ಕಳೆದ ೫ ದಿನಗಳಿಂದ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಜನರು ಆಗಮಿಸಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು. ರಥೋತ್ಸವದ ಅಂಗವಾಗಿ ಗುತ್ತಿನಕೆರೆ ಗ್ರಾಮ ಹಸಿರು ತೋರಣಗಳಿಂದ ನವ ವಧುವಿನಂತೆ ಶೃಂಗಾರಗೊಂಡಿತ್ತು. ಶ್ರೀ ಸ್ವಾಮಿಯವರಿಗೆ ಬೆಳಗಿನಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ನಂತರ ಮೂಡಲ ಗಿರಿತಿಮ್ಮಪ್ಪಸ್ವಾಮಿ, ಯಳವಾರೆ ಹುಚ್ಚಮ್ಮದೇವಿ. ಹಾರ್‍ನಳ್ಳಿ ಕೋಡಮ್ಮದೇವಿ, ಹುಲ್ಲೇನಹಳ್ಳಿ ಚಿಕ್ಕಮ್ಮದೇವರು, ತಳಲೂರು ಬನ್ನಿಮಹಾಕಾಳಿ ಅಮ್ಮನವರ ಸಮ್ಮುಖದಲ್ಲಿ ಆಂಜನೇಯಸ್ವಾಮಿ ಮೆರವಣಿಗೆಯಲ್ಲಿ ಕರೆತಂದು ರಥಮಂಟಪದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಹಾರನಹಳ್ಳಿಇಲ್ಲಿಗೆ ಸಮೀಪದ ಗುತ್ತಿನಕೆರೆ ರಂಗನಾಥಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ೩ ಗಂಟೆಗೆ ಸಲ್ಲುವ ಶುಭಲಗ್ನದಲ್ಲಿ ಸಡಗರ ಸಂಭ್ರಮದಿಂದ ನೆರವೇರಿತು. ಕಳೆದ ೫ ದಿನಗಳಿಂದ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಜನರು ಆಗಮಿಸಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು. ರಥೋತ್ಸವದ ಅಂಗವಾಗಿ ಗುತ್ತಿನಕೆರೆ ಗ್ರಾಮ ಹಸಿರು ತೋರಣಗಳಿಂದ ನವ ವಧುವಿನಂತೆ ಶೃಂಗಾರಗೊಂಡಿತ್ತು. ಶ್ರೀ ಸ್ವಾಮಿಯವರಿಗೆ ಬೆಳಗಿನಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ನಂತರ ಮೂಡಲ ಗಿರಿತಿಮ್ಮಪ್ಪಸ್ವಾಮಿ, ಯಳವಾರೆ ಹುಚ್ಚಮ್ಮದೇವಿ. ಹಾರ್‍ನಳ್ಳಿ ಕೋಡಮ್ಮದೇವಿ, ಹುಲ್ಲೇನಹಳ್ಳಿ ಚಿಕ್ಕಮ್ಮದೇವರು, ತಳಲೂರು ಬನ್ನಿಮಹಾಕಾಳಿ ಅಮ್ಮನವರ ಸಮ್ಮುಖದಲ್ಲಿ ಆಂಜನೇಯಸ್ವಾಮಿ ಮೆರವಣಿಗೆಯಲ್ಲಿ ಕರೆತಂದು ರಥಮಂಟಪದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಬಣ್ಣ ಬಣ್ಣದ ಬಟ್ಟೆಗಳಿಂದ, ನಿಶಾನೆ ಬಾವುಟ ವಿಶೇಷ ಹೂಗಳಿಂದ ಶೃಂಗರಿಸಲಾಗಿದ್ದ ರಥದಲ್ಲಿ ಕುಳ್ಳಿರಿಸಿದ ಶ್ರೀ ರಂಗನಾಥಸ್ವಾಮಿಗೆ ಶಾಸ್ತ್ರೋಕ್ತ ವಿಧಿವಿಧಾನಗಳು ಪೂರೈಸಿದ ನಂತರ ಧೂತರಾಯಸ್ವಾಮಿ, ಚಲುವರಾಯಸ್ವಾಮಿ ಹಾಗೂ ಭಕ್ತಾದಿಗಳು ರಥದ ಗಾಲಿಗೆ ತೆಂಗಿನಕಾಯಿಗಳನ್ನು ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ನೆರೆದಿದ್ದ ಭಕ್ತರು ಶ್ರೀರಂಗ ಶ್ರೀರಂಗ ನಾಮಸ್ಮರಣೆಯೊಂದಿಗೆ ರಥದ ಹಗ್ಗವನ್ನು ಎಳೆಯುತ್ತಿದ್ದಂತೆ ಭಕ್ತರು ರಥದ ಕಳಸಕ್ಕೆ ಬಾಳೆಹಣ್ಣು, ಹೂವು ತೂರುವ ಮೂಲಕ ಭಕ್ತಿ ಸಮರ್ಪಿಸಿದರು. ಆಕಾಶದಲ್ಲಿ ಗರುಡ ರಥಕ್ಕೆ ಪ್ರದಕ್ಷಿಣೆ ಮಾಡಿದ ದೃಷ್ಯ ನೋಡಿದ ಭಕ್ತರಿಗೆ ಸಾಕ್ಷಾತ್‌ ರಂಗನೇ ದರ್ಶನ ನೀಡಿದ್ದಾನೆಂದು ಕೈಮುಗಿದು ಪ್ರಾರ್ಥಿಸಿದರು.ರಥೋತ್ಸವದ ಅಂಗವಾಗಿ ಭಕ್ತಾಧಿಗಳಿಗೆ ಪಾನಕ ಫಲಹಾರ ನೀಡಲಾಯಿತು. ನಂತರ ವಸಂತೋತ್ಸವ ಮತ್ತು ಮಣೇವು ಸೇವೆ, ಮಹಾಮಂಗಳಾರತಿ ನೆರವೇರಿದವು. ಸಂಜೆ ಗಂಗಾಸ್ನಾನದ ನಂತರ ಶ್ರೀಯವರಿಗೆ ಉಯ್ಯಾಲೆ ಉತ್ಸವವನ್ನು ಏರ್ಪಡಿಸಲಾಗಿತ್ತು.

ಜಾತ್ರಾ ಸಂದರ್ಭದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು, ಹಾಗೂ ಗುತ್ತಿನಕೆರೆ ಜಾತ್ರಾ ಮಹೋತ್ಸವ ಸಮಿತಿ ಸದಸ್ಯರು, ಗ್ರಾಮಪಂಚಾಯಿತಿ ಮಾಜಿ ಸದಸ್ಯರು, ರಾಜಕೀಯ ಮುಖಂಡರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕರು ಹಾಜರಿದ್ದರು. ಜಾತ್ರೆಯಲ್ಲಿ ಹಾರನಹಳ್ಳಿ ದೂತರಾಯಸ್ವಾಮಿ, ಯಳವಾರೆ ಚಲುವರಾಯಸ್ವಾಮಿ ದೇವರ ಗುತ್ತಿನಕೆರೆ ಧೂತರಾಯಸ್ವಾಮಿ, ತಳಲೂರು ಧೂತರಾಯಸ್ವಾಮಿಯ ಸೋಮನಕುಣಿತ ಆಕರ್ಷಕವಾಗಿತ್ತು. ಕುಣಿತಕ್ಕೆ ಹಾರನಹಳ್ಳಿ, ಎಚ್.ಈ.ಈರಪ್ಪ, ಡೊಳ್ಳುವಾದ್ಯ, ಹಾರನಹಳ್ಳಿ ಅರೆ ಮನು ಅರೆವಾಧ್ಯ ಶ್ರೀನಿವಾಸ ತಮಟೆ ಕರಡೆ, ಅರೆವಾದ್ಯ, ವಾಲಗ ಕುಣಿತಕ್ಕೆ ಮೆರಗು ನೀಡಿತ್ತು.ಸಾವಿರಾರು ಭಕ್ತಾದಿಗಳು ದೇವರ ಕುಣಿತ ನೋಡಿ ಆನಂದಿಸಿದರು. ಶ್ರೀ ರಂಗನಾಥಸ್ವಾಮಿ ಮೂಲ ಸನ್ನಿಧಾನದಲ್ಲಿ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಸಾವಿರಾರು ಭಕ್ತಾದಿಗಳು ಸರದಿ ಸಾಲಿನಲ್ಲಿ ನಿಂತು ಸ್ವಾಮಿ ದರ್ಶನ ಪಡೆದರು. ಭಾನುವಾರ (ಇಂದು) ರಾತ್ರಿ ೯ ಗಂಟೆಗೆ ಕೆಂಚಪ್ಪಸ್ವಾಮಿ ಸೇವೆ ನಡೆಯಲಿದೆ. ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಗಂಡಸಿ ಪೋಲಿಸರು ಬಂದೋಬಸ್ತ್‌ ನೀಡಿದ್ದರು.