ಸಾರಾಂಶ
ಬಿ.ಜಿ.ಕೆರೆ ಬಸವರಾಜ
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರುಮಧ್ಯ ಕರ್ನಾಟಕದ ಬುಡಕಟ್ಟು ಸಮುದಾಯದ ಆರಾಧ್ಯ ದೈವ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯ ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ಭಾನುವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.ಮಧ್ಯಾಹ್ನ 3.45 ಗಂಟೆಯ ಸುಮಾರಿಗೆ ಚಿತ್ತಾ ನಕ್ಷತ್ರದಲ್ಲಿ ಬೃಹತ್ ಗಾತ್ರದ ಹೂವಿನ ಹಾರಗಳಿಂದ ಅಲಂಕೃತವಾದ ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ರಥ ಬೀದಿಯಿಂದ ಹೊರಮಠದ ಪಾದಗಟ್ಟೆಯವರೆಗೆ ಎಳೆದು ತಂದು ಮೂಲ ಸ್ಥಾನಕ್ಕೆ ಕರೆತರಲಾಯಿತು. ದೊಡ್ಡಗಾತ್ರದ ಹಗ್ಗವನ್ನು ಹಿಡಿದ ಸಹಸ್ರಾರು ಭಕ್ತರು ರಥವನ್ನು ಎಳೆಯುವ ಮೂಲಕ ಭಕ್ತಿಭಾವ ಸಮರ್ಪಣೆ ಮಾಡಿದರು. ಲಕ್ಷಾಂತರ ಭಕ್ತ ಸಾಗರದ ನಡುವೆ ಜೈಕಾರ ಮಂತ್ರದ್ಧೂಷಗಳೊಂದಿಗೆ ಸಾಗುತ್ತಿದ್ದ ರಥದಲ್ಲಿ ರಾಜ ಟೀವಿಯಲ್ಲಿ ಕುಳಿತಿದ್ದ ಪವಾಡ ಪುರುಷ ಶ್ರೀ ಗುರುತಿಪ್ಪೇರುದ್ರ ಸ್ವಾಮಿಯನ್ನು ಸುಡು ಬಿಸಿಲನ್ನು ಲೆಕ್ಕಿಸದೆ ನಿಂತು ಕಣ್ತುಂಬಿಕೊಂಡ ಭಕ್ತರು ಇಷ್ಟಾರ್ಥಗಳನ್ನು ಪೂರೈಸುವಂತೆ ಬಾಳೆಹಣ್ಣು ಚೂರು ಬೆಲ್ಲ ಅರ್ಪಿಸಿ ಪುನೀತ ಬಾವ ವ್ಯಕ್ತ ಪಡಿಸಿದರು.ಉರಿ ಬಿಸಿಲು, ಗಾಳಿ, ದೂಳು ಯಾವುದನ್ನೂ ಲೆಕ್ಕಿಸದೆ ರಥೋತ್ಸವಕ್ಕೆ ಬೆಳಗ್ಗೆಯಿಂದಲೇ ಜನಸಾಗರ ಹರಿದು ಬಂದಿತ್ತು. ನಾಯಕನಹಟ್ಟಿಯ ದೊಡ್ಡ ಕೆರೆ ಕಟ್ಟಿಸಿದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಶ್ರೀಗುರು ತಿಪ್ಪೇರುದ್ರಸ್ವಾಮಿ ಪವಾಡಗಳ ಮೂಲಕ ಮಧ್ಯ ಕರ್ನಾಟಕದ ಜನಮನದಲ್ಲಿ ನೆಲೆ ನಿಂತಿದ್ದಾರೆ.
ತಿಪ್ಪೇರುದ್ರಸ್ವಾಮಿ ಐಕ್ಯವಾಗಿರುವ ಹೊರಮಠ ಹಾಗೂ ದೇವರ ವಿಗ್ರಹ ಹಾಗೂ ಮುಖ್ಯವಾಗಿರುವ ಒಳಮಠ ಎರಡೂ ಕಡೆಗಳಲ್ಲಿ ಬೆಳಗ್ಗೆಯಿಂದಲೇ ಬಿಡುವಿಲ್ಲದ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ನೆರವೇರಿದವು. ಒಳಮಠ ಮತ್ತು ಹೊರಗಳಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.ರಥೋತ್ಸವಕ್ಕೆ ಭಕ್ತ ಸಾಗರದ ದಂಡು ಹರಿದು ಬಂದಿತ್ತು. ಅಕ್ಕಪಕ್ಕದ ಆಂಧ್ರಪ್ರದೇಶ, ತೆಲಂಗಾಣ, ಬಳ್ಳಾರಿ, ರಾಯಚೂರು, ತುಮಕೂರು, ಕೊಪ್ಪಳ ಗದಗ ಸೇರಿ ಮತ್ತಿತರರ ಭಾಗಗಳಿಂದ ಆಗಮಿಸಿದ್ದ ಭಕ್ತರು ತಿಪ್ಪೇಶನ ಜಾತ್ರೆಯಲ್ಲಿ ಭಾಗವಹಿಸಿ ದರ್ಶನ ಪಡೆದರು.
*ನಾಲ್ಕು ದಿಕ್ಕುಗಳಲ್ಲಿ ಸರ್ಪಗಾವಲು: ರಥೋತ್ಸವಕ್ಕೆ ಲಕ್ಷಾಂತರ ಮಂದಿ ಆಗಮಿಸುವ ನಿರೀಕ್ಷೆಯಿಂದ ಜಿಲ್ಲಾಡಳಿತದಿಂದ ಅಹಿತಕರ ಘಟನೆಗಳು ಜರುಗದಂತೆ ಬಾರಿ ಮುನ್ನೆಚ್ಚರಿಕೆ ಕ್ರಮವಹಿಸಲಾಗಿತ್ತು. ಪಟ್ಟಣ ವ್ಯಾಪ್ತಿಯ 4 ದಿಕ್ಕುಗಳಲ್ಲಿ ಪೋಲಿಸ್ ಸರ್ಪಗಾವಲು ಹಾಕಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಲಾರಿ, ಬಸ್, ದ್ವಿಚಕ್ರವಾಹನ ಸೇರಿದಂತೆ ವಿವಿಧ ವಾಹನಗಳ ಒಳ ಪ್ರವೇಶವನ್ನು ತಡೆಯಲಾಗಿತ್ತು. ಇದರಿಂದಾಗಿ ಭಕ್ತರು ಉರಿ ಬಿಸಿಲಲ್ಲಿ ಕಿಮೀ ಗಟ್ಟಲೆ ಕಾಲ್ನಡಿಗೆಯಲ್ಲಿ ನಡೆದು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.*ಕೊಬ್ಬರಿ ಸುಡುವ ಸಂಪ್ರದಾಯ ವಿಶೇಷ: ಹಟ್ಟಿತಿಪ್ಪೇಶ ತೆಂಗಿನ ಕಾಯಿ ತುಂಬಿಕೊಂಡು ನಾಯಕನಹಟ್ಟಿಗೆ ಬರುವಾಗ ರಾತ್ರಿವೇಳೆ ಕೊಬ್ಬರಿ ಬೆಂಕಿ ಬೆಳಕಲ್ಲಿ ಆಗಮಿಸಿದ್ದರು ಎನ್ನುವ ಐತಿಹ್ಯ ಇದೆ. ಇದರಿಂದಾಗಿ ಭಕ್ತರು ರಥೋತ್ಸವದ ವೇಳೆ ಒಣ ಕೊಬ್ಬರಿ ಸುಡುವುದು ಆಚರಣೆ ವಿಶೇಷವಾಗಿದೆ. ಸಾವಿರಾರು ಭಕ್ತರು ಕೊಬ್ಬರಿ ಸುಟ್ಟು ಬೂದಿಯನ್ನು ಹಣೆಗೆ ತಿಲಕ ವಿಟ್ಟುಕೊಳ್ಳುವುದು ಸಾಮಾನ್ಯವಾಗಿ ಕಂಡು ಬಂತು.
*ಜಿಲ್ಲೆಯಲ್ಲಿ ದೊಡ್ಡ ಜಾತ್ರೆಗಳಲ್ಲಿ ಪ್ರಮುಖ: ಜಿಲ್ಲೆಯಲ್ಲಿ ಬಹುದೊಡ್ಡ ಜಾತ್ರೆಯಾಗಿರುವ ಪರಿಣಾಮ ರಾಜ್ಯ ಸೇರಿದಂತೆ ಹೊರ ರಾಜ್ಯದಿಂದಲೂ ಭಕ್ತರು ಆಗಮಿಸುತ್ತಾರೆ. ಇದರಿಂದಾಗಿ ಸಾರಿಗೆ ಇಲಾಖೆ ಜಾತ್ರಾ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಹಿರಿಯೂರು, ಚಳ್ಳಕೆರೆ, ದಾವಣಗೆರೆ, ಜಗಳೂರು, ಹೊಸದುರ್ಗ, ಹೊಳಲ್ಕೆರೆ, ಬಳ್ಳಾರಿ, ಹೊಸಪೇಟೆ, ಶಿರಾ ತುಮಕೂರು, ಬೆಂಗಳೂರು ಶಿವಮೊಗ್ಗ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರಿಗೆ ಬಸ್ ಸೌಲಬ್ಯದ ವ್ಯವಸ್ಥೆ ಮಾಡಲಾಗಿತ್ತು.*ಬೆಂಡು ಬತ್ತಾಸು, ಕಾರ ಮಂಡಕ್ಕಿ ವ್ಯಾಪಾರ ಜೋರು: ತಿಪ್ಪೇಶನ ಜಾತ್ರೆಯಲ್ಲಿ ಕಾರಮಂಡಕ್ಕಿ ಸಿಹಿ ತಿನಿಸು ಬೆಂಡು ಬತ್ತಾಸು ವ್ಯಾಪಾರ ಜೋರಾಗಿ ನಡೆಯಿತು. ದೇವರ ದರ್ಶನದ ನಂತರ ಭಕ್ತರು ದವನ ಮತ್ತು ಕಾರ ಮಂಡಕ್ಕಿ ಖರೀದಿಗೆ ಮುಗಿ ಬಿದ್ದರು. ಇದರಿಂದಾಗಿ ಸಾಲು ಸಾಲು ಸಿಹಿ ತಿನಿಸಿನ ಅಂಗಡಿಗಳ ಮುಂದೆ ನೂಕು ನುಗ್ಗಲು ಉಂಟಾಗಿದ್ದರೂ ವ್ಯಾಪಾರ ಮಾತ್ರ ಭರ್ಜರಿಯಾಗಿ ಸಾಗಿತು.
*ಮುಕ್ತಿ ಬಾವುಟ ಹರಾಜು: ರಥೋತ್ಸವಕ್ಕೂ ಮುನ್ನ ಮುಕ್ತಿ ಬಾವುಟ ಹರಾಜು ಪ್ರಕ್ರಿಯೆ ನಡೆಯಿತು. ಹರಾಜು ಆರಂಭದಲ್ಲಿ ಡಾ.ಪಾಲಾಕ್ಷ 10 ಲಕ್ಷಕ್ಕೆ ಹರಾಜು ಕೂಗಿದರೆ ಬೆಂಗಳೂರಿನ ತೇಜಸ್ವಿ ಆರಾಧ್ಯ 50 ಲಕ್ಷಕ್ಕೆ ಕೂಗಿದರು. ಈ ವೇಳೆ ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ 60 ಲಕ್ಷಕ್ಕೆ ಕೂಗಿ ಹಿಂದೆ ಸರಿದಾಗ ತೇಜಸ್ವಿ ಆರಾಧ್ಯ 63 ಲಕ್ಷ ಕೂಗುವ ಮೂಲಕ ಮುಕ್ತಿ ಬಾವುಟ ತಮ್ಮದಾಗಿಸಿಕೊಂಡರು.
ಜಾತ್ರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕ ಎನ್.ವೈ.ಗೋಪಾಲಕೃಷ್ಣ, ಸಂಸದ ಗೋವಿಂದ ಎಂ.ಕಾರಜೋಳ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ನಿಗಮ ಮಂಡಳಿ ಅಧ್ಯಕ್ಷ ಯೋಗೇಶ್ ಬಾಬು ಭಾಗವಹಿಸಿದ್ದರು.ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಪ್ಲೆಕ್ಸ್ ಗಮನಾರ್ಹ:
ಈ ಬಾರಿಯ ಜಾತ್ರಾ ಮಹೋತ್ಸವದಲ್ಲಿ ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ ಎನ್ನುವ ಪ್ಲೆಕ್ಸ್‌ಗಳನ್ನು ಹಾಕಿರುವುದು ಗಮನಾರ್ಹವಾಗಿ ಕಂಡು ಬಂದಿತು. ಅಂತಹ ತಲೆಬರಹ ಇರುವ ಹತ್ತಾರು ಪ್ಲೆಕ್ಸ್‌ಗಳು ಜಾತ್ರೆಯಲ್ಲಿ ಅಳವಡಿಸಿದ್ದು ನೋಡುಗರ ಗಮನ ಸೆಳೆಯಿತು. ಅಲ್ಲದೆ ರಥೋತ್ಸವದ ವೇಳೆಯೂ ಹತ್ತಾರು ಯುವಕರು ಸತೀಶ್ ಜಾರಕಿಹೊಳಿ ಭಾವಚಿತ್ರ ಹಿಡಿದು ಸಾಗಿದ್ದು ಇನ್ನು ವಿಶೇಷವಾಗಿತ್ತು. ಜಿಲ್ಲಾಡಳಿತ ಈ ಬಾರಿ ತೇರು ಬೀದಿಯಿಂದ ಪಾದಗಟ್ಟೆಯವರೆಗೆ ಪ್ಲೆಕ್ಸ್ ಹಾಕುವುದನ್ನು ನಿರ್ಬಂದಿಸಲಾಗಿತ್ತು. ರಾಜಕೀಯ ಮುಖಂಡರ ಪ್ಲೆಕ್ಸ್‌ಗಳು ಅಂಬೇಡ್ಕರ್ ವೃತ್ತದ್ದ ರಸ್ತೆಯಲ್ಲಿ ಒಳ ಮಠ ರಸ್ತೆಯಲ್ಲಿ ಕಂಡುಬಂದವು.
ತಂಪು ಪಾನೀಯಗಳಿಗೆ ಭರ್ಜರಿ ಬೇಡಿಕೆ:
ಸುಡು ಬಿಸಿಲ ಬೇಗೆಗೆ ತತ್ತರಿಸಿದ್ದ ಭಕ್ತರು ಜಾತ್ರೆಯಲ್ಲಿ ಹೆಚ್ಚು ತಂಪು ಪಾನೀಯಗಳ ಮೊರೆ ಹೋಗುವುದು ಸಾಮಾನ್ಯವಾಗಿತ್ತು. ಪ್ರಮುಖ ರಸ್ತೆಯ ಅಲ್ಲಲ್ಲಿ ಭಕ್ತರು ಹಾಕಿದ್ದ ಸ್ಟಾಲ್‌ಗಳಲ್ಲಿ ಉಚಿತವಾಗಿ ನೀರು, ಮಜ್ಜಿಗೆ, ಪಾನಕ ವಿವಿಧ ತಂಪು ಪಾನಿಯ ವ್ಯವಸ್ಥೆ ಮಾಡಿದ್ದರು ಸುಡು ಬಿಸಿಲ ಧಗೆಯಿಂದ ದೇಹವನ್ನು ತಂಪಾಗಿಸಿಕೊಳ್ಳಲು ಬಹುತೇಕ ಭಕ್ತರು ಎಳೆನೀರು, ಕಲ್ಲಂಗಡಿ ಮೊರೆ ಹೋಗುವುದು ಎಲ್ಲಡೆ ಕಂಡುಬಂದಿತು. ಇದರಿಂದಾಗಿ ಜಾತ್ರೆಯಲ್ಲಿ ತಂಪು ಪಾನೀಯಗಳಿಗೆ ಭರ್ಜರಿ ಡಿಮ್ಯಾಂಡ್ ವ್ಯಕ್ತವಾಯಿತು.ರಥೋತ್ಸವ ವೇಳೆ ತಪ್ಪಿದ ಬಾರಿ ಅನಾಹುತ:
ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪಟ್ಟಣದಲ್ಲಿ ನಡೆದ ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವದ ವೇಳೆ ಸ್ವೀಟ್ ಕಾರ್ನ್ ಗಾಡಿಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕ್ಷಣ ಕಾಲ ಆತಂಕಕ್ಕೆ ಕಾರಣವಾಯಿತು. ಆಕಸ್ಮಿಕವಾಗಿ ತಗುಲಿದ ಬೆಂಕಿಯಿಂದಾಗಿ ಸ್ವೀಟ್ ಕಾರ್ನ್ ಗಾಡಿಯಲ್ಲಿದ್ದ
ಸಿಲಿಂಡರ್ ಸ್ಪೋಟ ಭೀತಿ ಎದುರಾಗಿತ್ತು. ಬೆಂಕಿಯನ್ನು ಕಂಡ ಜನರು ದಿಕ್ಕಾಪಾಲಾಗಿ ಓಡುವಂತಾಗಿತ್ತು. ಸ್ಥಳೀಯ ಸೇವಾ ಕಾರ್ಯಕರ್ತರು ಬೆಂಕಿ ನಂದಿಸಿ ಅಗ್ನಿ ಅವಘಡವನ್ನು ತಡೆದು ಜನರಲ್ಲಿದ್ದ ಆತಂಕ ದೂರ ಮಾಡಿದ ಘಟನೆ ನಡೆಯಿತು.