ವಿಜೃಂಭಣೆಯ ಅವ್ವೇರಹಳ್ಳಿ ರೇ‍ವಣಸಿದ್ದೇಶ್ವರ ರಥೋತ್ಸವ

| Published : May 13 2025, 01:17 AM IST

ಸಾರಾಂಶ

ರಾಮನಗರ: ತಾಲೂಕಿನ ಪ್ರಸಿದ್ಧ ಪ್ರವಾಸಿತಾಣ ಅವ್ವೇರಹಳ್ಳಿ ರೇವಣಸಿದ್ದೇಶ್ವರ ರಥೋತ್ಸವ ಸೋಮವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ರಾಮನಗರ: ತಾಲೂಕಿನ ಪ್ರಸಿದ್ಧ ಪ್ರವಾಸಿತಾಣ ಅವ್ವೇರಹಳ್ಳಿ ರೇವಣಸಿದ್ದೇಶ್ವರ ರಥೋತ್ಸವ ಸೋಮವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ರಥೋತ್ಸವವಕ್ಕೂ ಮುನ್ನ ಬೆಳಿಗ್ಗೆ 7 ಗಂಟೆಗೆ ಬಸವೇಶ್ವರಸ್ವಾಮಿಯ ಅಗ್ನಿಕೊಂಡ ನೆರವೇರಿತು. ಶ್ರೀಯವರ ದೇವಾಲಯದಲ್ಲಿ ಮತ್ತು ಭೀಮೇಶ್ವರ ದೇವಾಲಯ, ರೇಣುಕಾಂಭ ಅಮ್ಮನವರ ದೇವಾಲಯದಲ್ಲಿ ವಿಶೇಷ ಪೂಜೆ, ವಿಶೇಷ ಅಲಂಕಾರ, ರುದ್ರಾಭಿಷೇಕ ನೆರವೇರಿತು. ಮಧ್ಯಾಹ್ನ 12 ಗಂಟೆಗೆ ರೇವಣಸಿದ್ದೇಶ್ವರಸ್ವಾಮಿ ಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳ ಸಮೇತ ತಂದು ರಥೋತ್ಸವದಲ್ಲಿ ಇರಿಸಲಾಯಿತು.

ಶೃಂಗಾರಗೊಂಡಿದ್ದ ರಥಕ್ಕೆ ಅರ್ಚಕರು ಪೂಜಾ ವಿಧಿ ವಿಧಾನ ಪೂರೈಸಿದ ಬಳಿಕ ಗಣ್ಯರು ಅದ್ಧೂರಿ ರಥೋತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ದಾಸೋಹ ಮಠದ ಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ಶಾಸಕ ಇಕ್ಬಾಲ್ ಹುಸೇನ್, ಮಾಜಿ ಶಾಸಕ ಕೆ.ರಾಜು, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಉಪವಿಭಾಗಾಧಿಕಾರಿ ಬಿನೋಯ್, ತಹಸೀಲ್ದಾರ್ ತೇಜಸ್ವಿನಿ, ಧಾರ್ಮಿಕ ದತ್ತಿ ತಹಸೀಲ್ದಾರ್ ಮೊಹಮ್ಮದ್ ಜಿಶಾನ್ ಆಲಿಖಾನ್, ಗ್ರಾಪಂ ಅಧ್ಯಕ್ಷ ಗಿರೀಶ್ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಭಕ್ತರು ರಥಕ್ಕೆ ಹೂವು, ಹಣ್ಣು, ಜವನ ಎಸೆದು, ಜೈ ರೇವಣಸಿದ್ದೇಶ್ವರ, ಜೈ ಜೈ ರೇವಣಸಿದ್ದೇಶ್ವರ ಎಂದು ಜೈಕಾರ ಹಾಕುತ್ತಾ ಜನಪದ ಕಲಾ ಮೇಳದೊಡನೆ ಹೆಜ್ಜೆ ಹಾಕುತ್ತಾ ಸಂಭ್ರಮದಿಂದ ರಥ ಎಳೆದು ಕೃತಾರ್ಥರಾದರು. ಸ್ಥಳದಲ್ಲಿ ಆಂಬುಲೆನ್ಸ್, ಅಗ್ನಿಶಾಮಕ ವಾಹನ, ವೈದ್ಯರು ಸೇವೆ ಒದಗಿಸಲಾಗಿತ್ತು. ರಾಮನಗರ ಗ್ರಾಮಾಂತರ ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.

ರೇವಣಸಿದ್ದೇಶ್ವರಸ್ವಾಮಿ ಅಭಿವೃಧ್ಧಿ ಸೇವಾ ಟ್ರಸ್ಟ್ ಮತ್ತು ಶ್ರೀ ರೇವಣಸಿದ್ದೇಶ್ವರ ಬೆಟ್ಟದ ದಾಸೋಹ ಮಠದಲ್ಲಿ ಬಸವಲಿಂಗರಾಜ ಸ್ವಾಮೀಜಿ, ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಕೆಜಿ ಹೊಸಹಳ್ಳಿ ಗ್ರಾಮಸ್ಥರಿಂದ ಬೃಹತ್ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಭಕ್ತರು ಅಲ್ಲಲ್ಲಿ ಅರವಂಟಿಗೆ ನಡೆಸಿದರು. ವಿಶೇಷವಾಗಿ ಅವರೆಕಾಳು ಸಾರು,ಮುದ್ದೆ ಊಟ ಕಂಡುಬಂದಿತು.

ರಥ ಬರುವ ಸಂದರ್ಭದಲ್ಲಿ ರಥ ಬೀದಿಯಲ್ಲಿ ಭಕ್ತರು ಮಜ್ಜಿಗೆ, ಪಾನಕ ಕೋಸಂಬರಿ ಹಂಚಿ ಭಕ್ತರ ಬಾಯಾರಿಕೆ ನೀಗಿಸಿದರು. ಹುಲಿಕೆರೆ-ಗುನ್ನೂರು ವತಿಯಿಂದ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಿ ಸ್ವಚ್ಛತೆಗೆ ಆದ್ಯತೆ ನೀಡಿದ್ದರು. ರೇವಣಸಿದ್ದೇಶ್ವರಸ್ವಾಮಿ ಅಭಿವೃಧ್ಧಿ ಸೇವಾ ಟ್ರಸ್ಟ್ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆ ಗಮನ ಸೆಳೆಯಿತು. ಉತ್ತಮ ರಂಗೋಲಿ ಹಾಕಿ ಗಮನ ಸೆಳೆದ ರಂಗೋಲಿಗಳಿಗೆ ಬಹುಮಾನ ವಿತರಿಸಲಾಯಿತು.

ರಥದ ಮೆರವಣಿಗೆಯಲ್ಲಿ ಡೊಳ್ಳು, ಪೂಜಾ ಕುಣಿತ, ತಮಟೆ ವಾದನ, ವೀರಗಾಸೆ, ನಂದೀಧ್ವಜ ಕುಣಿತ ರಥೋತ್ಸವಕ್ಕೆ ವಿಶೇಷ ಮೆರಗನ್ನು ತಂದುಕೊಟ್ಟವು. ಜಾತ್ರೆಗೆ ಹೆಚ್ಚಿನ ಜನರು ಆಗಮಿಸಿದ್ದ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪೊಲೀಸರು ಮತ್ತು ಸಾರ್ವಜನಿಕರು ಒಂದಷ್ಟು ಸಮಯ ವಾಹನ ದಟ್ಟನೆ ನಿಯಂತ್ರಿಸಲು ಮುಂದಾದರು.

ಜಾತ್ರೆಯ ಬೀದಿ ಬೀದಿಗಳಲ್ಲಿ ಮಕ್ಕಳ ಆಟಿಕೆ, ಕಡ್ಲೆಪುರಿ, ಸಹಿತಿಂಡಿ, ಐಸ್‌ಕ್ರೀಂ, ಕಬ್ಬಿನ ಜೂಸ್, ಚಾಟ್ಸ್ ಸೆಂಟರ್ ಅಂಗಡಿಗಳು ಗಮನ ಸೆಳೆದವು.

-----------------------------

ಕೋಟ್‌.............

ಶ್ರೀ ರೇವಣಸಿದ್ದೇಶ್ವರಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನೆರವೇರುತ್ತಿರುವುದು ಸಂತೋಷ ತಂದಿದೆ. ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಶ್ರೀಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಈಗಾಗಲೇ ಶಾಸಕ ಇಕ್ಬಾಲ್ ಹುಸೇನ್ 2 ಕೋಟಿ ಬಿಡುಗಡೆ ಮಾಡಿದ್ದು, ಇನ್ನೂ 4 ಕೋಟಿ ಬಿಡುಗಡೆ ಮಾಡಿಸುವ ಭರವಸೆ ನೀಡಿದ್ದಾರೆ.

- ಗಿರೀಶ್, ಅಧ್ಯಕ್ಷರು, ಹುಲಿಕೆರೆ ಗುನ್ನೂರು ಗ್ರಾಪಂ

----------------------------------------------------

ಬಾಕ್ಸ್‌.................

ಲಿಫ್ಟ್ ನಿರ್ಮಾಣಕ್ಕಾಗಿ 4 ಕೋಟಿ ಬಿಡುಗಡೆಗೆ ಕ್ರಮ

ರಾಮನಗರ: ಶ್ರೀ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಭಕ್ತರ ಅನುಕೂಲಕ್ಕಾಗಿ ಲಿಫ್ಟ್ ನಿರ್ಮಾಣ ಮಾಡಲು ರಾಜ್ಯ ಸರ್ಕಾರದಿಂದ 4 ಕೋಟಿ ಅನುದಾನ ಬಿಡುಗಡೆ ಮಾಡಿಸುವುದಾಗಿ ಶಾಸಕ ಇಕ್ಬಾಲ್ ಹುಸೇನ್ ಭರವಸೆ ನೀಡಿದರು.

ತಾಲೂಕಿನ ಪ್ರಸಿದ್ಧ ಪ್ರವಾಸಿತಾಣ ಅವ್ವೇರಹಳ್ಳಿ ರೇವಣಸಿದ್ದೇಶ್ವರ ರಥೋತ್ಸವದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಲಿಫ್ಟ್ ನಿರ್ಮಾಣಕ್ಕಾಗಿ 2 ಕೋಟಿ ರು. ಅನುದಾನ ಬಿಡುಗಡೆಯಾಗಿದೆ. ಮಠದಿಂದ ಇನ್ನೂ 2 ಕೋಟಿ ರು.ಗಳಿಗೆ ಬೇಡಿಕೆ ಇಟ್ಟಿದ್ದು, ಆ ಹಣವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸುವುದಾಗಿ ತಿಳಿಸಿದರು.

ರೇವಣಸಿದ್ದೇಶ್ವರ ಬೆಟ್ಟ ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಪ್ರತಿವರ್ಷ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದ್ದೇವೆ. ಇಲ್ಲಿಗೆ ಸಹಸ್ರಾರು ಜನರು ಆಗಮಿಸುತ್ತಾರೆ. ಭಕ್ತರಿಗೆ ಬೆಟ್ಟದ ಮೇಲೆ ತೆರಳಲು ಸಾಧ್ಯವಾಗುತ್ತಿಲ್ಲ. ಅವರ ಅನುಕೂಲಕ್ಕಾಗಿ ಲಿಫ್ಟ್ ಅವಶ್ಯಕತೆ ಇದೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.

12ಕೆಆರ್ ಎಂಎನ್ 3.ಜೆಪಿಜಿ

ರಾಮನಗರ ತಾಲೂಕಿನ ಪ್ರಸಿದ್ಧ ಪ್ರವಾಸಿತಾಣ ಅವ್ವೇರಹಳ್ಳಿ ರೇವಣಸಿದ್ದೇಶ್ವರ ರಥೋತ್ಸವ ಸೋಮವಾರ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

---------------------------------