ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಮೈಸೂರು ಜಿಲ್ಲೆಯ ಸರಗೂರು ಬಳಿಯ ಚಿಕ್ಕದೇವಮ್ಮನ ಬೆಟ್ಟಕ್ಕೆ ಪರ್ವ ಮಾಡಲು ಗೂಡ್ಸ್ ಆಟೋ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದು ನಾಲ್ಕು ಮಂದಿಗೆ ಗಂಭೀರ ಗಾಯವಾಗಿದ್ದು, ೬ ಮಂದಿಗೆ ಹೆಚ್ಚಿನ ಗಾಯವಾದ ಘಟನೆ ತಾಲೂಕಿನ ಅಣ್ಣೂರು ಕೇರಿ ಗ್ರಾಮದ ಬಳಿ ಸೋಮವಾರ ನಡೆದಿದೆ.ಅಣ್ಣೂರು ಕೇರಿ ಗ್ರಾಮದ ೧೮ ಮಂದಿ ಗೂಡ್ಸ್ ಆಟೋದಲ್ಲಿ ಚಿಕ್ಕದೇವಮ್ಮನ ಬೆಟ್ಟಕ್ಕೆ ತೆರಳುವಾಗ ಈ ಘಟನೆ ನಡೆದಿದ್ದು, ೪ ಮಂದಿ ಮೈಸೂರು ಕೆ.ಆರ್. ಆಸ್ಪತ್ರೆ, ೬ ಮಂದಿ ಚಾಮರಾಜನಗರ ಸಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇನ್ನುಳಿದ ೮ ಮಂದಿಗೆ ಸಣ್ಣ ಪುಟ್ಟ ಗಾಯಳಾಗಿವೆ. ಗುಂಡ್ಲುಪೇಟೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ವಾಪಸ್ ಮನೆಗೆ ತೆರಳಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಏನಿದು ಘಟನೆ?:ಗೂಡ್ಸ್ ಆಟೋದಲ್ಲಿ ಸೋಮವಾರ ಬೆಳಗ್ಗೆ ಅಣ್ಣೂರು ಕೇರಿಯಿಂದ ಮೈಸೂರು ಜಿಲ್ಲೆಯ ಸರಗೂರು ಬಳಿಯ ಚಿಕ್ಕದೇವಮ್ಮನ ಬೆಟ್ಟಕ್ಕೆ ಪರ್ವ ಮಾಡಲು ಸೌದೆ, ಒಲೆ, ಅಡುಗೆ ಸಾಮಗ್ರಿ ಜೊತೆ ತೆರಳುವಾಗ ಅಪಘಾತ ನಡೆದಿದೆ. ಚಾಲಕ ಧರ್ಮೇಶ ಅಣ್ಣೂರು ಕೇರಿ ಬಳಿಯ ತಿರುವಿನಲ್ಲಿ ಅತಿಯಾದ ವೇಗದಿಂದ ಬಂದಾಗ ಆಯತಪ್ಪಿ ಆಟೋ ಉರುಳಿ ಬಿದ್ದಿದೆ. ಚಾಲಕನ ಅಜಾಗರೂಕತೆ ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಪೊಲೀಸರ ನಿರ್ಲಕ್ಷ್ಯ:ಗೂಡ್ಸ್ ಹಾಗೂ ಪ್ಯಾಸೆಂಜರ್ ಆಟೋಗಳಲ್ಲಿ ಜನರನ್ನು ಕುರಿಗಳಂತೆ ತುಂಬಿಕೊಂಡು ತೆರಳುತ್ತಿದ್ದರೂ ಪೊಲೀಸರ ನಿರ್ಲಕ್ಷ್ಯವೇ ಇಂಥ ಘಟನೆಗಳಿಗೆ ಕಾರಣ ಎನ್ನಲಾಗಿದೆ. ಗೂಡ್ಸ್ ಆಟೋದಲ್ಲಿ ಜನರನ್ನು ಕರೆದುಕೊಂಡು ಹೋಗುವಂತಿಲ್ಲ. ಆದರೂ ಪೊಲೀಸರ ನಿರ್ಲಕ್ಷ್ಯ ಹಾಗೂ ಹೊಣಗೇಡಿ ತನಕ್ಕೆ ಅಮಾಯಕರ ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳಿವೆ.
ಪೊಲೀಸರ ಸಮ್ಮುಖದಲ್ಲಿಯೇ ಗೂಡ್ಸ್ ಆಟೋಗಳಲ್ಲಿ ಜನರು ಪ್ರಯಾಣಿಸುತ್ತಾರೆ. ಅಲ್ಲದೆ ಬಾಳೆಕಾಯಿ ತುಂಬಿದ ಟೆಂಪೋಗಳಲ್ಲಿ ಕಾರ್ಮಿಕರು ಬಾಳೆ ಕಾಯಿ ಮೇಲೆ ಕುಳಿತು ತೆರಳುತ್ತಿದ್ದರೂ ಪೊಲೀಸರು ತಡೆದು ಪ್ರಶ್ನಿಸುವುದಿಲ್ಲ. ಇನ್ನೂ ಪ್ಯಾಸೆಂಜರ್ ಆಟೋಗಳಲ್ಲಿ ಮೂರು ಜನರು ತೆರಳಲು ಅವಕಾಶವಿದ್ದರೂ ಹತ್ತರಿಂದ ಹದಿನೈದು ಜನರನ್ನು ತುಂಬಿಕೊಂಡು ತೆರಳುತ್ತಿದ್ದರೂ ಪೊಲೀಸರು ಆಟೋ ಚಾಲಕರ ಎಂಜಲು ಗಾಸಿಗೆ ಬಿದ್ದು ತಡೆಯುತ್ತಿಲ್ಲ ತಪಾಸಣೆ ಮಾಡುತ್ತಿಲ್ಲ.