ಸಾರಾಂಶ
ನರಗುಂದ: ಅರಸ ಬಾಬಾಸಾಹೇಬರ ಆಡಳಿತದಲ್ಲಿ ಕೆಂಪಗಸಿ ರಸ್ತೆ ರಾಜಬೀದಿ ಆಗಿತ್ತು. ಈಗ ಹಿರೇಮಠದ ರಥೋತ್ಸವದ ರಾಜಬೀದಿಯಾಗಿದೆ. ರಾಜಬೀದಿಯೆಂದರೆ ರಥೋತ್ಸವ ಹೋಗುವ ದಾರಿಯಲ್ಲಿ ಯಾವುದೇ ಅಡೆತಡೆ ಇರುವುದಿಲ್ಲ. ಅಂತಹ ಭವ್ಯ ಇತಿಹಾಸ ಮರುಕಳಿಸುತ್ತಿದೆ ಎಂದು ಪುಣ್ಯಾರಣ್ಯ ಪತ್ರೀವನ ಮಠದ ಶ್ರೀ ಗುರುಸಿದ್ದವೀರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಅವರು ಪಟ್ಟಣದ ಪಂಚಗೃಹ ಗುಡ್ಡದ ಹಿರೇಮಠದ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವದ ಪ್ರವಚನದ ವೇದಿಕೆಯಲ್ಲಿ ಅವರು ಮಾತನಾಡಿದರು. ಇತ್ತೀಚಿಗಿನ ದಿನಗಳಲ್ಲಿ ರೈತರು ಕೃಷಿಗೆ ಆದ್ಯತೆ ಕೊಡುವ ಬದಲಾಗಿ ಹೋರಾಟಕ್ಕೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಮಹಿಳೆಯರು ಟಿವಿಯಲ್ಲಿ ಧಾರಾವಾಹಿ ನೋಡುವುದರಲ್ಲಿಯೇ ಮುಳುಗಿದ್ದರೆ ಯುವಕರು ಮೊಬೈಲ್ ಆಟಗಳಲ್ಲಿ ಮಗ್ನರಾಗಿದ್ದಾರೆ. ಪರಿಸರ ಕಾಳಜಿ ಕಡಿಮೆಯಾಗಿದೆ. ಫ್ಯಾಷನ್ ಮಾಡುವುದು ಹೆಚ್ಚಾಗಿದೆ. ಮತ್ತೊಬ್ಬರ ಬಗ್ಗೆ ಟೀಕೆ ಮಾಡುವುದು ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮದು ನೆಮ್ಮದಿಯ ಸುಂದರವಾದ ಬದುಕು ಆಗಬೇಕೆಂದರೆ ಗೋ ಆಧಾರಿತ ಕೃಷಿಗೆ ಒತ್ತು ಕೊಡಬೇಕಾಗಿದೆ. ಹಿಂದೆ ಗೋವಿಗಾಗಿ ಯುದ್ಧಗಳು ನಡೆಯುತ್ತಿದ್ದವು. ಹಸು ಇದ್ದ ಮನೆಗೆ ಕನ್ಯೆ ಕೊಡುತ್ತಿದ್ದರು. ಪ್ರತಿ ಮನೆ ಹಿತ್ತಲಲ್ಲಿ ಸಗಣಿ ತಿಪ್ಪೆಗಳು ಇರುತ್ತಿದ್ದವು. ನಮಗೆಲ್ಲ ಉಚಿತವಾಗಿ ಗೊಬ್ಬರ ಸಿಗುತ್ತಿತ್ತು. ಈಗ ಗೊಬ್ಬರಕ್ಕಾಗಿ ಟಾವೆಲ್ ತಿರುಗಿಸುತ್ತಾ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಾ, ವ್ಯವಸಾಯ ಮಾಡುವುದನ್ನು ಬಿಟ್ಟು ರಸ್ತೆ ಬೀದಿಯಲ್ಲಿ ಕುಳಿತುಕೊಂಡಿದ್ದಾನೆ. ರೈತ ಕೈಯೊಡ್ಡಿ ಏನನ್ನು ಬೇಡುವುದಿಲ್ಲ, ಎಲ್ಲವೂ ಅವನ ಬಳಿಯೇ ಇದೆ. ಸುಂದರ ಬದುಕಿಗಾಗಿ ಸಮಗ್ರ ಕೃಷಿ ಹಾಗೂ ಗೋ ಆಧಾರಿತ ಕೃಷಿ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.ಹಲವಾರು ರೈತರು ಸಾವಯವ ಕೃಷಿ, ಗೋ ಉತ್ಪನ್ನ, ಪರಿಸರ ಸಂರಕ್ಷಣೆಯ ಕುರಿತು ತಮ್ಮ ಅನುಭವ ಹಂಚಿಕೊಂಡರು.
ಸಾವಯವ ಕೃಷಿ, ಗೋ ಸಂರಕ್ಷಣೆ, ಪರಿಸರ ಸಂರಕ್ಷಣೆಯಲ್ಲಿ ವಿಶೇಷ ಸಾಧನೆ ಮಾಡಿದ ರೈತ ದಂಪತಿಗಳಾದ ಎಫ್.ಎಸ್. ಪಾಟೀಲ, ಎಸ್.ವಿ. ಹಾಲಕೇರಿ, ವಿದ್ಯಾಧರ ರಮಾಣೆ, ಮಲ್ಲಿಕಾರ್ಜುನ ರಮಾಣೆ, ರುದ್ರಗೌಡ ಲಿಂಗನಗೌಡ್ರ, ಮಲ್ಲೇಶಗೌಡ ಪಾಟೀಲ, ರವಿ ಹಡಪದ ಹಾಗೂ ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು.ಹಿರೇಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಶ್ರೀಗಳು, ತುಪ್ಪದ ಕುರಹಟ್ಟಿ ವಾಗೀಶ ಪಂಡಿತಾರಾಧ್ಯ ಸ್ವಾಮೀಜಿ, ಪುರಸಭೆ ಸದಸ್ಯರಾದ ಯಲ್ಲಪ್ಪಗೌಡ ನಾಯ್ಕರ, ದಿವಾನ್‌ಸಾಬ್ ಕಿಲ್ಲೇದಾರ, ಮಂಜುನಾಥಗೌಡ ಪಾಟೀಲ, ಗವಿಸಿದ್ದೇಶ್ವರ ಶಾಸ್ತ್ರೀಗಳು, ಆರ್.ಬಿ. ಚಿನಿವಾಲರ ಇದ್ದರು.