ವಿಜೃಂಭಣೆಯ ವೀರಭದ್ರೇಶ್ವರ ಮಹಾ ರಥೋತ್ಸವ

| Published : Oct 21 2025, 01:00 AM IST

ಸಾರಾಂಶ

ಇಲ್ಲಿಯ ಪುರಾಣ ಪ್ರಸಿದ್ಧ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸೋಮವಾರ ರಾತ್ರಿ ಶ್ರೀ ವೀರಭದ್ರೇಶ್ವರ ದೇವರ ಮಹಾ ರಥೋತ್ಸವ ಸಕಲ ವಾದ್ಯ ವೈಭವಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಹಾವೇರಿ: ಇಲ್ಲಿಯ ಪುರಾಣ ಪ್ರಸಿದ್ಧ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸೋಮವಾರ ರಾತ್ರಿ ಶ್ರೀ ವೀರಭದ್ರೇಶ್ವರ ದೇವರ ಮಹಾ ರಥೋತ್ಸವ ಸಕಲ ವಾದ್ಯ ವೈಭವಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಜಾತ್ರಾ ಮಹೋತ್ಸವ ಅಂಗವಾಗಿ ಅ. 18ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನದಲ್ಲಿ ಜರುಗಿದವು. ಮೊದಲ ದಿನ ವೀರಭದ್ರ ದೇವರಿಗೆ ಕಂಕಣಧಾರಣೆ ನಡೆಯಿತು. ಎರಡನೇ ದಿನ ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ಸಂಜೆ ವೀರಭದ್ರದೇವರ ಹೂವಿನ ತೇರು ಜರುಗಿತು. ದೀಪಾವಳಿಯ ನರಕ ಚತುರ್ದಶಿ ದಿನವಾದ ಸೋಮವಾರ ಬೆಳಗ್ಗೆ ನಗರದ ಶ್ರೀ ಪುರಸಿದ್ದೇಶ್ವರ ದೇವಸ್ಥಾನದಿಂದ ಗುಗ್ಗಳ ಹೊರಟು ವೀರಭದ್ರೇಶ್ವರ ದೇವಸ್ಥಾನ ತಲುಪಿತು. ನಂತರ ಅಗ್ನಿಕುಂಡ ಹಾಯುವ ಕಾರ್ಯಕ್ರಮ ನಡೆಯಿತು.ಬಳಿಕ ಸಂಜೆ ವೇಳೆ ವೀರಭದ್ರದೇವರ ಅಲಂಕೃತ ಮಹಾರಥೋತ್ಸವ ಸಕಲ ವಾದ್ಯ ವೈಭವಗಳೊಂದಿಗೆ ದೇವಸ್ಥಾನದ ಆವರಣದಿಂದ ಆರಂಭಗೊಂಡು, ಎಂ.ಜಿ. ರೋಡ್ ಮುಖಾಂತರ ಕಂದಕ ರೋಡ್‌ವರೆಗೆ ಮೆರವಣಿಗೆ ನಡೆಸಿ ಮರಳಿ ದೇವಸ್ಥಾನಕ್ಕೆ ತಲುಪಿ ಸಂಪನ್ನಗೊಂಡಿತು. ರಥೋತ್ಸವ ಸಂದರ್ಭದಲ್ಲಿ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡು ಮಹಾ ರಥೋತ್ಸವದ ಕಳಸಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆದು ಕೃತಾರ್ಥಭಾವ ಮೆರೆದು ಭಕ್ತಿಯನ್ನು ಸಮರ್ಪಿಸಿದರು. ಈ ಸಂದರ್ಭದಲ್ಲಿ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷರು, ಪದಾಕಾರಿಗಳು ಹಾಗೂ ಭಕ್ತ ವೃಂದದವರು ಪಾಲ್ಗೊಂಡಿದ್ದರು.