ನಾಡ ಉತ್ಸವಗಳನ್ನೇ ಮೀರಿಸಿದ ರನ್ನ ವೈಭವ

| Published : Feb 25 2025, 12:48 AM IST

ಸಾರಾಂಶ

ಏಳು ವರ್ಷಗಳಿಂದ ಹಲವು ಕಾರಣಗಳಿಂದ ನಿಂತಿದ್ದ ರನ್ನ ವೈಭವ ಮತ್ತೆ 2025ರ ಆರಂಭದಲ್ಲಿ ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆದು ನಾಡಿನ ಹಲವು ಸಾಂಸ್ಕೃತಿಕ ಉತ್ಸವ ನಾಚುವಂತೆ ಮಾಡಿತು. ಜಿಲ್ಲೆಯ ವೈಭವ ಮುನ್ನೆಲೆಗೆ ತಂದಿದೆ ಎಂದರೆ ತಪ್ಪಾಗಲಾರದು.

ಈಶ್ವರ ಶೆಟ್ಟರ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಏಳು ವರ್ಷಗಳಿಂದ ಹಲವು ಕಾರಣಗಳಿಂದ ನಿಂತಿದ್ದ ರನ್ನ ವೈಭವ ಮತ್ತೆ 2025ರ ಆರಂಭದಲ್ಲಿ ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆದು ನಾಡಿನ ಹಲವು ಸಾಂಸ್ಕೃತಿಕ ಉತ್ಸವ ನಾಚುವಂತೆ ಮಾಡಿತು. ಜಿಲ್ಲೆಯ ವೈಭವ ಮುನ್ನೆಲೆಗೆ ತಂದಿದೆ ಎಂದರೆ ತಪ್ಪಾಗಲಾರದು.

ಹಂಪಿ ಉತ್ಸವ, ಮೈಸೂರಿನ ದಸರಾ ಕಾರ್ಯಕ್ರಮಗಳು ರಾಜ್ಯದ ಗಮನ ಸೆಳೆಯುವ ಸಾಂಸ್ಕೃತಿಕ ಕಾರ್ಯಕ್ರಮ ಮೀರಿಸುವಂತೆ ಮುಧೋಳದ ರನ್ನ ವೈಭವ ಮೂರು ದಿನಗಳ ಕಾಲ ಕೇವಲ ಮನರಂಜನೆಗೆ ಸೀಮಿತವಾಗದೆ ಇತರ ಚಟುವಟಿಕೆ ನಡೆಸುವ ಮೂಲಕ ಮಾದರಿ ಉತ್ಸವವಾಗಿದೆ ಎಂದರೆ ತಪ್ಪಾಗಲಾರದು.

ಸಾಹಿತ್ಯ, ಸಂಸ್ಕೃತಿಯ ಅನಾವರಣ:

ರನ್ನನ ಹೆಸರಿನಲ್ಲಿ ನಡೆಯುವ ಉತ್ಸವ ಕೇವಲ ವೈಭವ ಸಾರಿದರೆ ಸಾಲದು. ಜೊತೆಗೆ ರನ್ನನ ಸಾಹಿತ್ಯದ ಅವಲೋಕನ, ರನ್ನನ ಸಮಕಾಲಿನ ಕವಿಗಳ ಸಾಹಿತ್ಯದ ವಿಚಾರಗೋಷ್ಠಿ, ಗದಾಯುದ್ಧದ ರಚನೆಯ ಸಂದರ್ಭದಲ್ಲಿನ ಹಳೆಗನ್ನಡದ ಶ್ರೀಮಂತಿಕೆ ಪರಿಚಯ ಮಾಡುವ ಪ್ರಯತ್ನ ಮೂರು ದಿನಗಳ ಕಾಲ ನಡೆಯಿತು. ಅದರಲ್ಲಿ ರನ್ನನ ಬಾಲ್ಯ, ರನ್ನನ ಸಾಹಿತ್ಯಿಕ ಸೇವೆ, ರನ್ನ ರಸಾಯನ ಅಂದಿನ ಚಾರಿತ್ರಿಕ ಘಟನೆಗಳ ನೆನಪು, ರನ್ನ ಹೇಗೆ ಶಕ್ತಿ ಕವಿಯಾದ, ರನ್ನನ ಕಾವ್ಯದಲ್ಲಿ ಬರುವ ನಿಲುವು, ರನ್ನನ ಕಾವ್ಯದರ್ಶನ ಪರಿಚಯವನ್ನು ವಿದ್ವಾಂಸರು ಮಂಡಿಸಿದ ಪರಿ ನಿಜಕ್ಕೂ ಹಳೆಗನ್ನಡದ ಸಾಹಿತ್ಯದ ವೈವಿಧ್ಯತೆ ಅನಾವರಣಗೊಳಿಸಿತ್ತು.

ಗಮನ ಸೆಳೆದ ಸಾಂಪ್ರದಾಯಿಕ ಕಾರ್ಯಕ್ರಮ:

ಮನರಂಜನೆಗೆ ಮಾತ್ರ ವೈಭವ ನಡೆಯದೆ ಗ್ರಾಮೀಣ ಭಾಗದ ಕಲೆಗಳಿಗೆ ಅದರಲ್ಲೂ ಸಾಂಪ್ರದಾಯಿಕ ಕಲೆಗಳಾದ ಚೌಡಕಿ ಪದ, ಡೊಳ್ಳಿನ ಪದ, ಗೊಂಧಳಿ ಪದ, ಲಂಬಾಣಿ ನೃತ್ಯ, ಜೋಗತಿ ನೃತ್ಯ, ಹಲಗೆ ಮೇಳ, ಕರಡಿ ಮಜಲು, ಶಹನಾಯಿ ವಾದನ, ಸಂಬಾಳವಾದನದಂತಹ ಜಾನಪದ ಕಲೆಗಳಿಗೆ ರನ್ನ ವೈಭವ ಸಾಕ್ಷಿಯಾಯಿತು. ಜೊತೆಗೆ ಅಂತರರಾಜ್ಯ ಕಲಾವಿದರಿಂದ ನಡೆದ ಭರತನಾಟ್ಯ, ಒಡಿಸ್ಸಿ ನೃತ್ಯ ಪ್ರದರ್ಶನ ನಿಜಕ್ಕೂ ಕಲಾವಿದರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿತ್ತು.

ಕಬಡ್ಡಿ, ಮಹಿಳಾ ಕಬಡ್ಡಿ, ಮಲ್ಲಕಂಬ ಸಾಧನ, ಹಗ್ಗಜಗ್ಗಾಟ ಸಂಗ್ರಾಣಿ ಕಲ್ಲು ಎತ್ತುವ ಸಾಹಸ ಕ್ರೀಡೆಗಳು ಯುವಸಮೂವನ್ನು ಆಕರ್ಷಿಸಿದರೆ ಮಹಿಳೆಯರಿಗಾಗಿ ಏರ್ಪಡಿಸಿದ್ದ ರಂಗೋಲಿ ಹಾಗೂ ಮೆಹಂದಿ ಸ್ಪರ್ಧೆಗಳು ಗಮನ ಸೆಳೆದವು.

ಯುವ ಸಮೂಹ ರಂಜಿಸಿದ ಸಂಗೀತ ಸುಧೆ:

ರನ್ನ ವೈಭವದ ವೇದಿಕೆಯಲ್ಲಿ ಮೂರು ದಿನಗಳ ಕಾಲ ಸಹಸ್ರಾರು ಪ್ರೇಕ್ಷಕರನ್ನು ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದು ಚಿತ್ರ ಸಂಗೀತ ಸುಧೆ. ರನ್ನ ಬೆಳಗಲಿಯಲ್ಲಿ ಗುರುಕಿರಣ ತಂಡದಿಂದ ಮೂಡಿ ಬಂದ ಚಿತ್ರಗೀತೆಗಳು, ನೃತ್ಯಗಳು ಗ್ರಾಮೀಣ ಭಾಗದಲ್ಲಿಯೂ ಬಹುದೊಡ್ಡ ಗಾಯಕರಿಂದ ನಡೆದ ಕಾರ್ಯಕ್ರಮಕ್ಕೆ ಮನಸೋತರೆ ಮುಧೋಳದಲ್ಲಿ ಎರಡು ದಿನಗಳ ಕಾಲ ನಡೆದ ಸಂಗೀತ ಸುಧೆಯಲ್ಲಿ ರಾಜೇಶ ಕೃಷ್ಣನ್ ಹಾಗೂ ಅರ್ಜುನ ಜನ್ಯಾ ತಂಡದಿಂದ ಮೂಡಿ ಬಂದ ಸಂಗೀತ ಲಹರಿ ರಾತ್ರಿ 3ರವರೆಗೆ ನಡೆಯಿತು. ಕೊನೆಯ ದಿನ ನಡೆದ ಹಿನ್ನೆಲೆ ಗಾಯಕ ವಿಜಯಪ್ರಕಾಶ್‌ ತಂಡದಿಂದ ನಡೆದ ಚಿತ್ರ ಗೀತೆಗಳ ಸಂಭ್ರಮಕ್ಕೆ ಇಡೀ ಮೂಧೋಳವೇ ಸಂಭ್ರಮಿಸಿತು.

ಸಚಿವರಿಗೆ ಅಭಿನಂದನೆಯ ಮಹಾಪೂರ:

ಏಳು ವರ್ಷಗಳ ನಂತರ ಮತ್ತೆ ರನ್ನ ವೈಭವ ಕಾರ್ಯಕ್ರಮಕ್ಕೆ ಮರುಜೀವ ತುಂಬಿದ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಕಾರ್ಯಕ್ರಮ ಯಶಸ್ವಿಗೊಳಿಸಿದ ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಆರ್.ಬಿ. ತಿಮ್ಮಾಪೂರ ಅವರ ಕಾರ್ಯವೈಖರಿಯನ್ನು ರನ್ನನ ಅಭಿಮಾನಿಗಳು ಸಚಿವರನ್ನು ಅಭಿನಂದಿಸಿದ್ದಾರೆ. ಜಿಲ್ಲಾಡಳಿತದ ಹಲವು ದಿನಗಳ ನಿರಂತರ ಶ್ರಮಕ್ಕೆ ಸಿಕ್ಕ ಪ್ರತಿಫಲ ಇದಾಗಿದೆ.