ಹಾಕಿ ಇದನ್ನೇ ಮಾಡುತ್ತಾರೆ. ಹತ್ತು ಗ್ರಾಮಗಳನ್ನು ಮಾದರಿಯನ್ನಾಗಿ ಮಾಡಿದ್ದೇನೆ. ಶುದ್ಧ ಕುಡಿಯುವ ನೀರು ಕೊಟ್ಟಿದ್ದೇನೆ ಎಂಬುದರ ಕುರಿತು ಹೇಳಲಿ. ಜಲಜೀವನ್ ಮಿಷನ್ ಕಾರ್ಯಕ್ರಮ ಪೂರ್ಣಗೊಂಡಿಲ್ಲ ಎಂದು ಸಚಿವರ ಕಾರ್ಯವೈಖರಿಯ ಕುರಿತು ಅಸಮಾಧಾನ ಹೊರಹಾಕಿದರು.

ಜನಮನದಲ್ಲಿ ನಮ್ಮ ಬಗ್ಗೆ ಗೌರವ ತಗ್ಗಿಸಲು, ನಮ್ಮ ವರ್ಚಿಸ್ಸಿಗೆ ಧಕ್ಕೆ ತರಲು ಸಚಿವರು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಪ್ರಶ್ನಾತೀತ ನಾಯಕರಾಗಲು ಹೊರಟಿದ್ದಾರೆ. ನಿಂದಿಸುವುದನ್ನು ಸಹ ತಾಳ್ಮೆಯಿಂದ ಕೇಳಬೇಕು. ಅವರ ಮಟ್ಟಕ್ಕೆ ಇಳಿದು ಮಾತನಾಡಲು ನನಗೆ ಆಗುವುದಿಲ್ಲ ಎಂದರು.

ಅವಹೇಳನಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದಿಲ್ಲ. ಆದಾಗ್ಯೂ, ಸಚಿವ ಖರ್ಗೆ ಅವರು ಆಂದೋಲಾ ಸ್ವಾಮಿ ಎಂದು ಅವರೇ ಮಾತನಾಡುತ್ತಾರೆ. ಈಗ ನಾನು ಹೇಳ್ತಿನಿ ಇಷ್ಟು ಸಣ್ಣ ಮಟ್ಟದಲ್ಲಿ ವಿಚಾರ ಮಾಡುತ್ತೀರಿ. ಮುಖ್ಯಮಂತ್ರಿ, ಗೃಹ ಸಚಿವರಿಗೆ ಟೀಕೆ ಸಾಮಾನ್ಯ. ಸಿದ್ಧರಾಮಯ್ಯ ಎಂದರೆ ಯಾರು ಎಂಬುದು ಬೇಕಲ್ಲ. ಮುಖ್ಯಮಂತ್ರಿಗಳ ಮೇಲೆ ಗೌರವ ಇದೆ. ಅವರು ನಾನು ಅವರನ್ನೇ ನಿಂದಿಸಿದ್ದೇನೆಂದು ಆ ರೀತಿ ಅಂದುಕೊಳ್ಳಬಾರದು ಎಂದು ಮಾತಲ್ಲೇ ಶ್ರೀಗಳು ಛೇಡಿಸಿದರು.