ಸಾರಾಂಶ
ನೇಹಾ ಹತ್ಯೆಯಾಯ್ತು, ಈಗ ಸ್ವಾತಿ ಎಂಬ ಯುವತಿಯನ್ನು ಲವ್ ಜಿಹಾದಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ: ನೇಹಾ ಹತ್ಯೆಯಾಯ್ತು, ಈಗ ಸ್ವಾತಿ ಎಂಬ ಯುವತಿಯನ್ನು ಲವ್ ಜಿಹಾದಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಹೊರವಲಯದ ಸರ್ಕ್ಯೂಟ್ ಹೌಸ್‌ನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದು ಮಹಿಳೆಯರನ್ನು, ಯುವತಿಯನ್ನೇ ಟಾರ್ಗೆಟ್ ಮಾಡಲಾಗುತ್ತಿದೆ. ಇಂಥವರನ್ನು ಮಟ್ಟ ಹಾಕುವಲ್ಲೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸಡ್ಡೆ ತೋರುತ್ತಿದೆ. ಬಿಟ್ಟಿ ಭಾಗ್ಯಗಳಿಂದ ಅಧಿಕಾರಕ್ಕೆ ಬಂದ ಸರ್ಕಾರದ ಬಜೆಟ್ ಸಹ ಪಾಕಿಸ್ತಾನದ ಬಜೆಟ್‌ನಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.ರೈತರು, ಬಡವರಿಗೆ ಬಜೆಟ್‌ನಲ್ಲಿ ಏನೂ ನೀಡಿಲ್ಲ. ಅಲ್ಪಸಂಖ್ಯಾತರಿಗೆ ಬಜೆಟ್‌ನಲ್ಲಿ ಶೇ.4 ಮೀಸಲಾತಿ ಕೊಟ್ಟಿದ್ದೀರಿ. ಅಲ್ಪಸಂಖ್ಯಾತರಿಗೆ ಬಜೆಟ್‌ನಲ್ಲಿ ಹೀಗೆ ಮೀಸಲಾತಿ ನೀಡುವುದಕ್ಕೇನು ಇದು ನಿಮ್ಮ ಮನೆ ಅಧಿಕಾರ ಅಂದುಕೊಂಡಿದ್ದೀರಾ? ನಾವು ಮತ್ತೆ ರಾಜ್ಯದಲ್ಲೂ ಅಧಿಕಾರಕ್ಕೆ ಬರುತ್ತೇವೆ. ಮುಸ್ಲಿಮರಿಗೆ ನೀಡಿರುವ ಮೀಸಲಾತಿ ರದ್ದುಪಡಿಸುತ್ತೇವೆ ಎಂದ ಅವರು, ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್ಸಿಗರೇ ಕಚ್ಚಾಡುತ್ತಿದ್ದು, ಅವರಿಂದಲೇ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದರು.
ಬಸವಗೌಡ ಪಾಟೀಲ್ ಯತ್ನಾಳ್ ಮುಖವನ್ನು ನೋಡಿ ವಿಜಯಪುರ ಜನತೆ ಗೆಲ್ಲಿಸುತ್ತಿಲ್ಲ. ಇದೇ ಯತ್ನಾಳ್ ಹಿಂದೆ ದೇವರ ಹಿಪ್ಪರಗಿಯಲ್ಲಿ ಸ್ಪರ್ಧೆ ಮಾಡಿದಾಗ ಸೋತು ಸುಣ್ಣವಾಗಿದ್ದರು. ಆಗ ಯಡಿಯೂರಪ್ಪನವರೇ ಕರೆದು, ವಿಜಯಪುರದ ಟಿಕೆಟ್ ನೀಡಿ, ಗೆಲ್ಲಿಸಿದ್ದರು. ಅಂತಹ ಯಡಿಯೂರಪ್ಪನವರ ಬಗ್ಗೆ ಮಾತನಾಡಿದರೆ ಬಾಯಿಯಲ್ಲಿ ಹುಳಬೀಳುತ್ತವೆ ಎಂದು ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದರು.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ರಾಜು ವೀರಣ್ಣ, ಪ್ರವೀಣ ಜಾಧವ್, ಪಂಜು ಇತರರು ಇದ್ದರು.
- - -