ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರನ್ನ ಪ್ರತಿಷ್ಠಾನದಿಂದ ನಡೆಯಲಿರುವ ರನ್ನ ವೈಭವಕ್ಕೆ ಭರದ ಸಿದ್ಧತೆಗಳು ನಡೆದಿವೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರನ್ನ ಪ್ರತಿಷ್ಠಾನದಿಂದ ನಡೆಯಲಿರುವ ರನ್ನ ವೈಭವಕ್ಕೆ ಭರದ ಸಿದ್ಧತೆಗಳು ನಡೆದಿವೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ರನ್ನ ಬೆಳಗಲಿ ಹಾಗೂ ಮುಧೋಳದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಫೆ.22ರಂದು ರನ್ನ ಬೆಳಗಲಿಯಲ್ಲಿ, ಫೆ.23 ಹಾಗೂ 24ರಂದು ಮುಧೋಳದ ರನ್ನ ಕ್ರೀಡಾಂಗಣದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಮೂರು ರಥಗಳನ್ನು ನಿರ್ಮಾಣ ಮಾಡಲಾಗಿದ್ದು, ಈಗಾಗಲೇ ಎರಡು ರಥಗಳು ಜಿಲ್ಲಾಮಟ್ಟದಲ್ಲಿ ಸಂಚರಿಸುತ್ತಿದ್ದು, ಫೆ.19ರಂದು ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ರನ್ನ ವೈಭವ ಕಾರ್ಯಕ್ರಮ ಯಶಸ್ವಿಯಾಗಲು ವಿವಿಧ ಸಮಿತಿ ರಚಿಸಲಾಗಿದೆ. ಉತ್ಸವಕ್ಕೆ ₹50 ಲಕ್ಷ ಅನುದಾನ ಬಿಡುಗಡೆಯಾಗಿದೆ. ಕೇಂದ್ರ ಸರ್ಕಾರದಿಂದಲೂ ಅನುದಾನ ಬಿಡುಗಡೆಯಾಗಬೇಕಿದ್ದು, ಹೆಚ್ಚುವರಿಯಾಗಿ ರಾಜ್ಯ ಸರ್ಕಾರಕ್ಕೆ ಅನುದಾನ ಬಿಡುಗಡೆ ಮನವಿ ಮಾಡಲಾಗಿದೆ. ವಿವಿಧ ಸಂಘ, ಸಂಸ್ಥೆ ಗಳು, ಸಾರ್ವಜನಿಕರು, ಜನಪ್ರತಿನಿಧಿಗಳು, ನಾಡಿನ ಪೂಜ್ಯರು, ಅಧಿಕಾರಿಗಳು ಈವರೆಗೆ ₹1.40 ಕೋಟಿ ದೇಣಿಗೆ ನೀಡಿದ್ದಾರೆಂದು ತಿಳಿಸಿದರು.

ಫೆ.22ರಂದು ಬೆಳಗ್ಗೆ 10 ಗಂಟೆಗೆ ರನ್ನ ಬೆಳಗಲಿಯಲ್ಲಿ ಜಾನಪದ ವಾಹಿನಿ ಕಲಾ ತಂಡಗಳ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾ ಪೂರ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ವಿಚಾರ ಸಂಕಿರಣ, ಗೋಷ್ಠಿಗಳು ನಡೆಯಲಿದ್ದು, ಸಂಜೆ 4 ಗಂಟೆಗೆ ಸಾಂಸ್ಕೃತಿ ಕಾರ್ಯಕ್ರಮ ಜರುಗಲಿವೆ. ಸಂಜೆ 6 ಗಂಟೆಗೆ ಕಾರ್ಯಕ್ರಮವನ್ನು ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸಲಿದ್ದು, ವಿಶೇಷ ಆಹ್ವಾನಿತರಾಗಿ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಪ್ರಿಯಾಂಕ ಖರ್ಗೆ, ಶಿವಾನಂದ ಪಾಟೀಲ, ಎಸ್.ಎಸ್. ಮಲ್ಲಿಕಾರ್ಜುನ, ಲಕ್ಷ್ಮೀ ಹೆಬ್ಬಾಳಕರ, ಶಾಸಕರಾದ ಯಶವಂತರಾಯಗೌಡ ಪಾಟೀಲ, ಲಕ್ಷ್ಮಣ ಸವದಿ, ಪ್ರಕಾಶ ಹುಕ್ಕೇರಿ, ಎಚ್.ವೈ. ಮೇಟಿ, ಜೆ.ಟಿ. ಪಾಟೀಲ, ವಿಜಯಾನಂದ ಕಾಶಪ್ಪನವರ, ಸಿದ್ದು ಸವದಿ, ಭೀಮಸೇನ ಚಿಮ್ಮನಕಟ್ಟಿ, ಜಗದೀಶ ಗುಡಗುಂಟಿ, ಸಂಸದರಾದ ಪಿ.ಸಿ. ಗದ್ದಿಗೌಡರ, ನಾರಾಯಣಸಾ ಭಾಂಡಗೆ, ವಿಪ ಸದಸ್ಯರಾದ ಹನುಮಂತ ನಿರಾಣಿ, ಸುನೀಲಗೌಡ ಪಾಟೀಲ, ಪಿ.ಎಚ್. ಪೂಜಾರ, ಉಮಾಶ್ರೀ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ. ರಾತ್ರಿ 9 ರಿಂದ 11ರವರೆಗೆ ಗುರುಕಿರಣ ಹಾಗೂ ತಂಡದವರಿಂದ ಚಿತ್ರ ಸಂಗೀತ ಸುಧೆ ನಡೆಯಲಿದೆ ಎಂದು ಮಾಹಿತಿ ನೀಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ, ರನ್ನ ಉತ್ಸವಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದ್ದು, 4 ಡಿವೈಎಸ್ಪಿ, 17 ಸಿಪಿಐ, 61 ಪಿಎಸ್ಐ, ಎಎಸ್ಐ, ಸಾವಿರಕ್ಕೂ ಅಧಿಕ ಪೊಲೀಸರು, 4 ಕೆಎಸ್ ಆರ್‌ ಪಿ, 5 ಡಿಆರ್‌ ತುಕಡಿ ನಿಯೋಜಿಸಲಾಗಿದೆ. ಪಾರ್ಕಿಂಗ್ ವ್ಯವಸ್ಥೆ, ಸಿಸಿಟಿವಿ ಅಳವಡಿಸಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಪಂ ಸಿಇಒ ಶಶಿಧರ ಕುರೇರ ಇದ್ದರು.

ಬಾಕ್ಸ್----

ಚಿತ್ರ ಸಂಗೀತ ಲಹರಿ:

23ರಂದು ಬೆಳಗ್ಗೆ 10 ಗಂಟೆಗೆ ಮುಧೋಳ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ರನ್ನ ಕ್ರೀಡಾಂಗಣದವರೆಗೆ ನಡೆಯಲಿರುವ ಜಾನಪದ ಕಲಾವಾಹಿನಿ ಕಲಾತಂಡಗಳ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಚಾಲನೆ ನೀಡುವರು. ಬೆಳಗ್ಗೆ 11 ಗಂಟೆಗೆ ವಿಚಾರಗೋಷ್ಠಿ, ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ 1 ಗಂಟೆಗೆ ಡಾ.ಅಂಬೇಡ್ಕರ್‌ ಭವನದ ಕೆ.ಪಿ. ನಾಡಗೌಡರ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ಸಂಜೆ 4 ಗಂಟೆಗೆ ಕವಿಚಕ್ರವರ್ತಿ ರನ್ನ ಕ್ರೀಡಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಲಿದ್ದು, ರಾತ್ರಿ 8 ರಿಂದ 10ರವರೆಗೆ ರಾಜೇಶ ಕೃಷ್ಣನ್ ಹಾಗೂ ಅರ್ಜುನ ಜನ್ಯ ತಂಡದವರಿಂದ ಚಿತ್ರ ಸಂಗೀತ ಲಹರಿ ಜರುಗಲಿದೆ.

24ರಂದು ಬೆಳಗ್ಗೆ 10.30ಕ್ಕೆ ಕವಿಗೋಷ್ಠಿ, ಸಂಜೆ 4 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, ಸಮಾರೋಪ ಸಮಾರಂಭ ನಡೆಯಲಿದೆ. ಶ್ರೀ ಮುಕುಟ ಸ್ಮರಣೆ ಸಂಚಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲೋಕಾರ್ಪಣೆಗೊಳಿಸುವರು. ರಾತ್ರಿ 10 ರಿಂದ 10.30ರವರೆಗೆ ವಿಜಯ ಪ್ರಕಾಶ ಹಾಗೂ ತಂಡದವರಿಂದ ಚಿತ್ರ ಸಂಗೀತ ಸೌರಭ ಜರುಗಲಿದೆ.

ಉತ್ಸವದಲ್ಲಿ ಅಂತರರಾಜ್ಯ ಮಹಿಳಾ ಮತ್ತು ಪುರುಷರ ಕಬಡ್ಡಿ, ಸಂಗ್ರಾಣಿ ಕಲ್ಲು, ಗುಂಡು ಹಾಗೂ ಚೀಲ ಎತ್ತುವುದು, ಮಲ್ಲಕಂಬ ಸಾಹಸ ಪ್ರದರ್ಶನ, ಹಗ್ಗ ಜಗ್ಗಾಟ, ಓಟದ ಸ್ಪರ್ಧೆಗಳು, ಮಹಿಳೆಯರಿಗಾಗಿ ರಂಗೋಲಿ, ಮೆಹೆಂದಿ ಸ್ಪರ್ಧೆಗಳು ನಡೆಯಲಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.