ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳ
ಪ್ರಯಾಣಿಕೆ ಯುವತಿಯೋರ್ವಳು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಸರ್ಕಾರಿ ಬಸ್ ಸಿಬ್ಬಂದಿ ನೇರವಾಗಿ ಬಸ್ಸನ್ನೇ ಹೆಬ್ರಿಯ ಸರ್ಕಾರಿ ಸಮುದಾಯ ಕೇಂದ್ರ ಆಸ್ಪತ್ರೆಗೆ ಕೊಂಡೊಯ್ದು ಮಾನವೀಯತೆ ಮೆರೆದ ಘಟನೆ ಸೋಮವಾರ ಸಂಜೆ ಹೆಬ್ರಿಯಲ್ಲಿ ನಡೆದಿದೆ.ಶಿವಮೊಗ್ಗದಿಂದ ಆಗುಂಬೆ ಮಾರ್ಗವಾಗಿ ಉಡುಪಿಯತ್ತ ಬರುತ್ತಿದ್ದ ಸರ್ಕಾರಿ ಬಸ್‌ನಲ್ಲಿ ಸುರಕ್ಷಾ ಎಂಬವರು ಆಗುಂಬೆ ಘಾಟಿಯಲ್ಲಿ ತೀವ್ರ ಅಸ್ವಸ್ಥಗೊಂಡು ಅರೆಪ್ರಜ್ಞಾವಸ್ಥೆಯ ಸ್ಥಿತಿಗೆ ತಲುಪಿದ್ದಳು. ಕೂಡಲೇ ಚಾಲಕ ತಾರೇಶ್ ಹಾಗೂ ನಿರ್ವಾಹಕ ವಾಸಿಮ್ ದೇಸಾಯಿ ಬಸ್ಸನ್ನು ನೇರವಾಗಿ ನಾಡ್ಪಾಲಿನ ಸೋಮೇಶ್ವರದ ಉಪ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಕೊಂಡೊಯ್ದರು. ಅಲ್ಲಿ ಆಕೆಯ ಆರೋಗ್ಯದಲ್ಲಿ ಚೇತರಿಕೆ ಕಾಣದಿದ್ದಾಗ ಸಹ ಪ್ರಯಾಣಿಕರ ಸಹಾಯದಿಂದ ನೇರವಾಗಿ ಹೆಬ್ರಿಯ ಸರ್ಕಾರಿ ಸಮುದಾಯ ಆಸ್ಪತ್ರೆಗೆ ತಂದು ದಾಖಲು ಮಾಡಲಾಯಿತು.ಅಸ್ವಸ್ಥಗೊಂಡಾಕೆಗೆ ಬಾಯಿ ಮೂಲಕ ಶ್ವಾಸ ನೀಡಿದ್ದು ಪ್ರಶಂಸೆಗೆ ಕಾರಣವಾಯಿತು. ಇದೇ ಸಂದರ್ಭ ಹೆಬ್ರಿಯ ಠಾಣಾಧಿಕಾರಿ ಮಹೇಶ್ ಟಿ.ಎಂ. ವಿಷಯ ತಿಳಿದು ಸೋಮೇಶ್ವರ ಚೆಕ್ ಪೋಸ್ಟ್‌ನಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ್ದರು. ಸುರಕ್ಷಾ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.ಯುವತಿ ಸುರಕ್ಷಾ ಶಿವಮೊಗ್ಗದ ಮೇಗರವಳ್ಳಿ ನಿವಾಸಿಯಾಗಿದ್ದು, ಮುನಿಯಾಲಿನಲ್ಲಿ ದೊಡ್ಡಪ್ಪನ ಮನೆಯಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಳು.