₹೩.೮೦ ಕೋಟಿ ವೆಚ್ಚದಲ್ಲಿ ಕನ್ನಡ ಭವನ ನಿರ್ಮಾಣದ ಗುರಿ

| Published : Apr 04 2025, 12:48 AM IST

ಸಾರಾಂಶ

ಭದ್ರಾವತಿ: ತಾಲೂಕಿನಲ್ಲಿ ಸಾಹಿತ್ಯ, ಕನ್ನಡಾಭಿಮಾನಿಗಳು ಹಾಗೂ ಸಮಸ್ತ ನಾಗರಿಕರ ಬಹುಬೇಡಿಕೆಯಾಗಿರುವ ಕನ್ನಡ ಸಾಹಿತ್ಯ ಭವನ ನಿರ್ಮಾಣ ಮಾಡುವ ಆಶಯ ಇದೀಗ ಈಡೇರುತ್ತಿದ್ದು, ಸುಮಾರು ೩.೮೦ ಕೋಟಿ ರು. ವೆಚ್ಚದಲ್ಲಿ ಮಾದರಿ ಭವನ ನಿರ್ಮಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಆರ್ಥಿಕ ನೆರವಿನೊಂದಿಗೆ ಎಲ್ಲಾ ರೀತಿಯ ಸಹಕಾರ ನೀಡುವಂತೆ ಕನ್ನಡ ಸಾಹಿತ್ಯ ಭವನ ನಿರ್ಮಾಣ ಸಮಿತಿ ಅಧ್ಯಕ್ಷೆ ಎಮೆರಿಟಸ್ ಪ್ರಾಧ್ಯಾಪಕಿ ಡಾ.ವಿಜಯದೇವಿ ಮನವಿ ಮಾಡಿದರು.

ಭದ್ರಾವತಿ: ತಾಲೂಕಿನಲ್ಲಿ ಸಾಹಿತ್ಯ, ಕನ್ನಡಾಭಿಮಾನಿಗಳು ಹಾಗೂ ಸಮಸ್ತ ನಾಗರಿಕರ ಬಹುಬೇಡಿಕೆಯಾಗಿರುವ ಕನ್ನಡ ಸಾಹಿತ್ಯ ಭವನ ನಿರ್ಮಾಣ ಮಾಡುವ ಆಶಯ ಇದೀಗ ಈಡೇರುತ್ತಿದ್ದು, ಸುಮಾರು ೩.೮೦ ಕೋಟಿ ರು. ವೆಚ್ಚದಲ್ಲಿ ಮಾದರಿ ಭವನ ನಿರ್ಮಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಆರ್ಥಿಕ ನೆರವಿನೊಂದಿಗೆ ಎಲ್ಲಾ ರೀತಿಯ ಸಹಕಾರ ನೀಡುವಂತೆ ಕನ್ನಡ ಸಾಹಿತ್ಯ ಭವನ ನಿರ್ಮಾಣ ಸಮಿತಿ ಅಧ್ಯಕ್ಷೆ ಎಮೆರಿಟಸ್ ಪ್ರಾಧ್ಯಾಪಕಿ ಡಾ.ವಿಜಯದೇವಿ ಮನವಿ ಮಾಡಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕನ್ನಡಿಗರ ನಾಡು-ನುಡಿ, ನೆಲ-ಜಲ, ಸಂಸ್ಕೃತಿ-ಸಾಹಿತ್ಯಗಳ ಅಭಿವೃದ್ಧಿ ಹಾಗೂ ಸಂರಕ್ಷಣೆಗಾಗಿ ದುಡಿಯುವ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು. ಇದು ಪ್ರತಿ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಶಾಖೆಗಳನ್ನು ಸ್ಥಾಪಿಸಿ ಕನ್ನಡ ಜನತೆಯ ಸಾಂಸ್ಕೃತಿಕ ಬದುಕನ್ನು ಸಂರಕ್ಷಿಸುತ್ತಾ ಬಂದಿದೆ. ಇದರಲ್ಲಿ ನಮ್ಮ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಸ್ಥೆ ಅಸ್ತಿತ್ವದಲ್ಲಿದ್ದು, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ. ಸಂಗೀತ ಮೊದಲಾದವುಗಳಿಗೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿವೆ. ಕನ್ನಡ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ದತ್ತಿ ಕಾರ್ಯಕ್ರಮ, ವಿಶೇಷ ಉಪನ್ಯಾಸ, ಕಮ್ಮಟಗಳು, ಸಾಹಿತ್ಯ ಸಮ್ಮೇಳನಗಳನ್ನು ನಡೆಸುತ್ತಾ ಬಂದಿದ್ದು, ಜನರಲ್ಲಿ ಕನ್ನಡದ ಬಗ್ಗೆ ಅರಿವು ಮತ್ತು ಅಭಿಮಾನಗಳನ್ನು ಬೆಳೆಸುತ್ತಾ ಬಂದಿದೆ. ಕನ್ನಡದ ಸೇವೆಗಾಗಿ ಹಲವು ವರ್ಷಗಳಿಂದ ಸಕ್ರಿಯವಾಗಿ ದುಡಿಯುತ್ತಿರುವುದು ಶ್ಲಾಘನೀಯ ಎಂದರು.

ಇಂತಹ ತಾಲೂಕು ಪರಿಷತ್ ಯಾವುದೇ ಕಾರ್ಯಕ್ರಮ ಮಾಡಬೇಕಾದರೆ ಬಾಡಿಗೆಗೆ ಭವನವನ್ನು ತೆಗೆದುಕೊಂಡು ಆರ್ಥಿಕ ಹೊರೆಯನ್ನು ಅನುಭವಿಸುತ್ತಿದೆ. ಈ ಕೊರತೆಯನ್ನು ನಿವಾರಿಸಲು, ಕನ್ನಡಿಗರಿಗೆ ಉತ್ತಮ ಕಾರ್ಯಕ್ರಮಗಳನ್ನು ನೀಡಲು ಪರಿಷತ್ತಿಗೆ ಸ್ವತಂತ್ರ ಕಟ್ಟಡದ ಅನಿವಾರ್ಯತೆ ಇದೆ. ಪರಿಷತ್ ೧೦ ವರ್ಷಗಳ ಹಿಂದೆಯೇ ವಾರ್ಡ್ ನಂ.೨೮ರ ಹೊಸ ಸಿದ್ದಾಪುರದಲ್ಲಿ ೧೦೦*೭೯ ಅಡಿಗಳ ನಿವೇಶನ ಹೊಂದಿದೆ. ಈಗ ಇಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣ ಮಾಡಬೇಕೆಂದು ನಿರ್ಣಯ ಕೈಗೊಂಡು ಸಮಿತಿಯನ್ನು ರಚಿಸಲಾಗಿದೆ. ಸುಮಾರು ೩.೮೦ ಕೋಟಿಗಳ ವೆಚ್ಚದಲ್ಲಿ ಕನ್ನಡ ಸಾಹಿತ್ಯ ಭವನವನ್ನು ನಿರ್ಮಿಸಲು ಮುಂದಾಗಿದ್ದು, ಮೊದಲ ಹಂತದಲ್ಲಿ ಒಂದು ಕೋಟಿ ರು.ಗಳ ವೆಚ್ಚದಲ್ಲಿ ನೆಲ ಕಟ್ಟಡವನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ತಾಲೂಕಿನ ಸಮಸ್ತ ನಾಗರಿಕರು, ಕನ್ನಡ ಹಾಗೂ ಸಾಹಿತ್ಯಾಭಿಮಾನಿಗಳು ಕನ್ನಡ ನಾಡಿನ ಜಲ, ಭಾಷೆ ಮತ್ತು ಭೂಮಿಯ ಋಣ ತೀರಿಸಲು ಕನ್ನಡ ಸಾಹಿತ್ಯ ಭವನದ ನಿರ್ಮಾಣಕ್ಕೆ ಆರ್ಥಿಕ ಸಹಾಯದೊಂದಿಗೆ ಎಲ್ಲಾ ರೀತಿಯ ಸಹಕಾರ ನೀಡುವಂತೆ ಕೋರಿದರು. ಹೆಚ್ಚಿನ ಮಾಹಿತಿಗೆ ೯೪೪೮೯೩೯೪೯೦/೯೯೦೨೨೧೦೧೫೦ ೯೧೧೩೨೧೪೩೪೬/೯೮೮೦೦೭೦೯೮೯ ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದರು. ಡಾ.ಡಿ.ಪ್ರಭಾಕರ್ ಬೀರಯ್ಯ ಮಾತನಾಡಿ, ಸಾಹಿತ್ಯ ಭವನ ನಿರ್ಮಾಣ ಸಮಿತಿಯ ಪ್ರತಿಯೊಬ್ಬರು ತಮಗೆ ವಹಿಸಿರುವ ಜವಾಬ್ದಾರಿಗಳನ್ನು ಹೆಚ್ಚಿನ ಪಾರದರ್ಶಕವಾಗಿ ನಿರ್ವಹಿಸಲು ಕಟ್ಟಿಬದ್ಧರಾಗಿದ್ದೇವೆ. ಇದಕ್ಕೆ ತಕ್ಕಂತೆ ರೂಪುರೇಷೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಯಾವುದೇ ರೀತಿಯ ಗೊಂದಲಗಳಿಗೆ ಆಸ್ಪದವಿಲ್ಲದ ರೀತಿಯಲ್ಲಿ ಭವನ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಆರ್ಥಿಕ ವರ್ಷದ ಕೊನೆಯಲ್ಲಿ ಲೆಕ್ಕಪತ್ರ ಮಂಡಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಎಂ.ಈ ಜಗದೀಶ್, ಎಂ.ಎಸ್.ಸುಧಾಮಣಿ ವೆಂಕಟೇಶ್, ಡಿ.ನಾಗೋಜಿರಾವ್, ಬಿ.ಎಲ್.ಮೋಹನಕುಮಾರ್, ಕೋಡ್ಲು ಯಜ್ಞಯ್ಯ, ಟಿ.ತಿಮ್ಮಪ್ಪ ಮತ್ತಿತರರಿದ್ದರು.