ಸಾರಾಂಶ
ದಾವಣಗೆರೆಯಲ್ಲಿ ಲಿಂ.ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಸ್ಮರಣೋತ್ಸವ, ಲಿಂ.ಜಗದ್ಗುರು ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆ ಸಮಾರಂಭದಲ್ಲಿ ಶ್ರೀಶೈಲ ಜಗದ್ಗುರುಗಳು ಆಶೀರ್ವಚನ ನೀಡಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಯಾವುದೇ ಜಾತಿ, ಮತ, ವರ್ಣ, ವರ್ಗ ಮತ್ತು ಲಿಂಗ ಬೇದವಿಲ್ಲದೇ ಭೂಮಿಯಲ್ಲಿ ಜನ್ಮ ತಾಳಿದ ಸಮಸ್ತ ಮನುಕುಲದ ಉದ್ಧಾರವೇ ವೀರಶೈವ ಲಿಂಗಾಯತ ಧರ್ಮದ ಗುರಿಯಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.ನಗರದ ಎಂಸಿಸಿ ಬಿ ಬ್ಲಾಕ್‌ನಲ್ಲಿರುವ ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿಯವರ ಹಿರೇಮಠದ ಆವರಣದಲ್ಲಿ ಬುಧವಾರ ಸಂಜೆ ಲಿಂ.ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ 38ನೇ ಸ್ಮರಣೋತ್ಸವ ಮತ್ತು ಲಿಂ.ಜಗದ್ಗುರು ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ 13ನೇ ವರ್ಷದ ಪುಣ್ಯಾರಾಧನೆಯ ಸಮಾರಂಭದ ಸಮಾರೋಪ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ವೀರಶೈವ ಧರ್ಮವು ಬ್ರಾಹ್ಮಣ ಕ್ಷತ್ರಿಯ, ವೈಶ್ಯ, ಶೂದ್ರ ಮುಂತಾದ ಜಾತಿಗಳನ್ನಾಗಲಿ, ವಿಭಿನ್ನವಾದ ಯಾವ ಮತದವರೆಂಬುದನ್ನಾಗಲಿ ಬಡವ-ಶ್ರೀಮಂತ ಎಂಬ ಭೇದವನ್ನಾಗಲಿ ಸ್ತ್ರೀ-ಪುರುಷ ಎಂಬುದನ್ನಾಗಲಿ ಕೂಡ ನೋಡದೇ ಸನಾತನ ಕಾಲದಿಂದಲೂ ಎಲ್ಲರ ಉದ್ಧಾರವನ್ನು ಮಾಡುತ್ತ ಬಂದಿದೆ. ಹುಟ್ಟಿದ ಜಾತಿಯನ್ನು ನೋಡಿ ಈ ಧರ್ಮದ ದೀಕ್ಷೆಯನ್ನು ನೀಡುವುದಿಲ್ಲ, ಅಳವಡಿಸಿಕೊಂಡಿರುವ ನೀತಿಯನ್ನು ನೋಡಿ ಈ ಧರ್ಮದಲ್ಲಿ ಪ್ರವೇಶ ನೀಡಲಾಗುತ್ತದೆ ಎಂದು ಹೇಳಿದರು.ಪುರುಷರಿಗೆ ಯಾವ ಯಾವ ಧರ್ಮ ಸಂಸ್ಕಾರಗಳನ್ನು ಪಡೆದುಕೊಳ್ಳುವ ಅಧಿಕಾರವಿದೆಯೋ ಆ ಎಲ್ಲ ಅಧಿಕಾರಗಳನ್ನು ಮಹಿಳೆಯರಿಗೂ ನೀಡಲಾಗಿದೆ. ಈ ಧರ್ಮದಲ್ಲಿ ಹುಟ್ಟಿದ ನಂತರ ಧರ್ಮ ಸಂಸ್ಕಾರವನ್ನು ಪ್ರಾರಂಭಿಸುವುದಿಲ್ಲ, ಪ್ರಸವ ಪೂರ್ವದಲ್ಲಿಯೇ ಎಂಟನೇ ತಿಂಗಳು ಗರ್ಭವತಿ ತಾಯಿಯ ಉದರದಲ್ಲಿರುವ ಮಗುವಿಗೇನೆ ಲಿಂಗಧಾರಣೆ ಮಾಡುವ ವೈಜ್ಞಾನಿಕ ಪದ್ಧತಿ ಈ ಧರ್ಮದಲ್ಲಿ ಇದೆ ಎಂದರು.ಇಷ್ಟಲಿಂಗ ಧಾರಣೆ, ಪೂಜೆ ಮುಂತಾದ ವೀರಶೈವ ಧರ್ಮದ ಆಚರಣೆಗಳು ಜನ್ಮದಾರಭ್ಯ ಮರಣ ಪರ್ಯಂತ ಪ್ರತಿನಿತ್ಯ ಆಚರಿಸುವ ಮಹಾವ್ರತವಾಗಿವೆ. ಯಾವುದೇ ಕಾರಣಕ್ಕೂ ಯಾರೂ ಧರ್ಮವನ್ನು ತ್ಯಜಿಸಬಾರದು, ಎಷ್ಟೇ ತೊಂದರೆಗಳಿದ್ದರೂ ಸತ್ಯ ಹರಿಶ್ಚಂದ್ರನಂತೆ ದಿಟ್ಟತನದಿಂದ ಧರ್ಮವನ್ನು ಅನುಸರಿಸಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಬಸವನ ಬಾಗೇವಾಡಿಯ ಡಾ.ಒಡೆಯರ್ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ತೊಗರ್ಸಿಯ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಅಂಬಿಕಾನಗರದ ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ನಿಲೋಗಲ್ ಸಂಸ್ಥಾನ ಮಠದ ಶ್ರೀ ಅಭಿನವ ರೇಣುಕ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಹರ್ಲಾಪುರದ ಶ್ರೀಗಳು ಸಮ್ಮುಖ ವಹಿಸಿದ್ದರು. ಹಿಪ್ಪರಗಿಯ ವಿಶ್ರಾಂತ ಪ್ರಾಧ್ಯಾಪಕ ಸಿ.ಜಿ.ಮಠಪತಿ, ದಾವಣಗೆರೆ ಹರಿಹರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಎನ್.ಎ.ಮುರುಗೇಶ, ಎಸ್.ಜಿ.ಉಳುವಯ್ಯ, ಬನ್ನಯ್ಯ ಸ್ವಾಮಿ, ರಾಜಶೇಖರ ಗುಂಡಗಟ್ಟಿ, ಕೆ.ಎಂ.ಪರಮೇಶ್ವರಯ್ಯ, ಎನ್.ಎಚ್.ಪಟೇಲ್, ಎಂ.ಎನ್.ಹರೀಶ, ಹನುಮಂತಪ್ಪ ಇತರರು ಉಪಸ್ಥಿತರಿದ್ದರು.