ವಾರದಲ್ಲಿ ಮೂರು ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ಹೋದರೆ, ಡಿಸಿಎಂ ಡಿ.ಕೆ.ಶಿವಕುಮಾರ್ ಸಹ ದೆಹಲಿಗೆ ಹೋಗಿ ಕುಳಿತುಕೊಳ್ಳುತ್ತಾರೆ. ಕಾಂಗ್ರೆಸ್‌ನಲ್ಲಿ ಆಂತರಿಕ ಕಚ್ಚಾಟದಿಂದ ರಾಜ್ಯದ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಈ ನಾಡಿನ ರೈತರ ಬಗ್ಗೆ ಸರ್ಕಾರ ಅಸೆಡ್ಡೆ ತೋರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.

- ಉಜ್ಜಿನಿ ಮರುಳಸಿದ್ದೇಶ್ವರ ದೇಗುಲಕ್ಕೆ ಹೋಗುವಾಗ ಜಗಳೂರಲ್ಲಿ ಎಸ್.ವಿ.ರಾಮಚಂದ್ರ ನಿವಾಸಕ್ಕೆ ಭೇಟಿ

- - -

ಕನ್ನಡಪ್ರಭ ವಾರ್ತೆ ಜಗಳೂರು

ವಾರದಲ್ಲಿ ಮೂರು ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ಹೋದರೆ, ಡಿಸಿಎಂ ಡಿ.ಕೆ.ಶಿವಕುಮಾರ್ ಸಹ ದೆಹಲಿಗೆ ಹೋಗಿ ಕುಳಿತುಕೊಳ್ಳುತ್ತಾರೆ. ಕಾಂಗ್ರೆಸ್‌ನಲ್ಲಿ ಆಂತರಿಕ ಕಚ್ಚಾಟದಿಂದ ರಾಜ್ಯದ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಈ ನಾಡಿನ ರೈತರ ಬಗ್ಗೆ ಸರ್ಕಾರ ಅಸೆಡ್ಡೆ ತೋರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ಬುಧವಾರ ವಿಜಯನಗರ ಜಿಲ್ಲೆಯ ಉಜ್ಜಿನಿ ಶ್ರೀ ಮರುಳಸಿದ್ದೇಶ್ವರ ದೇವಸ್ಥಾನಕ್ಕೆ ಹೋಗುವ ಮಾರ್ಗ ಮಧ್ಯೆ ಜಗಳೂರು ಪಟ್ಟಣದಲ್ಲಿ ಮಾಜಿ ಶಾಸಕ ಎಸ್.ವಿ.ರಾಮಚಂದ್ರ ನಿವಾಸಕ್ಕೆ ಭೇಟಿ ನೀಡಿದ ವೇಳೆ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

ಕಾಂಗ್ರೆಸ್‌ ಸರ್ಕಾರ ಅಹಿಂದಾ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಅಲ್ಪ ಸಂಖ್ಯಾತರನ್ನು ಓಲೈಕೆ ಮಾಡಿಕೊಂಡು, ಎಲ್ಲ ಹಿಂದುಳಿದ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ರಾಜ್ಯದಲ್ಲಿ ಅಭಿವೃದ್ಧಿ ಬಗ್ಗೆ ಚಕಾರವೆತ್ತುತ್ತಿಲ್ಲ. ಅತಿವೃಷ್ಟಿ ಸಂದರ್ಭ ಕೃಷಿ ಸಚಿವರಿರಲಿ, ಕಂದಾಯ ಸಚಿವರು ಪ್ರವಾಸ ಮಾಡಲಿಲ್ಲ ಎಂದರು.

ಕಬ್ಬು ಬೆಳೆಗಾರರು ಬೀದಿಗಿಳಿದು ಹೋರಾಟ ಮಾಡಿದರೂ ಸರ್ಕಾರ ಸಮಸ್ಯೆಗೆ ಸ್ಪಂದಿಸಲಿಲ್ಲ. ಬಿಜೆಪಿಯಿಂದ ಹೋರಾಟ ಆರಂಭಿಸಿದಾಗ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ ರೈತರು, ಕಬ್ಬು ಕಾರ್ಖಾನೆ ಮಾಲೀಕರ ಸಭೆ ನಡೆಸಿ ಟನ್‌ಗೆ ₹೨೩೦೦ ಅಂತ ತೀರ್ಮಾನ ಮಾಡಿದರು. ಅದೂ ಸಹ ಇನ್ನು ಬಗೆಹರಿದಿಲ್ಲ. ಮೆಕ್ಕೆಜೋಳ, ಭತ್ತ ಖರೀದಿ ಕೇಂದ್ರ ಬಗ್ಗೆ ಸರಕಾರ ತೀರ್ಮಾನ ತೆಗೆದುಕೊಂಡಿಲ್ಲ. ಸರ್ಕಾರದಲ್ಲೇ ಗೊಂದಲಮಯ ವಾತಾವರಣ ನಿರ್ಮಾಣವಾಗಿದೆ ಎಂದು ಟೀಕಿಸಿದರು.

ಶಾಸಕ ಅಜಯ್ ಸಿಂಗ್ ಸಿಎಂ ಬದಲಾವಣೆ ಡಿಸೆಂಬರ್, ಜನವರಿ, ಫೆಬ್ರವರಿ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರಲ್ಲ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಸಿದ್ದರಾಮಯ್ಯನವರ ಕುರ್ಚಿ ಅಭದ್ರವಾಗಿದೆ ಎಂದು ಎಲ್ಲರೂ ಒಪ್ಪಿಕೊಂಡಂತಾಗಿದೆ. ಆನಂತರ ಯಾರು ಸಿಎಂ ಆಗ್ತಾರೆ ಎಂಬುದು ಪ್ರಶ್ನಾರ್ಥಕವಾಗಿದೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಹೆಸರು ಹೆಸರು ಹೇಳಿಕೊಂಡು ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಯಾರೇ ಬಂದರೂ ಅಭಿವೃದ್ಧಿ ಮಾಡುವುದಿಲ್ಲ ಎಂಬುದು ಪರಮಸತ್ಯ ಎಂದು ವಿಜಯೇಂದ್ರ ಛಾಟಿ ಬೀಸಿದರು.

ಈ ವೇಳೆ ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ್, ಬಿಜೆಪಿ ಮಂಡಲ ಅಧ್ಯಕ್ಷ ಎ.ಎಂ.ಆರಾಧ್ಯ, ಬಿಜೆಪಿ ಮುಖಂಡರಾದ ಪಲ್ಲಾಗಟ್ಟೆ ಮಹೇಶ್, ಅರಿಶಿಣಗುಂಡಿ ರಾಜಣ್ಣ, ಕಟ್ಟಿಗೆಹಳ್ಳಿ ಮಂಜುನಾಥ್, ಸೊಕ್ಕೆ ನಾಗರಾಜ್, ಬಿಸ್ತುವಳ್ಳಿ ಬಾಬು, ದೇವಿಕೆರೆ ಶಿವಕುಮಾರಸ್ವಾಮಿ, ಅರಸಿಕೆರೆ ಭಾಗದ ಕೆಂಚನಗೌಡ, ಸಿದ್ದಪ್ಪ, ಮುರುಗೇಶ್, ಬಾಣೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

- - -

(ಬಾಕ್ಸ್) * ಡಿಕೆಶಿ ಬಿಜೆಪಿ ಸೇರುತ್ತಾರೆ ಅನ್ನೊದೇ ಅರ್ಥಹೀನ: ವಿಜಯೇಂದ್ರ ಡಿ.ಕೆ.ಶಿವಕುಮಾರ್ ಬಿಜೆಪಿ ಸೇರುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಎಲ್ಲವೂ ಅರ್ಥಹೀನ ಮತ್ತು ತರ್ಕಹೀನ ಚರ್ಚೆಗಳು. ಜನರು ನಮ್ಮನ್ನು ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ. ಪ್ರತಿಪಕ್ಷದಲ್ಲಿ ಕುಳಿತುಕೊಂಡು ಯಾವ ರೀತಿ ಕೆಲಸ ಮಾಡಬೇಕೋ ಅದನ್ನು ನಮ್ಮ ಪಕ್ಷ ಮಾಡುತ್ತಿದೆ ಎಂದರು.

ನಿಮ್ಮದೇ ಪಕ್ಷದ ಶಾಸಕ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ನಿಮ್ಮ ವಿರುದ್ಧ ದೆಹಲಿಗೆ ಒಂದು ತಂಡವೇ ಹೋಗಿದೆ ಎನ್ನಲಾಗುತ್ತಿದೆಯಲ್ಲ ಎಂಬ ಪ್ರಶ್ನೆಗೆ ವಿಜಯೇಂದ್ರ ಪ್ರತಿಕ್ರಿಯಿಸಿ, ''''''''ನಾನೇ ಅವರಿಗೆ ವಿಮಾನ ಟಿಕೆಟ್ ಮಾಡಿಸಿಕೊಟ್ಟಿದ್ದು'''''''' ಎಂದು ಟಾಂಟ್ ನೀಡಿ, ನಗೆ ಚಟಾಕಿ ಹಾರಿಸಿದರು.

ರೆಬಲ್ ಟೀಂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭೇಟಿ ಮಾಡಿದ್ದಾರೆ ಎಂಬ ಪ್ರಶ್ನೆಗೆ ಎಚ್‌ಡಿಕೆ ಕೇಂದ್ರ ಸಚಿವರಿದ್ದಾರೆ. ಅವರನ್ನು ಯಾರು ಬೇಕಾದರೂ ಭೇಟಿ ಮಾಡಬಹುದು. ಬೆಳಗಾವಿ ಅಧಿವೇಶನದ ಮೊದಲ ದಿನವೇ ಡಿ.೮ರಂದೇ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಕಬ್ಬು, ಮೆಕ್ಕೆಜೋಳ, ಭತ್ತ ಸೇರಿ ಎಲ್ಲ ರೈತರು ಸಮಸ್ಯೆಗಳ ಸುಳಿಯಲ್ಲಿದ್ದಾರೆ. ಎಲ್ಲ ನೀರಾವರಿ ಯೋಜನೆಗಳ ಕುರಿತು ವಿಪಕ್ಷ ನಾಯಕ ಆರ್.ಅಶೋಕ್, ಎಚ್‌ಡಿಕೆ ಸೇರಿದಂತೆ ಎಲ್ಲರೂ ಚರ್ಚೆ ಮಾಡುತ್ತೇವೆ ಎಂದರು.

- - -

-03ಜೆ.ಜಿ.ಎಲ್.1:

ಜಗಳೂರು ಪಟ್ಟಣದಲ್ಲಿ ಮಾಜಿ ಶಾಸಕ ಎಸ್.ವಿ.ರಾಮಚಂದ್ರ ನಿವಾಸಕ್ಕೆ ಸಂಜೆ ಆಗನಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಹೂವಿನ ಹಾರ ಹಾಕಿ ಸ್ವಾಗತಿಸಿದರು. ಮಾಜಿ ಶಾಸಕ ಎಚ್.ಪಿ.ರಾಜೇಶ್, ಜಿಲ್ಲಾಧ್ಯಕ್ಷ, ತಾಲ್ಲೂಕು ಮಂಡಲ ಅಧ್ಯಕ್ಷ ಆರಾಧ್ಯ ಇತರರು ಇದ್ದರು.