ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಸೂಕ್ತ ಸುಧಾರಣೆ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರಾತ್ಮಕ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ಸಚಿವ ಯು.ಟಿ.ಖಾದರ್‌ ಅವರ ನೇತೃತ್ವದ ಸಂಪುಟ ಉಪ ಸಮಿತಿ ನಿರ್ಧರಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಶಿಕ್ಷಣ ತಜ್ಞರು, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಭಾಗೀದಾರರ ಸಲಹೆ ಅಭಿಪ್ರಾಯ ಪಡೆದು ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಸೂಕ್ತ ಸುಧಾರಣೆ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರಾತ್ಮಕ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ಸಚಿವ ಯು.ಟಿ.ಖಾದರ್‌ ಅವರ ನೇತೃತ್ವದ ಸಂಪುಟ ಉಪ ಸಮಿತಿ ನಿರ್ಧರಿಸಿದೆ.

ವಿದ್ಯಾರ್ಥಿಗಳ ಸಮಸ್ಯೆಗಳು ಮತ್ತು ಶಿಕ್ಷಣ ಸುಧಾರಣೆಗಳ ಕುರಿತು ಚರ್ಚಿಸಿ ವರದಿ ನೀಡಲು ರಚನೆಯಾಗಿರುವ ಸಂಪುಟ ಉಪಸಮಿತಿಯು ಗುರುವಾರ ವಿಧಾನಸೌಧದಲ್ಲಿ ತನ್ನ ಮೊದಲ ಸಭೆ ನಡೆಸಿತು.

ಸಭೆಯಲ್ಲಿ ಪ್ರಮುಖವಾಗಿ ಖಾಸಗಿ ವಲಯದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಶಿಕ್ಷಣದ ವೆಚ್ಚ, ಹಾಗೂ ಲಗಾಮಿಲ್ಲದೆ ನಡೆಯುತ್ತಿರುವ ಕೋಚಿಂಗ್ ಕೇಂದ್ರಗಳನ್ನು ನಿಯಂತ್ರಿಸುವುದು ಹೇಗೆ, ಶಿಕ್ಷಣ ಇಲಾಖೆಯ ಪರೀಕ್ಷೆಗಳು ಮತ್ತು ನೇಮಕಾತಿಗಳಲ್ಲಿ ಆಗಬೇಕಿರುವ ಸಮಗ್ರ ಬದಲಾವಣೆ, ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದು ಮತ್ತು ಮೂಲಸೌಕರ್ಯ ಬಲಪಡಿಸುವಿಕೆ, ಪಠ್ಯಕ್ರಮ ಸುಧಾರಣೆ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗ ಸಂಪರ್ಕ ಕಲ್ಪಿಸುವುದು, ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ ಸೇರಿ ಹಲವು ವಿಚಾರಗಳ ಬಗ್ಗೆ ಗಂಭೀರ ಚರ್ಚೆ ನಡೆಸಲಾಗಿದೆ.

ಪ್ರತ್ಯೇಕ ವೆಬ್‌ಸೈಟ್‌ ಆರಂಭ:

ಈ ಎಲ್ಲ ವಿಚಾರಗಳಲ್ಲಿ ಆಗಬೇಕಿರುವ ಸುಧಾರಣೆಗಳ ಕುರಿತು ಶಿಕ್ಷಣ ತಜ್ಞರು, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಸೇರಿದಂತೆ ಸಂಬಂಧಿಸಿದ ಎಲ್ಲ ಭಾಗೀದಾರರ ಸಲಹೆ, ಅಭಿಪ್ರಾಯಗಳನ್ನು ಪಡೆದು ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನಕ್ಕೆ ಬರಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಾರ್ವಜನಿಕರಿಂದಲೂ ಆನ್‌ಲೈನ್‌ ಮೂಲಕ ಅಭಿಪ್ರಾಯ ಪಡೆಯಲು ಪ್ರತ್ಯೇಕ ವೆಬ್‌ಸೈಟ್‌ ಆರಂಭಿಸಲು ಚರ್ಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸಭೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ಪ್ರಕ್ರಿಯೆಯ ಬಗ್ಗೆಯೂ ಚರ್ಚೆ ನಡೆದಿದ್ದು, ಯುಪಿಎಸ್‌ಸಿ ಮಾದರಿಯ ವ್ಯವಸ್ಥೆಯನ್ನು ಕೆಪಿಎಸ್‌ಸಿ ಅಳವಡಿಸಿಕೊಳ್ಳಲು ಸಾಧ್ಯವಾಗದಿರುವ ಬಗ್ಗೆ ಕಳವಳ ವ್ಯಕ್ತವಾಗಿದೆ. ಯುಪಿಎಸ್ಸಿ ಮಾದರಿ ತರಲು ಏನು ಮಾಡಬಹುದೆಂಬ ಬಗ್ಗೆಯೂ ಸಲಹೆಗಳನ್ನು ಪಡೆಯಲು ತೀರ್ಮಾನಿಸಲಾಗಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರುವ ಉದ್ದೇಶದಿಂದ ಮುನ್ನಡೆಸುತ್ತಿರುವ ‘ಛಾತ್ರೋಂ ಕಿ ಗೂಂಜ್’ ವಿದ್ಯಾರ್ಥಿ ಚಳವಳಿಗೆ ಸ್ಪಂದಿಸಿ ರಾಜ್ಯ ಸರ್ಕಾರ ಈ ಉಪಸಮಿತಿ ರಚಿಸಿದೆ.

ಸಭೆಯಲ್ಲಿ ಸದಸ್ಯರಾದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಗೃಹ ಸಚಿವ ಪ್ರಿಯಾಂಕ್‌ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಹಾಗೂ ಇಲಾಖೆಗಳ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

----

ಕೋಟ್‌

ಸಮಿತಿಯಿಂದ ಶಿಕ್ಷಣ ವ್ಯವಸ್ಥೆಯಲ್ಲಿ ನಿಜವಾದ ಬದಲಾವಣೆ ಆಗಬೇಕು. ಇದಕ್ಕಾಗಿ ಎಲ್ಲ ಭಾಗೀದಾರರ ಸಲಹೆ, ಅಭಿಪ್ರಾಯ ಪಡೆಯಲಾಗುವುದು. ಪೂರ್ವಭಾವಿಯಾಗಿ ತಜ್ಞರ ಸಭೆ ನಡೆಸಿದರೆ ಅಜೆಂಡಾದ ವಿಷಯಗಳ ಕುರಿತು ಪರಿಣಾಮಕಾರಿಯಾಗಿ ಚರ್ಚಿಸಲಾಗುವುದು. ಸೂಕ್ತ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು.

- ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಸಚಿವ