ಕನ್ನಡಪ್ರಭ ವಾರ್ತೆ ಮೂಡಲಗಿ

ಬೆಳಗಾವಿ ಮತ್ತು ಧಾರವಾಡ ನಡುವಿನ ಕಿತ್ತೂರು ಮಾರ್ಗದ 73 ಕಿಮೀ ಉದ್ದದ ಹೊಸ ರೈಲು ಮಾರ್ಗಕ್ಕೆ ಒಟ್ಟು 581 ಹೆಕ್ಟೇರ್ ಭೂಮಿಯ ಅಗತ್ಯವಿದೆ. ಆದರೆ, 2026ರ ಜನವರಿವರೆಗೆ ರಾಜ್ಯ ಸರ್ಕಾರದಿಂದ ಒಂದು ಹೆಕ್ಟೇರ್ ಭೂಮಿಯನ್ನು ರೈಲ್ವೇ ಇಲಾಖೆಗೆ ಹಸ್ತಾಂತರ ಮಾಡಿಲ್ಲ. ಇದರಿಂದ ಈ ಭಾಗದ ಅಭಿವೃದ್ಧಿಗೆ ದೊಡ್ಡ ಹಿನ್ನಡೆಯಾಗಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾಗಿ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.

ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಕಿತ್ತೂರು ಮೂಲಕ ಬೆಳಗಾವಿ ಮತ್ತು ಧಾರವಾಡ ನಡುವಿನ ಹೊಸ ರೈಲ್ವೇ ಮಾರ್ಗ ಯೋಜನೆಯ ಪ್ರಸ್ತುತ ಭೌತಿಕ ಮತ್ತು ಆರ್ಥಿಕ ಪ್ರಗತಿ ಏನು? ಭೂಸ್ವಾಧೀನ ಪ್ರಕ್ರಿಯೆಯ ಸ್ಥಿತಿಗತಿ ಕುರಿತ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರ್ನಾಟಕದ ಎಲ್ಲಾ ರೈಲ್ವೇ ಯೋಜನೆಗಳಿಗೆ ಒಟ್ಟು 9,064 ಹೆಕ್ಟೇರ್ ಭೂಮಿ ಬೇಕಾಗಿದೆ. ಅದರಲ್ಲಿ ಇನ್ನೂ 3,357 ಹೆಕ್ಟೇರ್ (ಶೇ.37) ಭೂಮಿ ಸ್ವಾಧೀನವಾಗಬೇಕಿದೆ. ಶಿವಮೊಗ್ಗ - ರಾಣೆಬೆನ್ನೂರು (96 ಕಿಮೀ) 559 ಹೆಕ್ಟೇರ್ ಅಗತ್ಯವಿದ್ದು, 333 ಹೆಕ್ಟೇರ್ ಬಾಕಿ ಇದೆ, ಶಿವಮೊಗ್ಗ-ಹರಿಹರ (79 ಕಿಮೀ): 488 ಹೆಕ್ಟೇರ್ ಬಾಕಿ ಇದೆ, ವೈಟ್ ಫೀಲ್ಡ್- ಕೋಲಾರ (53 ಕಿಮೀ) 337 ಹೆಕ್ಟೇರ್ ಬಾಕಿ ಇದೆ. ಹಾಸನ-ಬೇಲೂರು (32 ಕಿಮೀ): 206 ಹೆಕ್ಟೇರ್ ಬಾಕಿ ಇದೆ. ಈ ಎಲ್ಲ ಯೋಜನೆಗಳಲ್ಲೂ ರಾಜ್ಯ ಸರ್ಕಾರದಿಂದ ಭೂ ಸ್ವಾಧೀನದ ಪ್ರಗತಿ ಶೂನ್ಯವಾಗಿದೆ ಎಂದಿದ್ದಾರೆ.

ರಾಜ್ಯ ಸರ್ಕಾರ ಭೂಮಿ ನೀಡಲು ವಿಳಂಬ ಮಾಡುತ್ತಿದ್ದರೆ, ಕೇಂದ್ರ ಸರ್ಕಾರ ಕರ್ನಾಟಕದ ರೈಲ್ವೇ ಅಭಿವೃದ್ಧಿಗೆ ದಾಖಲೆ ಅನುದಾನ ನೀಡುತ್ತಿದೆ. 2009-14ರ ಅವಧಿಯಲ್ಲಿ: ವಾರ್ಷಿಕ ಸರಾಸರಿ ಕೇವಲ ₹ 835 ಕೋಟಿ ಹಂಚಿಕೆಯಾಗುತ್ತಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವಧಿಯಲ್ಲಿ, 2025-26ನೇ ಸಾಲಿಗೆ ₹ 7,564 ಕೋಟಿ ಅನುದಾನ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ಯೋಜನೆಯನ್ನು ಜಾರಿಗೊಳಿಸಲು ಸರ್ವ ಸನ್ನದ್ಧವಾಗಿದೆ. ಆದರೆ, ಭೂಸ್ವಾಧೀನ, ಅರಣ್ಯ ಇಲಾಖೆ ಅನುಮತಿ ಮತ್ತು ಶಾಸನಬದ್ಧ ಕ್ಲಿಯರೆನ್ಸ್‌ಗಳನ್ನು ನೀಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ರಾಜ್ಯದ ಸಹಕಾರವಿದ್ದರೆ ಮಾತ್ರ ಈ ಯೋಜನೆಗಳು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಲು ಸಾಧ್ಯ ಎಂದು ಸಚಿವರು ತಮ್ಮ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ಮಾಹಿತಿ ನೀಡಿದ್ದಾರೆ.