ಗೃಹಲಕ್ಷ್ಮೀ ಯೋಜನೆಯ ೫೦೦೦ ಕೋಟಿ ರು. ಏನಾಗಿದೆ. ರಾಜ್ಯದಲ್ಲಿ ಭ್ರಷ್ಟರನ್ನು ರಕ್ಷಿಸುವ ಕೆಲಸ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ಬುಡಸಮೇತ ಕಿತ್ತುಹಾಕುವ ಕೆಲಸ ಬಿಜೆಪಿ ಮಾಡುತ್ತದೆ.

ಗೃಹಲಕ್ಷ್ಮೀ ಯೋಜನೆಯ ೫೦೦೦ ಕೋಟಿ ರು. ಏನಾಗಿದೆ । ಮುಂದಿನ ಚುನಾವಣೆಯಲ್ಲಿ ಸರ್ಕಾರ ಬೀಳಲಿದೆ: ಆಶಯ

ಕನ್ನಡಪ್ರಭ ವಾರ್ತೆ ಮುಳಬಾಗಿಲು

ದಕ್ಷಿಣ ಕನ್ನಡ ಜಿಲ್ಲೆಯ ಶಾಸಕ ಅಶೋಕ್ ರೈ ಪತ್ರ ಬರೆದು ಆರೋಪ ಮಾಡಿರುವುದನ್ನು ನೋಡಿದರೆ, ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ತಾಲೂಕಿನ ಕುರುಡುಮಲೆ ಶ್ರೀ ಲಕ್ಷ್ಮೀ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯ ೫೦೦೦ ಕೋಟಿ ರು. ಏನಾಗಿದೆ. ರಾಜ್ಯದಲ್ಲಿ ಭ್ರಷ್ಟರನ್ನು ರಕ್ಷಿಸುವ ಕೆಲಸ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ಬುಡಸಮೇತ ಕಿತ್ತುಹಾಕುವ ಕೆಲಸ ಬಿಜೆಪಿ ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಶಾಸಕರೇ ತಮ್ಮ ಸರ್ಕಾರ ೮ ಪರ್ಸೆಂಟ್ ಕಮೀಷನ್ ಪಡೆಯುತ್ತಿದೆ ಎಂದು ಸಚಿವರು ಮತ್ತು ಸಿಎಂ ಮೇಲೆ ಗಂಭೀರ ಆರೋಪ ಮಾಡಿರುವುದನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಸಿಎಂ ಡಿ.ಕೆ.ಶಿವಕುಮಾರ್ ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿದ್ದಾರೆ, ಸಚಿವರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಟೀಕಿಸಿದರು.

ದೇಶದ ಪ್ರಧಾನಿ ನರೇಂದ್ರ ಮೋದಿ ೭೫ ವರ್ಷ ಸಾರ್ವಜನಿಕ ಬದುಕನ್ನು ದೇಶದ ಜನತೆ ಸಂಭ್ರಮಿಸುತ್ತಿದ್ದು, ಕೋಲಾರ ಜಿಲ್ಲೆಯ ಬಂಗಾರಪೇಟೆ ಮತ್ತು ಕೆಜಿಎಫ್ ತಾಲೂಕುಗಳಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ನಡೆಸಲಾಗುತ್ತಿದೆ. ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯಲ್ಲಿ ಬಿಜೆಪಿ ಖಾತೆ ತೆರೆಯುವುದು ಖಚಿತ ಎಂದು ಭವಿಷ್ಯ ನುಡಿದರು.

ಪ್ರಧಾನಿ ಮೋದಿಗೆ ಉತ್ತಮ ಆರೋಗ್ಯ, ಆಯುಷ್ಯ ನೀಡಿ ಇನ್ನಷ್ಟು ದೇಶ ಸೇವೆ ಮಾಡಲು ಭಗವಂತ ಆಶೀರ್ವಾದಿಸಲಿ. ತಾಪಂ ಮತ್ತು ಜಿಪಂ ಚುನಾವಣೆ ಬರಲಿದ್ದು, ರಾಜ್ಯದಲ್ಲಿ ಬಿಜೆಪಿಯನ್ನು ಬೂತ್ ಮಟ್ಟದಿಂದ ಸಂಘಟಿಸಲಾಗುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದರು.

ಪ್ರಧಾನಿ ಮೋದಿ ಅತ್ಯಂತ ಪ್ರಾಮಾಣಿಕತೆಯಿಂದ ದೇಶದ ಅಭಿವೃದ್ಧಿ ಮಾಡುತ್ತಿರುವುದನ್ನು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌ನಿಂದ ಸಹಿಸಲು ಆಗುತ್ತಿಲ್ಲ. ಚುನಾವಣಾ ಆಯೋಗದ ಮೇಲೆ ಆರೋಪ ಮಾಡಿ ಜನರಲ್ಲಿ ಅನುಮಾನದ ಹುತ್ತ ಕಟ್ಟಲಾಗುತ್ತಿದೆ. ಇವರ ನಾಟಕ ದೇಶದ ಜನರಿಗೆ ಅರ್ಥವಾಗಿದ್ದು, ಕಾಂಗ್ರೆಸ್‌ಗೆ ಮುಂದಿನ ದಿನಗಳಲ್ಲಿ ನೆಲೆ ಇರುವುದಿಲ್ಲ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಸಕಾಲಕ್ಕೆ ಮಳೆ ಬೀಳದೆ ರೈತರು ಸಂಕಷ್ಟದಲ್ಲಿದ್ದು, ತೀವ್ರ ಬರಗಾಲ ಎದುರಾಗಿದ್ದರೂ ಬರ ಎದುರಿಸುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬರ ಪರಿಹಾರ ನೀಡಲು ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಜನರಿಂದ ತೆರಿಗೆ ವಸೂಲಿ ಮಾಡುವುದಷ್ಟೇ ಕಾಂಗ್ರೆಸ್ ಸರ್ಕಾರಕ್ಕೆ ಗೊತ್ತು. ಜನ ಈ ವಿಚಾರದಲ್ಲಿ ದಂಗೆ ಎದ್ದಿದ್ದಾರೆ. ಎಸ್‌ಸಿಪಿ ಮತ್ತು ಟಿಎಸ್‌ಪಿಯ ೫೦,೦೦೦ ಕೋಟಿ ರು. ಹಣವನ್ನು ಬೇರೆಡೆಗೆ ಅಕ್ರಮವಾಗಿ ವರ್ಗಾವಣೆ ಮಾಡಿ ದಲಿತರಿಗೆ ಕಾಂಗ್ರೆಸ್ ದ್ರೋಹ ಮಾಡಿದೆ ಎಂದು ಟೀಕಿಸಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜನರು ಬಿಜೆಪಿಗೆ ಆಶೀರ್ವಾದ ಮಾಡಿ ಸರ್ಕಾರ ರಚನೆಗೆ ಅನುಕೂಲ ಮಾಡಬೇಕೆಂದು ಮನವಿ ಮಾಡಿದರು.

ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ಸಂಸದ ಎಸ್.ಮುನಿಸ್ವಾಮಿ, ಮಾಜಿ ಶಾಸಕ ಬಿ.ಪಿ.ಮುನಿವೆಂಕಟಪ್ಪ, ಮುಖಂಡರಾದ ವೈ.ಸುರೇಂದ್ರ ಗೌಡ, ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ನಂದೀಶ್ ರೆಡ್ಡಿ, ಎಂ.ಕೆ.ವಾಸುದೇವ್, ನಂಗಲಿ ಸತೀಶ್ ಕುಮಾರ್, ತಾಲೂಕು ಅಧ್ಯಕ್ಷ ಮೈಸೂರು ಸುರೇಶ್ ರಾಜು, ಕೆ.ಜೆ.ಮೋಹನ್, ಮೈಕ್ ಶಂಕರ್, ಗರಡಿ ಕಿರಣ್ ಕುಮಾರ್ ಇದ್ದರು.