ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
77 ಮಲೆಗಳಲ್ಲಿ ಒಂದಾದ ಪೊನ್ನಾಚಿ ಮಲೆಯ ಆದಿ ಮಹದೇಶ್ವರಸ್ವಾಮಿಯ ಕೊಂಡೋತ್ಸವ ವಿಜೃಂಭಣೆಯಿಂದ ನಡೆಯಿತು.ಹನೂರು ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ಮೂರು ವರ್ಷಗಳಿಗೊಮ್ಮೆಸಾಂಪ್ರದಾಯದಂತೆ ನಡೆಯುವ ಶ್ರೀ ಆದಿ ಮಹದೇಶ್ವರ ಸ್ವಾಮಿಯ ಕೊಂಡೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.ಪೊನ್ನಾಚಿ ಸೇರಿದಂತೆ ಮರೂರು, ಅಸ್ತೂರು ಹಾಗೂ ಈ ಭಾಗದ ಗ್ರಾಮಸ್ಥರು ಒಟ್ಟುಗೂಡಿ ಆಚರಿಸುವ ಕೊಂಡೋತ್ಸವದ ಹಿನ್ನೆಲೆ ದೇಗುಲವನ್ನು ತಳಿರು ತೋರಣ, ವಿವಿಧ ಪುಷ್ಪ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ಲಿಂಗ ಸ್ವರೂಪಿ ಮಹದೇಶ್ವರ ಸ್ವಾಮಿಗೆ ಕುಂಬಾಭಿಷೇಕವನ್ನು ನೆರವೇರಿಸಿ ಮುಖವಾಡದ ಕೊಳಗವನ್ನು ಧರಿಸಲಾಯಿತು. 101 ಪೂಜೆಯನ್ನು ಸಲ್ಲಿಸಿ ಮಹಾ ಮಂಗಳಾರತಿ ಬೆಳಗಿಸಲಾಯಿತು. ನಂತರ ಆದಿ ಮಹದೇಶ್ವರಸ್ವಾಮಿಯ ಸನ್ನಿಧಾನದ ಹತ್ತಿರ ಇರುವ ಕಾಡಿನ ಗುಡ್ಡದ ಸಮೀಪಕ್ಕೆ ಮಂಗಳವಾದ್ಯ, ತಮಟೆ, ಜಾಗಟೆ ಹಾಗೂ ಭಕ್ತರೊಂದಿಗೆ ತೆರಳಿ ಕಾನನ ಮಧ್ಯೆ ಇರುವ ಭಿನ್ನದ ಕಟ್ಟೆ ಮಹದೇಶ್ವರರಿಗೆ ಸಾಂಪ್ರದಾಯಿಕವಾಗಿ ಭಿನ್ನಹಿಸುವ ಮೂಲಕ ಪೂಜಿಸಲಾಯಿತು. ಅಲ್ಲದೆ ದೇಗುಲದ ಪಕ್ಕದಲ್ಲಿ ಸಿದ್ದಪಡಿಸಲಾಗಿದ್ದ ಸೌದೆಗೆ ದೀವಟಿಗೆಯಿಂದ ಬೆಂಕಿ ಹಚ್ಚಿ ಕೊಂಡವನ್ನು ಸಿದ್ದಪಡಿಸಲಾಯಿತು. ಹಾಗೂ ದೇವಾಲಯದ ಗರ್ಭಗುಡಿಯಲ್ಲಿ ಗ್ರಾಮಸ್ಥರು ರಾತ್ರಿ ಇಡೀ ಕಂಸಾಳೆ ನುಡಿಸುವುದರ ಜೊತೆಗೆ ಭಕ್ತಿಗೀತೆಗಳೊಂದಿಗೆ ಪ್ರಾರ್ಥಿಸಿದರು.