ಸಾರಾಂಶ
ಕನ್ನಡಪ್ರಭ ವಾರ್ತೆ ನಾಲತವಾಡ
ಪೋಕ್ಸೊ ಪ್ರಕರಣ ದಾಖಲಿಸಿದಳೆಂಬ ಕಾರಣಕ್ಕೆ ಆರೋಪಿಗಳು ಜೀವ ಬೆದರಿಕೆ ಹಾಕಿದ್ದರಿಂದ ಮನನೊಂದ ಅಪ್ರಾಪ್ತ ಬಾಲಕಿಯು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಅಪ್ರಾಪ್ತ ಸೇರಿದಂತೆ ಒಟ್ಟು ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ.ಮುದ್ದೇಬಿಹಾಳ ತಾಲೂಕಿನ ನಾಲತವಾಡದ ಸಂಗಮೇಶ ಜುಂಜವಾರ, ಚಿದಾನಂದ ಕಟ್ಟಿಮನಿ ಮತ್ತು ಮತ್ತೊಬ್ಬ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಮೂವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಮನೆಯಲ್ಲಿ ತಾಯಿ ಮತ್ತು ಮಗಳು ಇಬ್ಬರೆ ಇದ್ದರು. ಮಂಗಳವಾರ ಬೆಳಗ್ಗೆ ತಾಯಿ ಹೊರಗೆ ಹೋದ ಮೇಲೆ ವಿದ್ಯಾರ್ಥಿನಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಹೊರಗೆ ಹೋಗಿದ್ದ ತಾಯಿ ಮನೆಗೆ ಬಂದು ನೋಡಿದಾಗ ಮಗಳು ನೇಣಿಗೆ ಶರಣಾಗಿರುವುದನ್ನು ಕಂಡು ಆಘಾತಗೊಂಡಿದ್ದಾಳೆ. ಈ ವೇಳೆ ಬಾಲಕಿಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ನಂತರ ಈ ವಿಚಾರ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಾಗೇವಾಡಿ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಮುದ್ದೇಬಿಹಾಳ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸೈ ಸಂಜೀವ ತಿಪ್ಪಾರೆಡ್ಡಿ, ಆರ್.ಎಲ್.ಮನ್ನಾಬಾಯಿ ಪೊಲೀಸ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.ಏನಿದು ಪ್ರಕರಣ?:
ಆತ್ಮಹತ್ಯೆ ಮಾಡಿಕೊಂಡ ಬಾಲಕಿ ನಾಲತವಾಡದ ಶಾಲೆಯೊಂದರಲ್ಲಿ 10ನೇ ತರಗತಿ ಓದುತ್ತಿದ್ದಳು. ಈಕೆಯನ್ನು ಆರೋಪಿ ಸಂಗಮೇಶ ಜುಂಜಾವರ ಪದೇ ಪದೇ ಬೆನ್ನುಹತ್ತಿದ್ದ. ಅಪ್ರಾಪ್ತೆಯ ಹಿಂದೆ ಬಂದು ಅವಳನ್ನು ನೋಡುವುದು, ನಗುವುದು ಮಾತನಾಡುವುದು ಮಾಡುತ್ತಾ ಅವಳ ಮೈ ಕೈ ಮುಟ್ಟಿ ಲೈಂಗಿಕ ಕಿರುಕುಳ ಕೊಡುತ್ತಿದ್ದ. ನಂತರ ಈ ವಿಚಾರವನ್ನು ಬಾಲಕಿಯು ತನ್ನ ತಾಯಿ ಮತ್ತು ದೊಡ್ಡಪ್ಪನ ಮಕ್ಕಳಿಗೆ ಹೇಳಿದ್ದಾಳೆ. ಆಗ ಇವರೆಲ್ಲರೂ ಆರೋಪಿ ಸಂಗಮೇಶ ಜುಂಜಾವರ ಮನೆಗೆ ಹೋಗಿ ಆಕೆಯ ತಂಟೆಗೆ ಬಾರದಂತೆ ಬುದ್ಧಿವಾದ ಹೇಳಿದ್ದಾರೆ.ಇಷ್ಟಕ್ಕೆ ಸುಮ್ಮನಾಗದ ಸಂಗಮೇಶ ಜುಂಜಾವರ ತನ್ನ ಸ್ನೇಹಿತರನ್ನು ಕರೆದುಕೊಂಡು ಬಾಲಕಿಯ ಮನೆಗೆ ಹೋಗಿ, ಅವಾಚ್ಯವಾಗಿ ಬೈದು ಗಲಾಟೆ ಮಾಡಿದ್ದಾನೆ. ಇದರಿಂದ ಸಿಟ್ಟಿಗೆದ್ದ ಬಾಲಕಿಯು ಆರು ಜನರ ವಿರುದ್ಧ ಮುದ್ದೇಬಿಹಾಳ ಪೊಲೀಸ್ ಠಾಣೆಗೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾಳೆ. ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ಸಂಗಮೇಶ ಜುಂಜಾವರ ಮತ್ತು ಅವರ ಮನೆಯವರು ಬಾಲಕಿಗೆ ಹೇಗೆ ಬದುಕುತ್ತಿಯಾ ನೋಡುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಇದರಿಂದ ಜೀವ ಭಯದಲ್ಲಿಯೇ ಬಾಲಕಿಯು ನೇಣಿಗೆ ಶರಣಾಗಿದ್ದಾಳೆ ಎಂದು ಪ್ರಕರಣ ದಾಖಲಾಗಿದೆ.
ಜೀವಾವಧಿ ಶಿಕ್ಷೆಗೆ ಆಗ್ರಹ:ಅಪಾರ ಕನಸು ಕಂಡಿದ್ದ ಬಾಲಕಿ ಜೀವನ ಹಾಳು ಮಾಡಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಶಾಲೆಗೆ ಹೋಗುವ ಸಂದರ್ಭದಲ್ಲಿ ಪ್ರೀತಿಸುವಂತೆ ಆರೋಪಿಗಳು ಪೀಡಿಸಿದ್ದಾರೆ. ನಾಲತವಾಡದಲ್ಲಿ ಇದೊಂದು ದೊಡ್ಡ ಗ್ಯಾಂಗ್ ಇದೆ. ಗಾಂಜಾ ಹಾಗೂ ಡ್ರಗ್ಸ್ ವ್ಯಸನಿಗಳಾಗಿದ್ದು, ಬಾಲಕಿಯರ ಹಿಂದೆ ಬಿದ್ದು ಅವರ ಭವಿಷ್ಯ ಹಾಳು ಮಾಡುತ್ತಿದ್ದಾರೆ. ಇಂದು ನಮ್ಮ ಮನೆ ಬಾಲಕಿಗೆ ಈ ಪರಿಸ್ಥಿತಿ ಬಂದಿದ್ದು, ಮುಂದೆ ಬೇರೆ ಹಣ್ಣು ಮಕ್ಕಳಿಗೆ ಈ ಪರಿಸ್ಥಿತಿ ಬರಬಹುದು. ಈ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಮೃತಳ ಸೋದರ ಸಂಬಂಧಿ ಪರಶುರಾಮ ಹಳ್ಳಿ ಆಗ್ರಹಿಸಿದ್ದಾರೆ.
---------------ಬಾಕ್ಸ್....
ಅಪ್ರಾಪ್ತೆ ಬಾಲಕಿಗೆ ತಾಳಿ ಕಟ್ಟಿದ್ದ ದುರುಳರು!ಅಪ್ರಾಪ್ತ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಆರೋಪಿಗಳಾದ ಸಂಗಮೇಶ ಮತ್ತು ಮೌನೇಶ ವಿರುದ್ಧ ಇತ್ತೀಚೆಗಷ್ಟೇ ಬಾಲಕಿಗೆ ಬಲವಂತವಾಗಿ ತಾಳಿ ಕಟ್ಟಿದ ಮತ್ತೊಂದು ಪೋಕ್ಸೊ ಪ್ರಕರಣ ಕೂಡ ದಾಖಲಾಗಿತ್ತು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರ್ಕಾರಿ ವಸತಿ ಶಾಲೆಯೊಂದರ ಅಪ್ರಾಪ್ತ ವಿದ್ಯಾರ್ಥಿನಿಗೆ ಮೌನೇಶ ಮಾದರ ಎಂಬಾತ ಬಲವಂತವಾಗಿ ತಾಳಿ ಕಟ್ಟಿ ಮದುವೆಯಾಗಲು ಯತ್ನಿಸಿದ್ದಾನೆ. ಅಲ್ಲದೇ, ಅದರ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದ. ಈ ಕುರಿತು 2024, ನ.28ರಂದು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಆ ಅಪ್ರಾಪ್ತೆ ಕೂಡ ಪೋಕ್ಸೋ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಳು. ಈ ಪ್ರಕರಣದಲ್ಲಿಯೂ ಮೌನೇಶ ಹಾಗೂ ಸಂಗಮೇಶ ಜುಂಜವಾರ ಇಬ್ಬರೂ ಆರೋಪಿಗಳಾಗಿದ್ದಾರೆ.