ಕವಿ ಅಥವಾ ಸಾಹಿತಿ ಹೇಳುವ ಸತ್ಯವನ್ನು ಅರ್ಥ ಮಾಡಿಕೊಳ್ಳುವ ಸೂಕ್ಷ್ಮತೆಯನ್ನು ಸಮಾಜ ಹೊಂದಿರುವುದು ಒಂದೆಡೆ ಇರುವುದಿಲ್ಲ. ಆತನಿಗೆ ಸಮಾಜದ ಸೂಕ್ಷ್ಮತೆ ಅರ್ಥ ಮಾಡಿಕೊಳ್ಳದ ಸ್ಥಿತಿಗೆ ತಲುಪುವುದು ನಮ್ಮ ಕಾಲದ ಸಾಂಸ್ಕೃತಿಕ ವಿದ್ಯಮಾನದ ಪರಿಸ್ಥಿತಿಯಾಗಿದೆ.

ಧಾರವಾಡ:

ಧಾರವಾಡ ಜಿಲ್ಲಾ ೧೭ನೇ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನಕ್ಕೆ ಸೋಮವಾರ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಅದ್ಧೂರಿಯಾಗಿ ಚಾಲನೆ ದೊರೆಯಿತು.

ಸಮ್ಮೇಳನಕ್ಕೆ ಚಾಲನೆ ನೀಡಿದ ಸಾಹಿತಿ ಡಾ. ಮೃತ್ಯುಂಜಯ ರುಮಾಲೆ ಮಾತನಾಡಿ, ಸಾಹಿತ್ಯ ಹೇಳುವ ಸತ್ಯಕ್ಕೆ ಪ್ರಭುತ್ವ ಹೆದರುತ್ತದೆ, ಹೆದರಬೇಕು. ಸಾಹಿತ್ಯ ತನ್ನ ಸತ್ಯ ಪ್ರತಿಪಾದನೆಯಿಂದ ಪ್ರಭುತ್ವವನ್ನು ಎದುರು ಹಾಕಿಕೊಳ್ಳುತ್ತದೆ, ಎದುರು ಹಾಕಿಕೊಳ್ಳಬೇಕು ಎಂದರು.

ಕವಿ, ಸಾಹಿತಿ ತಾನು ಪ್ರತಿಪಾದಿಸಬೇಕಾದ ಸತ್ಯ ಮತ್ತು ಮೌಲ್ಯಗಳಲ್ಲಿ ಅಹಂಕಾರವೂ ವಿನಯವೂ ಮಿತಿ ಮೀರದಂತೆ ಇರಬೇಕು. ಇದು ಇಂದಿನ ಬಹು ಮುಖ್ಯ ಅವಶ್ಯಕತೆಯಾಗಿದೆ. ಆದರೆ, ಇದರ ಕೊರತೆ ಇಂದು ಎದ್ದು ಕಾಣುತ್ತಿದೆ ಎಂದರು.

ಕವಿ ಅಥವಾ ಸಾಹಿತಿ ಹೇಳುವ ಸತ್ಯವನ್ನು ಅರ್ಥ ಮಾಡಿಕೊಳ್ಳುವ ಸೂಕ್ಷ್ಮತೆಯನ್ನು ಸಮಾಜ ಹೊಂದಿರುವುದು ಒಂದೆಡೆ ಇರುವುದಿಲ್ಲ. ಆತನಿಗೆ ಸಮಾಜದ ಸೂಕ್ಷ್ಮತೆ ಅರ್ಥ ಮಾಡಿಕೊಳ್ಳದ ಸ್ಥಿತಿಗೆ ತಲುಪುವುದು ನಮ್ಮ ಕಾಲದ ಸಾಂಸ್ಕೃತಿಕ ವಿದ್ಯಮಾನದ ಪರಿಸ್ಥಿತಿಯಾಗಿದೆ ಎಂದು ಹೇಳಿದರು.

ಇದೇ ವೇಳೆ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಕೆ.ಎಸ್. ಶರ್ಮಾ ಅವರು ಸಮ್ಮೇಳನಾಧ್ಯಕ್ಷರಾದ ಡಾ. ಎಸ್.ಆರ್. ಗುಂಜಾಳ ಅವರಿಗೆ ಪರಿಷತ್ ಧ್ವಜ ಹಸ್ತಾಂತರಿಸಿದರು. ಸರ್ವಾಧ್ಯಕ್ಷರ ಸಾಹಿತ್ಯ ಪ್ರದರ್ಶನಕ್ಕೆ ಎಸ್. ಬಾಲಾಜಿ ಚಾಲನೆ ನೀಡಿದರು. ಚನ್ನಪ್ಪ ಅಂಗಡಿ ಸಂಪಾದನೆಯ ಆ ಗೀಡಾ ಈ ಗೀಡಾ ಪುಸ್ತಕವನ್ನು ಪ್ರೊ. ಐ.ಜಿ. ಸನದಿ ಬಿಡುಗಡೆಗೊಳಿಸಿದರು.

ಶಾಸಕ ಎನ್.ಎಚ್. ಕೋನರೆಡ್ಡಿ ಮಾತನಾಡಿ, ಸಾಹಿತ್ಯ ಉಳಿದಿದ್ದು ಧಾರವಾಡದಲ್ಲಿ, ಈಗ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಯಾಗಿದ್ದು, ಮುಂದೆ ಇದು ಸಾಹಿತ್ಯ ಪರಿಷತ್‌ನ ೨ನೇ ರಾಜಧಾನಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಸಾಹಿತಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಆಶಯ ನುಡಿಗಳನ್ನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಸಮ್ಮೇಳನ ಯಶಸ್ವಿಗೆ ಎಲ್ಲರ ಸಹಕಾರ ಪ್ರಮುಖ. ಆ ಸಹಕಾರದಿಂದ ಸಾಹಿತ್ಯ ಕಾರ್ಯಕ್ರಮಗಳನ್ನು ನಿರಂತರವಾಗಿ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ಮಾಜಿ ಶಾಸಕಿ ಸೀಮಾ ಮಸೂತಿ, ಈರೇಶ ಅಂಚಟಗೇರಿ, ಸತೀಶ ತುರಮರಿ, ಡಾ. ಡಿ.ಎಂ. ಹಿರೇಮಠ, ಶಂಕರ ಕುಂಬಿ, ಡಾ. ಜೀನದತ್ ಹಡಗಲಿ, ಶಂಕರ ಹಲಗತ್ತಿ ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದರು. ಪ್ರೊ. ಕೆ.ಎಸ್. ಕೌಜಲಗಿ ನಿರೂಪಿಸಿದರು. ಕನ್ನಡಾಭಿಮಾನಿಗಳು, ಕಾಲೇಜು ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು ಸೇರಿದಂತೆ ಸಾವಿರಾರೂ ಸಂಖ್ಯೆಯಲ್ಲಿ ಜನತೆ ಸೇರಿದ್ದರು.