ಚಾಲುಕ್ಯರ ನಾಡಿನ ಆರಾಧ್ಯ ದೇವತೆ ಉತ್ತರ ಕರ್ನಾಟಕ ಭಾಗದಲ್ಲಿ ಅಧಿದೇವತೆ ಎನಿಸಿಕೊಂಡಿರುವ, ರಾಜ್ಯ, ಹೊರ ರಾಜ್ಯಗಳಲ್ಲಿ ಕೋಟ್ಯಂತರ ಭಕ್ತರನ್ನು ಹೊಂದಿರುವ ಆದಿಶಕ್ತಿ ಬಾದಾಮಿ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ ಶನಿವಾರ ಸಂಜೆ ಗೋಧೂಳಿ ಸಮಯದಲ್ಲಿ ಲಕ್ಷಾಂತರ ಭಕ್ತರು ಜಯ ಘೋಷಗಳ ಮಧ್ಯೆ ವಿಜೃಂಭಣೆಯಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಬಾದಾಮಿ

ಚಾಲುಕ್ಯರ ನಾಡಿನ ಆರಾಧ್ಯ ದೇವತೆ ಉತ್ತರ ಕರ್ನಾಟಕ ಭಾಗದಲ್ಲಿ ಅಧಿದೇವತೆ ಎನಿಸಿಕೊಂಡಿರುವ, ರಾಜ್ಯ, ಹೊರ ರಾಜ್ಯಗಳಲ್ಲಿ ಕೋಟ್ಯಂತರ ಭಕ್ತರನ್ನು ಹೊಂದಿರುವ ಆದಿಶಕ್ತಿ ಬಾದಾಮಿ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ ಶನಿವಾರ ಸಂಜೆ ಗೋಧೂಳಿ ಸಮಯದಲ್ಲಿ ಲಕ್ಷಾಂತರ ಭಕ್ತರು ಜಯ ಘೋಷಗಳ ಮಧ್ಯೆ ವಿಜೃಂಭಣೆಯಿಂದ ಜರುಗಿತು.

ರಥೋತ್ಸವದಲ್ಲಿ ಪಾಲ್ಗೊಂಡು ಉತ್ತತ್ತಿ, ಹಣ್ಣು ಹೂವು ಸಮರ್ಪಿಸುವುದರ ಮೂಲಕ ದೇವಿಯ ಕೃಪೆಗೆ ಪಾತ್ರರಾದರು.

ನಿರಂತರ ಒಂದು ತಿಂಗಳ ಕಾಲ ಜರುಗುವ ಜಾತ್ರೆ ಸವಿಯೇ ವಿಶಿಷ್ಟವಾದುದು.

ಇದಕ್ಕೆ ಸೇರಿದ್ದ ಸಹಸ್ರಾರು ಭಕ್ತರು ಸಾಕ್ಷಿಯಾಗಿ ಧನ್ಯತಾಭಾವ ಮೆರೆದರು. ಬನಶಂಕರಿ ದೇವಿ ಗುಡಿಯ ಪೂಜಾರ ಮನೆತನದವರಿಂದ ಬೆಳಗ್ಗೆ ವಿಶೇಷ ಪೂಜೆ-ಪುನಸ್ಕಾರಗಳೊಂದಿಗೆ ವಿವಿಧ ಪೂಜಾ ಕೈಂಕರ್ಯ ಮತ್ತು ರಥಾಂಗ ಹೋಮ ನಡೆದು, ಸಂಜೆ 5 ಗಂಟೆಯ ಹೊತ್ತಿಗೆ ಸಹಸ್ರಾರು ಭಕ್ತರು ದೇವಿಯ ನಾವಸ್ಮರಣೆಯೊಂದಿಗೆ ರಥ ಎಳೆದು ಹೂವು, ಹಣ್ಣುಕಾಯಿ ಅರ್ಪಿಸುವ ಮೂಲಕ ರಥೋತ್ಸವ ಸಾಂಗವಾಗಿ ನೇರವೇರಿಸಿ ಬನದ ಸಿರಿಯಲ್ಲಿ ಜಾತ್ರೆಯ ಐಸಿರಿ ಸೊಬಗು ಬಿಂಬಿಸಿತು.

ಇದಕ್ಕಾಗಿ ಗದಗ ಜಿಲ್ಲೆಯ ರೋಣ ತಾಲೂಕಿನ ಮಾಡಲಗೇರಿ ಗ್ರಾಮದ ಭಕ್ತರು ಧಾರ್ಮಿಕ ಪದ್ಧತಿಯಂತೆ ದೇವಿ ತೇರಿನ ಹಗ್ಗ ಶೃಂಗರಿಸಿದ್ದ ಹಳ್ಳಿ ಬಂಡಿಯಲ್ಲಿ ಕಾಲ್ನಡಿಗೆ ಮೂಲಕ ತೆಗೆದುಕೊಂಡು ಬಂದು ರಥೋತ್ಸವಕ್ಕೆ ಸಮರ್ಪಿಸಿದರು.

ಬನಶಂಕರಿಯ ಸ್ಥಳದಲ್ಲಿ ಕಿಕ್ಕಿರಿದು ತುಂಬಿದ್ದ ಭಕ್ತರ ಕಂಠದಿಂದ ಹೊರಬಂದ ಜಯಘೋಷಗಳ ಮುಗಿಲು ಮುಟ್ಟುವಂತಿತ್ತು. ಹೂವು, ಹಣ್ಣು, ಕಾಯಿ, ಕರುಪರ ಅರ್ಪಿಸುವುದರ ಜೊತೆಗೆ ಬಾಳೆಹಣ್ಣು, ಉತ್ತತ್ತಿ ರಥೋತ್ಸವದಲ್ಲಿ ತೂರಿ ಭಕ್ತಿಭಾವ ಮೆರೆದರು.

ಬನದೇವಿ, ಶಾಖಾಂಬರಿ ಎಂತಲೂ ಕರೆಯಿಸಿಕೊಳ್ಳುವ ಬನಶಂಕರಿದೇವಿ ಬನಗಳ ಮಧ್ಯೆ ಇರುವ ದೇವತೆ. ತುಂಬಾ ನಯನ ಮನೋಹರವಾದ ಪರಿಸರದಲ್ಲಿರುವ ಜಾತ್ರಾ ನಿಮಿತ್ತ ವಿದ್ಯುತ್‌ ದೀಪಗಳಿಂದ ಅಲಂಕಾರಗೊಂಡಿದ್ದ ದೇವಾಲಯ ನೋಡುಗರ ಕಣ್ಮನ ಸೆಳೆಯಿತು.

ಎಲ್ಲ ಜಾತಿ-ಜನಾಂಗದ ಆರಾಧ್ಯ ದೇವತೆ ಬನಶಂಕರಿ: ಡಿ.30ರಂದು ನವರಾತ್ರಿ ಘಟಸ್ಥಾಪನೆ ಹಾಕುವುದರ ಮೂಲಕ ಜಾತ್ರಾ ಮಹೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಗಿತ್ತು, ಶನಿವಾರ ರಥೋತ್ಸವ ನಡೆದು ಡಿ.7ರಂದು ಕಳಸ ಇಳಿಸುವುದು. ಪೌಷ್ಯ ಬಹುಳ ಅಷ್ಟಮಿ ಜರುಗಲಿದ್ದು, ಲೋಕ ಕಲ್ಯಾಣಾರ್ಥವಾಗಿ ಪ್ರತಿನಿತ್ಯ ವೇದ ಪಾರಾಯಣ ಸಪ್ತಶತಿ ಪಾರಾಯಣ ಸೇರಿದಂತೆ ಇನ್ನಿತರ ಕಾರ್ಯಕ್ರಮ ಜರುಗಲಿವೆ.

ಜನರ ಆಡು ಭಾಷೆಯಲ್ಲಿ ಶಂಕರಿ ಜಾತ್ರೆಯಾಗಿ ಪರಿಣಮಿಸಿರುವ ಈ ಜಾತ್ರೆಗೆಂದು ಸಾವಿರಾರು ಜನರು ಬಂದು ಒಂದೆಡೆ ಸೇರಿದ್ದು, ನಿಜಕ್ಕೂ ಕೂಡು ಕುಟುಂಬದ ಸಂಭ್ರಮದಂತಿತ್ತು.

ಆಕರ್ಷಣೆ: ಬೆಳ್ಳಂಬೆಳಗು ಪ್ರದರ್ಶಿಸುವ ನಾಟಕ ಕಂಪನಿಗಳು ಬೇರೆ, ಬೇರೆ ಊರುಗಳಿಂದ ಬಳೆ ವ್ಯಾಪಾರಿಗಳು ಬಂದು, ಈ ಜಾತ್ರೆಯಲ್ಲಿ ದೊಡ್ಡದಾದ ಬಳೆಯ ಮಳಿಗೆಯನ್ನೇ ಸೃಷ್ಟಿ ಮಾಡಿದ್ದಾರೆ. ಅಲ್ಲಿರುವ ವಿವಿಧ ತರಹದ ಬಳೆಗಳನ್ನು ನೋಡುವುದೇ ಹೆಣ್ಣು ವಕ್ಕಳಿಗೊಂದು ಸಂಭ್ರಮ. ಅದರಂತೆ ಅರಿಷಿಣ-ಕುಂಕುಮ ಸಾಲು ಅಂಗಡಿಗಳು ಜಾತ್ರೆಗೊಂದು ಕಳೆ ತಂದು ಕೊಟ್ಟಿದ್ದವು.

ದೇವಿ ಸನ್ನಿಧಾನಕ್ಕೆ ಬರುವ ಜನ ಬಳೆ, ಕುಂಕುಮ ತೆಗೆದುಕೊಂಡು ಜಾತ್ರೆಯ ಸವಿ ನೆನಪಿನಲ್ಲಿ ತಮ್ಮೂರಿಗೆ ಸಾಗಿ ಆ ಸವಿ ಎಲ್ಲರಿಗೂ ಹಂಚುತ್ತಾರೆ. ರಥೋತ್ಸವ ಚುನಾಯಿತ ಪ್ರತಿನಿಧಿಗಳು, ಗಣ್ಯರು, ಅಧಿಕಾರಿಗಳು ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗಹಿಸಿದ್ದರು.

ಪೊಲೀಸ್‌ ಬಂದೋಬಸ್ತ್‌ : ಬಾದಾಮಿಯಿಂದ ಬನಶಂಕರಿವರೆಗೂ ರಸ್ತೆಯಲ್ಲಿ ರಥೋತ್ಸವ ಸಂದರ್ಭದಲ್ಲಿ ವಾಹನಗಳ ಸಂಚಾರ ಸ್ವಲ್ಪಮಟ್ಟಿಗೆ ಅಸ್ತವ್ಯಸ್ತ ಗೊಂಡಿತ್ತಾದರೂ ಕೂಡ ನಾಗರಿಕರು, ಪೊಲೀಸರು ಅದನ್ನು ಸರಳವಾಗಿ ಸುಗಮಗೊಳಿಸುವಲ್ಲಿ ಯಶಸ್ವಿಯಾದರು. ರಥೋತ್ಸವ ಸಂದರ್ಭದಲ್ಲಿ ಎಸ್ಪಿ. ಸಿಪಿಐ ಮತ್ತು ಪಿಎಸ್ಐ ಹಾಗೂ ಅಂಗರಕ್ಷಕ ದಳ ಅವರ ನೇತೃತ್ವದಲ್ಲಿ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್‌ ಏರ್ಪಡಿಲಾಗಿತ್ತು.