ಕಾರ್ಮಿಕರಿಗೆ ಸರ್ಕಾರಿ ಸೌಲಭ್ಯ ತಲುಪಿಸುವ ಗುರಿ

| Published : Jul 24 2025, 12:48 AM IST

ಸಾರಾಂಶ

ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರಾಜ್ಯದಲ್ಲಿಯೇ ಸಂಘಟಿತ ಮತ್ತು ಅಸಂಘಟಿತ ಅಲೆಮಾರಿ ಕಾರ್ಮಿಕರೆಲ್ಲರಿಗೂ ಸರ್ಕಾರದಿಂದ ಸಿಗುವ ಪ್ರತಿಯೊಂದು ಸೌಲಭ್ಯಗಳನ್ನು ಒದಗಿಸುವ ಗುರಿ ಹೊಂದಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.

ನವನಗರದ ಕಲಾಭವನದಲ್ಲಿ ಬುಧವಾರ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ, ಜಿಪಂ ಸಹಯೋಗದಲ್ಲಿ ಹಮ್ಮಿಕೊಂಡ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್‌ ವಿತರಣೆ ಹಾಗೂ ವಿವಿಧ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಸಂಘಟಿತ ವಲಯದ ಕಾರ್ಮಿಕಕರು ಸಾಮಾಜಿಕ, ಆರ್ಥಿಕವಾಗಿ ದುರ್ಬಲರಾಗಿದ್ದು, ಸಂಘಟಿತ ಕಾರ್ಮಿಕರಿಗೆ ದೊರಕುವ ಕಾನೂನಾತ್ಮಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅಂತಹ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದರು.

ದೇಶದಲ್ಲಿ ದುಡಿಯುವ ವರ್ಗದಲ್ಲಿ ಶೇ.80ಕ್ಕಿಂತ ಹೆಚ್ಚು ಕಾರ್ಮಿಕರು ಅಸಂಘಟಿತ ವಲಯದಲ್ಲಿ ಇದ್ದಾರೆಂದು ಅಂದಾಜಿಸಲಾಗಿದೆ. ಕಾರ್ಮಿಕರಿಗಾಗಿ ಮೂರು ಬಿಲ್‌ಗಳನ್ನು ಜಾರಿಗೆ ತರಲಾಗಿದೆ. ಬೆಂಗಳೂರು ನಗರದಂತಹ ಅಭಿವೃದ್ಧಿ ಹೊಂದಿದ ನಗರದಲ್ಲಿ ಆನ್‌ಲೈನ್ ಕಂಪನಿಗಳಲ್ಲಿ ಸೇಲ್ಸ್ ಮ್ಯಾನ್, ಡಿಲೇವರಿ ಕಾರ್ಮಿಕರಿಗಾಗಿ ಗಿಗ್ ಬಿಲ್ ಉಪಯುಕ್ತವಾಗಿದೆ. ₹5 ಲಕ್ಷದಷ್ಟು ಕಾರ್ಮಿಕರು ಇದರ ಪ್ರಯೋಜನ ಪಡೆದಿದ್ದಾರೆ. ಸಿನಿ ಬಿಲ್ ಅಡಿ ಚಿತ್ರರಂಗದ ಲೈಟ್ ಬಾಯ್‌ಗಳಿಂದ ಹಿಡಿದು ನಾಯಕ ನಟ, ನಿರ್ದೇಶಕ ಹಾಗೂ ಸಹ ಕಲಾವಿದರನ್ನು ಗುರುತಿಸಿ ಅಲ್ಲದೇ ರಂಗಭೂಮಿ ಕಲಾವಿದರು ಹಾಗೂ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಅನುಕೂಲವಾಗಲಿದೆ ಎಂದರು.ಟ್ರಾನ್ಸ್‌ಪೋರ್ಟ್‌ ಬಿಲ್ ಅಡಿ ಚಾಲಕರು, ಕ್ಲೀನರ್, ಪಂಚರ್‌, ಗ್ಯಾರೇಜ್‌ನಲ್ಲಿ ಕಾರ್ಯನಿರ್ವಹಿಸುವ ಹಾಗೂ ಪೆಂಟಿಂಗ್ ಕೆಲಸದಲ್ಲಿ ತೊಡಗಿರುವವರಿಗೆ ಅನುಕೂಲವಾಗುವ ಯೋಜನೆಯಾಗಿದೆ. ಇದರಲ್ಲಿ ಈಗಾಗಲೇ 25 ಲಕ್ಷ ಜನರಿಗೆ ಸ್ಮಾರ್ಟ್‌ ಕಾರ್ಡ್‌ ವಿತರಿಸಲಾಗಿದೆ. ಅಲ್ಲದೇ ಅಪಘಾತದಲ್ಲಿ ಮರಣ ಹೊಂದಿದ ಚಾಲಕರಿಗೆ ₹5 ಲಕ್ಷ ವಿಮೆ ನೀಡಲಾಗುತ್ತಿದೆ. ಒಟ್ಟಾರೆ ಕಾರ್ಮಿಕಕರಿಗೆ ಅನುಕೂಲವಾಗುವಂತಹ ಅಂಬೇಡ್ಕರ್‌ ಕಾರ್ಮಿಕರ ಸಹಾಯಹಸ್ತ, ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ, ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆ, ದಿನಪತ್ರಿಕೆ ವಿತರಣಾ ಕಾರ್ಮಿಕ ಅಪಘಾತ ಪರಿಹಾರ, ವೈದ್ಯಕೀಯ ಸೌಲಭ್ಯ, ರಾಜ್ಯ ಮೋಟಾರ್‌ ಸಾರಿಗೆ ಹಾಗೂ ಇತರೆ ಕಾರ್ಮಿಕರ ಸಾಮಾಜಿಕ ಭದ್ರತೆ ಸೇರಿದತೆ ಇತರೆ ಸೌಲಭ್ಯಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಮಾತನಾಡಿ, ಜೀವನಕ್ಕೆ ಉಪಯುಕ್ತ ಕಾರ್ಯನಿರ್ವಹಿಸುವಲ್ಲಿ ದುಡಿಯುವ ಕಾರ್ಮಿಕರ ಕಾರ್ಯ ಮಹತ್ವದ್ದಾಗಿದೆ. ಅಂತಹ ಕಾರ್ಮಿಕರು ನೆಮ್ಮದಿಯಿಂದ ಪರಾವಲಂಬಿಗಳಾಗದೇ ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದೆ ಬರಲಿ ಎಂಬ ಕಾರ್ಮಿಕ ಇಲಾಖೆ ಹಲವಾರು ಕಾರ್ಯಕ್ರಮ ಹಾಕಿಕೊಂಡಿದೆ. ಬೆವರು ಸುರಿಸಿ ರಕ್ತ ಹರಿಸಿ, ಹಗಲಿರುಳು ದುಡಿದು ಯಜಮಾನನನ್ನು ಶ್ರೀಮಂತನಾಗಿಸುವಲ್ಲಿ ಕಾರ್ಮಿಕಕರು ನೋವು ಉಂಡು ನಲಿವು ಹಂಚಿದವರಾಗಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಬಾಗಲಕೋಟೆ ಜಿಲ್ಲೆ ಕಾರ್ಮಿಕರಿಗೆ ಅತೀ ಹೆಚ್ಚು ಯೋಜನೆಗಳು ತಲುಪುವಂತಾಗಲಿ ಎಂದು ತಿಳಿಸಿದರು.

ಪ್ರಾರಂಭದಲ್ಲಿ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಜಂಟಿ ಕಾರ್ಯದರ್ಶಿಡಾ.ಎಸ್.ಬಿ.ರವಿಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾರ್ಮಿಕರಿಗೆ ಸಾಂಕೇತಿಕವಾಗಿ ಸ್ಮಾರ್ಟ್‌ ಕಾರ್ಡ್‌ಗಳನ್ನು ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಬೀಳಗಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಜೆ.ಟಿ.ಪಾಟೀಲ, ಶಾಸಕ ಹಾಗೂ ರಾಜ್ಯ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ನಗರಸಭೆ ಅಧ್ಯಕ್ಷೆ ಸವಿತಾ ಲೆಂಕನ್ನವರ, ಮಾಜಿ ಶಾಸಕ ಎಸ್.ಜಿ.ನಂಜಯ್ಯನವರ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಾಜಿ ಮೇಯರ್ ಅನೀಲಕುಮಾರ ಪಾಟೀಲ, ಕಾರ್ಮಿಕ ಇಲಾಖೆಯ ಬೆಳಗಾವಿ ಪ್ರಾದೇಶಿಕ ಉಪ ಆಯುಕ್ತ ಡಿ.ಜಿ.ನಾಗೇಶ, ಸಹಾಯಕ ಕಾರ್ಮಿಕ ಆಯುಕ್ತ ಕೆ.ಬಿ.ನಾಗರಾಜ, ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಜಿಪಂ ಸಿಇಒ ಶಶಿಧರ ಕುರೇರ, ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ, ಕಾರ್ಮಿಕ ನಿರೀಕ್ಷಕರಾದ ರಾಜಶೇಖರ ಕುರಡಿಕೇರಿ, ರಮೇಶ ವಂಗಿ, ರಾಕೇಶ ಶಿರಕನಹಳ್ಳಿ, ಅಶೋಕ ವಡ್ಡರ ಸೇರಿದಂತೆ ಇತರರು ಉಪಸ್ಥಿತರಿದ್ದರು.