೨೦೩೦ರ ವೇಳೆಗೆ ಎಚ್‌ಐವಿ ಮುಕ್ತ ಭಾರತ ದೇಶದ ಗುರಿ-ಸದಾನಂದಸ್ವಾಮಿ

| Published : Dec 10 2024, 12:34 AM IST

ಸಾರಾಂಶ

ವಿಶ್ವ ಆರೋಗ್ಯ ಸಂಸ್ಥೆಯು ೨೦೩೦ರ ವೇಳೆಗೆ ಎಚ್.ಐ.ವಿ. ಮುಕ್ತ ಭಾರತ ದೇಶವನ್ನಾಗಿ ಮಾಡುವ ಗುರಿ ಹೊಂದಿದೆ. ವಿದ್ಯಾರ್ಥಿಗಳು, ಉಪನ್ಯಾಸಕರು, ಆರೋಗ್ಯ ಇಲಾಖೆ, ಇತರ ಎಲ್ಲ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಎಚ್.ಐ.ವಿ., ಏಡ್ಸ್ ಬಗ್ಗೆ ತಿಳಿದುಕೊಂಡು ಇತರರಿಗೂ ಜಾಗೃತಿ ಮೂಡಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಸಿ. ಸದಾನಂದಸ್ವಾಮಿ ಹೇಳಿದರು.

ಹಾವೇರಿ: ವಿಶ್ವ ಆರೋಗ್ಯ ಸಂಸ್ಥೆಯು ೨೦೩೦ರ ವೇಳೆಗೆ ಎಚ್.ಐ.ವಿ. ಮುಕ್ತ ಭಾರತ ದೇಶವನ್ನಾಗಿ ಮಾಡುವ ಗುರಿ ಹೊಂದಿದೆ. ವಿದ್ಯಾರ್ಥಿಗಳು, ಉಪನ್ಯಾಸಕರು, ಆರೋಗ್ಯ ಇಲಾಖೆ, ಇತರ ಎಲ್ಲ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಎಚ್.ಐ.ವಿ., ಏಡ್ಸ್ ಬಗ್ಗೆ ತಿಳಿದುಕೊಂಡು ಇತರರಿಗೂ ಜಾಗೃತಿ ಮೂಡಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಸಿ. ಸದಾನಂದಸ್ವಾಮಿ ಹೇಳಿದರು.

ನಗರದ ಜಿಲ್ಲಾ ಆರೋಗ್ಯ ಭವನದಲ್ಲಿ ವಿಶ್ವ ಏಡ್ಸ್ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ವರ್ಷದ ಘೋಷವಾಕ್ಯದಂತೆ ಹಕ್ಕುಗಳನ್ನು ಪಡೆಯಲು ಸರಿಯಾದ ಮಾರ್ಗ ಅನುಸರಿಸೋಣ. ನನ್ನ ಆರೋಗ್ಯ ನನ್ನ ಹಕ್ಕು ಎಂಬಂತೆ ಎಲ್ಲರೂ ಕರ್ತವ್ಯ ನಿಭಾಯಿಸುವ ಜತೆಗೆ ಯುವ ಜನರಿಗೆ ಎಚ್‌ಐವಿ, ಏಡ್ಸ್ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ನಾಗರಿಕರು ತಮ್ಮ ಹಕ್ಕುಗಳನ್ನು ಪಡೆಯುವ ಜತೆಗೆ ತಮ್ಮ ಕರ್ತವ್ಯ ನಿಭಾಯಿಸಬೇಕು. ಈ ಹಿನ್ನೆಲೆಯಲ್ಲಿ ಎಲ್ಲರೂ ಎಚ್.ಐ.ವಿ., ಏಡ್ಸ್ ತಡೆಗಟ್ಟಲು ಕೈಜೋಡಿಸೋಣ ಎಂದು ಕರೆ ನೀಡಿದರು.

ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಆರ್. ಮುತಾಲಿಕದೇಸಾಯಿ ಮಾತನಾಡಿ, ಆರೋಗ್ಯ ಇಲಾಖೆಗೆ ಹಾಗೂ ಕಾನೂನು ಇಲಾಖೆಗೆ ಅವಿನಾಭಾವ ಸಂಬಂಧವಿದೆ. ಆರೋಗ್ಯ ಇಲಾಖೆ ಜನರಿಗೆ ಆರೋಗ್ಯ ನೀಡಿದರೆ, ನ್ಯಾಯಾಂಗ ಇಲಾಖೆ ಜನರಿಗೆ ಬದುಕುವ ರೀತಿ-ನೀತಿ, ಹಕ್ಕುಗಳು ಮತ್ತು ಕರ್ತವ್ಯಗಳನ್ನು ಒದಗಿಸಿಕೊಡುತ್ತದೆ. ಹಾಗಾಗಿ ಆರೋಗ್ಯ ಇಲಾಖೆಯ ಪ್ರತಿ ಕಾರ್ಯಕ್ರಮಗಳಲ್ಲೂ ಕಾನೂನು ಇಲಾಖೆ ಕೈಜೋಡಿಸುತ್ತದೆ. ಎರಡು ಇಲಾಖೆಗಳು ಒಂದೇ ನಾಣ್ಯದ ಎರಡು ಮುಖಗಳಂತೆ ಕೆಲಸ ನಿರ್ವಹಿಸಬೇಕಿದೆ. ಏಡ್ಸ್‌ನಂತಹ ಮಹಾ ಕಾಯಿಲೆಗಳಿಗೆ ತುತ್ತಾಗುತ್ತಿರುವ ಯುವಜನತೆಯನ್ನು ರಕ್ಷಿಸುವ ಹಾಗೂ ಜಾಗೃತಿ ಮೂಡಿಸುವ ಕೆಲಸವನ್ನು ನಾವು-ನೀವೆಲ್ಲ ಮಾಡೋಣ ಎಂದು ಹೇಳಿದರು.

ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಚ್. ಜತ್ತಿ ಮಾತನಾಡಿ, ಎಚ್‌ಐವಿಯಂತಹ ಕಾಯಿಲೆಯಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಎಚ್‌ಐವಿ ಕುರಿತು ಯುವ ಸಮೂಹಕ್ಕೆ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ನೀಲೇಶ ಎಂ.ಎನ್. ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸರ್ವೇಕ್ಷಣಾ ಘಟಕದ ನಿಯಂತ್ರಣಾಧಿಕಾರಿ ಡಾ. ಜಗದೀಶ ಪಾಟೀಲ ಮಾತನಾಡಿದರು.

ಸ್ಪರ್ಧಾ ವಿಜೇತರು: ಎಚ್.ಐ.ವಿ., ಏಡ್ಸ್ ಹಾಗೂ ರಕ್ತದಾನದ ಮಹತ್ವದ ಕುರಿತು ಜಿಲ್ಲೆಯ ಪ್ರೌಢಶಾಲಾ ವಿದ್ಯಾಥಿಗಳಿಗೆ ನಡೆಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ಟ್ರೋಫಿ ನೀಡಲಾಯಿತು.

ಸೇಂಟ್‌ ಆನ್ಸ್ ಪ್ರೌಢಶಾಲೆಯ ಸಂಜನಾ ಜಿ.ಬಿ. ಹಾಗೂ ಸಿಂಚನಾ ಡಿ.ಬಿ. ಪ್ರಥಮ, ಹಾವೇರಿ ಸರ್ಕಾರಿ ಕನ್ನಡ ಮಾಧ್ಯಮ ಹೈಸ್ಕೂಲ್ ಗಾಯಿತ್ರಿ ಎಸ್.ಕೆ. ಹಾಗೂ ಸಹನಾ ಎಚ್. ಮುಳಗುಂದ-ದ್ವಿತೀಯ, ಬಸಾಪುರ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಯ ರುಶೀತಾ ಎಸ್.ಎಸ್. ಹಾಗೂ ಚೈತ್ರಾ ಆರ್.ವೈ-ತೃತೀಯ ಹಾಗೂ ಸಂಗೂರ ಶ್ರೀ ಕುಮಾರೇಶ್ವರ ಪ್ರೌಢಶಾಲೆ ಲಕ್ಷ್ಮೀ ಹಾದರಗೇರಿ ಮತ್ತು ಸುಧಾ ಕನ್ನೇಶ್ವರ ಸಮಾಧಾನಕರ ಬಹುಮಾನ ಪಡೆದುಕೊಂಡಿದ್ದಾರೆ.

ಸನ್ಮಾನ: ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಎಚ್.ಐ.ವಿ. ಗುರಿ ಮತ್ತು ಪ್ರಗತಿ ಸಾಧಿಸಿದ ಸವಣೂರು ಐಸಿಟಿಸಿ ಕೇಂದ್ರ, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿರುವ ಶಿಗ್ಗಾಂವ ಐಸಿಟಿಸಿ ಕೇಂದ್ರ, ಸಮಯಕ್ಕೆ ಸರಿಯಾಗಿ ವರದಿಗಳನ್ನು ಸಲ್ಲಿಸಿದ ರಟ್ಟಿಹಳ್ಳಿ ಐಸಿಟಿಸಿ ಕೇಂದ್ರ, ಇಂಡೆಕ್ಸ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಪರೀಕ್ಷೆಗಳನ್ನು ಮಾಡಿದ ಹಿರೇಕೆರೂರು ಐಸಿಟಿಸಿ ಕೇಂದ್ರ, ಮುಖ್ಯವಾಹಿನಿ ತರಬೇತಿಗಳನ್ನು ಅತಿ ಹೆಚ್ಚು ಮಾಡಿದ ಜಿಲ್ಲಾ ಆಸ್ಪತ್ರೆ ಪಿಪಿಟಿಸಿಟಿ ಕೇಂದ್ರ, ಕೆಎಲ್‌ಇ ಸೊಸೈಟಿಯ ಜಿ.ಎಚ್. ಕಾಲೇಜ್, ಅತ್ಯುತ್ತಮ ಐಸಿಟಿಸಿ ಕೇಂದ್ರ ಐಸಿಟಿಸಿ ಜಿಲ್ಲಾ ಆಸ್ಪತ್ರೆ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು.

ಅತ್ಯುತ್ತಮ ಎ.ಆರ್.ಟಿ. ಕೇಂದ್ರದ ಸಿಬ್ಬಂದಿ ಪ್ರಯೋಗ ಶಾಲಾ ತಂತ್ರಜ್ಞ ನಫೀಜ್‌ಅಹ್ಮದ, ಅತ್ಯುತ್ತಮ ರಕ್ತನಿಧಿ ಕೇಂದ್ರದ ಸಿಬ್ಬಂದಿ ಪುಷ್ಪಾವತಿ ಸಜ್ಜನರ, ಅತ್ಯುತ್ತಮ ಡಿ.ಎಸ್.ಆರ್.ಸಿ. ಕೇಂದ್ರದ ಸಿಬ್ಬಂದಿ ಎ.ಕೆ. ಭಾಗವಾನ, ಅತ್ಯುತ್ತಮ ಡ್ಯಾಪ್ಕೂ ಕೇಂದ್ರದ ಸಿಬ್ಬಂದಿ ಸತೀಶಕುಮಾರ ಹೊಸಮನಿ ಅವರನ್ನು ಸನ್ಮಾಸಲಾಯಿತು.