ಸಾರಾಂಶ
- ಶೇ.80 ಕಮಿಷನ್ ಆರೋಪಕ್ಕೆ ರಾಗಾ, ಸಿಎಂ, ಡಿಸಿಎಂ ಉತ್ತರಿಸಲಿ: ರೇಣುಕಾಚಾರ್ಯ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ರಾಜ್ಯ ಕಾಂಗ್ರೆಸ್ ಸರ್ಕಾರ ಕೊಟ್ಟ ಭರವಸೆಗಳನ್ನು ಬಂದ್ ಮಾಡಲು ಬಿಪಿಎಲ್ ಪಡಿತರ ಕಾರ್ಡ್‌ಗಳನ್ನು ಏಕಾಎಕಿಯಾಗಿ ರದ್ದುಪಡಿಸುವ ಮೂಲಕ ಬಡವರ ಮೇಲೆ ಗದಾಪ್ರಹಾರ ಮಾಡಲು ಹೊರಟಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದರು.ಮಂಗಳವಾರ ಹೊನ್ನಾಳಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರು ಧರ್ಮಸ್ಥಳ ಸ್ವಸಹಾಯ ಸಂಘಗಳಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ ಗೌರವಧನ ಕೇವಲ ₹300, ವರ್ಷಕ್ಕೆ ₹3600 ಬರುತ್ತಿದೆ. ಕೇಂದ್ರ ಸರ್ಕಾರದಿಂದ 5 ಕೆ.ಜಿ., ರಾಜ್ಯ ಸರ್ಕಾರದಿಂದ ಈ ಮೊದಲು ಅಕ್ಕಿಯ ಹಣ ಕೊಟ್ಟು, ಇದೀಗ ಅಕ್ಕಿ ನೀಡಲಾಗುತ್ತಿದೆ. ಹೀಗಿರುವಾಗ ಬಿಪಿಲ್ ಕಾರ್ಡ್‌ಗಳ ರದ್ದು ಮಾಡಲಾಗುತ್ತಿದೆ. ಈ ಬಗ್ಗೆ ಹಲವಾರು ಫಲಾನುಭವಿಗಳು ಅಳಲು ತೋಡಿಕೊಂಡಿದ್ದಾರೆ ಎಂದರು.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಕಾಂಗ್ರೆಸ್‌ನವರು ಅಂದಿನ ಗುತ್ತಿಗೆದಾರರ ಸಂಘ ಅಧ್ಯಕ್ಷರಾಗಿದ್ದ ಕೆಂಪಣ್ಣ ಅವರನ್ನು ಬಳಸಿ, ಸರ್ಕಾರ 40 ಪರ್ಸೆಂಟೇಜ್ ಕಮಿಷನ್ ಪಡೆಯುತ್ತಿದೆ ಎಂದು ಮುಖಂಡರು ಒಂದೇ ಸಮನೆ ಅಪಪ್ರಚಾರ ಮಾಡಿದ್ದರು. ಆದರೆ, ಇದೀಗ ಲೋಕಾಯುಕ್ತರಿಂದ ಕ್ಲೀನ್ ಚಿಟ್ ಸಿಕ್ಕಿದೆ. ಜೊತೆಗೆ ಅಂದಿನ ಸಿಎಂ ವಿರುದ್ಧ ಪೇ.ಸಿ.ಎಂ. ಎಂಬ ಅಭಿಯಾನ ಕೂಡ ನಡೆಸಿದ್ದರು. ಆದರೆ, ಇಂದು ಇದೇ ಕಾಂಗ್ರೆಸ್ ಸರ್ಕಾರ ಗುತ್ತಿಗೆದಾರರಿಂದ 80 ಪರ್ಸೆಂಟ್ ಕಮಿಷನ್ ಪಡೆಯುತ್ತಿದೆ ಎಂಬ ಆರೋಪ ಎದುರಿಸುತ್ತಿದೆ. ಇದಕ್ಕೆ ಮುಖ್ಯಮಂತ್ರಿ, ಉಪಮಂತ್ರಿ, ರಾಹುಲ್ ಗಾಂಧಿ ಅವರೇ ಉತ್ತರಿಸಬೇಕು ಎಂದು ಹೇಳಿದರು.ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ (ಎನ್.ಆರ್. ಎಂ,ಎಲ್.) ಇಲಾಖೆಯಡಿಯಲ್ಲಿ ಕರ್ನಾಟಕಕ್ಕೆ 2018ರಿಂದ 62.72 ಕೋಟಿ ಬಿಡುಗಡೆಯಾಗಿದೆ. ಈ ಪೈಕಿ ದಾವಣಗೆರೆ ಜಿಲ್ಲೆಯಲ್ಲಿ 10 ಸಾವಿರ ಸಂಜೀವಿನಿ ಸ್ವಸಹಾಯ ಗುಂಪುಗಳಿವೆ. ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡವರಿಗೆ ಬಿಜೆಪಿ ಸರ್ಕಾರದ ಕಾಲದಲ್ಲಿ ಕೋಟಿಗಟ್ಟಲೇ ಹಣ ಬಿಡುಗಡೆ ಮಾಡಲಾಗಿತ್ತು. ಆದರೆ ಇನ್ನೂ 3 ಮತ್ತು 4ನೇ ಹಂತದ ಹಣ ಬಿಡುಗಡೆಯಾಗಿಲ್ಲ. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಆಭಿವೃದ್ಧಿ ನಡೆಯುತ್ತಿಲ್ಲ. ರಸ್ತೆಯಲ್ಲಿ ಗುಂಡಿಗಳು ತುಂಬಿವೆ ಎಂದರು.
ಬಿಜೆಪಿ ಸರ್ಕಾರದ ಕಾಲದಲ್ಲಿ ಬಗರ್‌ಹುಕುಂ ಸಾಗುವಳಿ ಚೀಟಿಗಳನ್ನು ನೀಡಲಾಗಿತ್ತು. ಈಗಿನ ಸರ್ಕಾರ ಇನ್ನೂ ಇವುಗಳಿಗೆ ಆರ್.ಟಿ.ಸಿ. ದಾಖಲೆ ಮಾಡಿಕೊಡುತ್ತಿಲ್ಲ. ಬಗರ್‌ಹುಕುಂ ಸಭೆಗಳನ್ನು ಕೂಡ ನಡೆಸಿಲ್ಲ, ನೀರಾವರಿ ಯೋಜನೆಗಳಿಗೆ ಕೂಡ ಹಣ ಬಿಡುಗಡೆ ಮಾಡಿಲ್ಲ ಎಂದು ಕಿಡಿಕಾರಿದರು.ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್, ಸಿ.ಆರ್. ಶಿವಾನಂದ, ಬಡಾವಣೆ ರಂಗಪ್ಪ, ಕರಿಬಸಪ್ಪ ರೆಡ್ಡಿ, ತಿಮ್ಲಾಪುರ ಶಿವನಗೌಡ ಮುಂತಾದವರು ಇದ್ದರು.
- - --30ಎಚ್.ಎಲ್.ಐ1.ಜೆಪಿಜಿ:
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ, ಕಾಂಗ್ರೆಸ್ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.