ಸಾರಾಂಶ
ಬ್ಯಾಡಗಿ: ಅರ್ಹ ನಿರಾಶ್ರಿತರಿಗೆ ನಿವೇಶನ ಸಹಿತ ಮನೆ ನಿರ್ಮಿಸಿಕೊಡಲು ಸರ್ಕಾರ ಚಿಂತನೆ ನಡೆಸಿದ್ದು ಶೀಘ್ರದಲ್ಲೇ ಬಡವರಿಗೆ ಆಶ್ರಯ ಮನೆ ಭಾಗ್ಯ ದೊರಕಿಸಿಕೊಡುವುದಾಗಿ ಅರಣ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಮತ್ತು ಶಾಸಕ ಬಸವರಾಜ ಶಿವಣ್ಣನವರ ಭರವಸೆ ನೀಡಿದರು.
ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಮಂಗಳವಾರ ಜರುಗಿದ ಆಶ್ರಯ ಸಮಿತಿ ಸದಸ್ಯರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಕಳೆದ 10 ವರ್ಷಗಳಿಂದ ಪಟ್ಟಣದ ಸಾವಿರಾರು ನಿರಾಶ್ರಿತರು ಮನೆ ಹಕ್ಕು ಪತ್ರ ನೀಡುವಂತೆ ಅರ್ಜಿ ಸಲ್ಲಿಸಿದ್ದು, ಸರ್ಕಾರದಿಂದ ಮಂಜೂರಾತಿ ಆದೇಶಕ್ಕಾಗಿ ಕಾಯುತ್ತಿದ್ದಾರೆ, ತಾವು (2013-18) ಶಾಸಕರಾಗಿದ್ದ ಅವಧಿಯಲ್ಲಿ ಮಲ್ಲೂರು ರಸ್ತೆಯಲ್ಲಿ 10 ಎಕರೆ ಭೂಮಿಯನ್ನು ಬಡವರ ನಿವೇಶನಕ್ಕಾಗಿ ಖರೀದಿಸಲಾಗಿತ್ತು, ಆದರೆ ಉದ್ದೇಶಿತ ಭೂಮಿ ಸುತ್ತಲೂ ಮೆಣಸಿನಕಾಯಿ ಪೌಡರ್ ಸಿದ್ಧಪಡಿಸುವ ಘಟಕಗಳು ತಲೆ ಎತ್ತಿವೆ. ಅಲ್ಲಿ ಪ್ರತಿನಿತ್ಯ ಚಿಕ್ಕ ಮಕ್ಕಳು, ವೃದ್ಧರೂ ಸೇರಿ ದಂತೆ ಆರೋಗ್ಯ ತೊಂದರೆ ಸೇರಿದಂತೆ ವಾಸಿಸಲು ಯೋಗ್ಯವಿದೆ ಎಂಬುದರ ಕುರಿತು ಅಧಿಕಾರಿಗಳು ನಿರ್ಧರಿಸಬೇಕಿದೆ. ಬಳಿಕ ಬಡ ಜನರಿಗೆ ನಿವೇಶನ ಹಂಚಿಕೆ ಮಾಡುವ ಕುರಿತು ನಿರ್ಧಾರವಾಗಲಿದೆ ತಿಳಿಸಿದರು.ರಾಜಕೀಯ ರಹಿತ ಪಟ್ಟಿ ಸಿದ್ಧ: ಬಡವರ ನೋವು ಅರ್ಥವಾಗಿದ್ದು, ಅರ್ಹರಿಗೆ ನಿವೇಶನ ನೀಡಲು ಯಾವುದೇ ರಾಜಕೀಯ ಬೆರೆಸುವುದಿಲ್ಲ, ಹಲವಾರು ವರ್ಷಗಳಿಂದ ಮನೆ ನೀಡುವಂತೆ ಅರ್ಜಿ ಸಲ್ಲಿಸಿದ್ದು, ಸಾಕಷ್ಟು ಹೋರಾಟ ಕೂಡ ನಡೆಸಿದ್ದಾರೆ. ಈ ಹಿಂದೆ ಆಯ್ಕೆ ಪಟ್ಟಿ ಮಾಡಲಾಗಿದ್ದು, ಕೆಲ ಕಾರಣಗಳಿಂದ ಇಂದಿಗೂ ವಿತರಣೆಯಾಗಿಲ್ಲ. ಅರ್ಹರಿಗೆ ನಿವೇಶನ ನೀಡ ಬೇಕಿದ್ದು, ಈ ಕುರಿತು ಆಶ್ರಯ ಸಮಿತಿ ನಿರ್ಧಾರ ಪ್ರಕಟಿಸಲಿದೆ. ಈಗಿರುವ ಭೂಮಿಯಲ್ಲಿ ಎಲ್ಲರಿಗೂ ನಿವೇಶನ ಹಂಚಿಕೆ ಅಸಾಧ್ಯ. ಸರ್ಕಾರದ ವತಿಯಿಂದ ನಿವೇಶನ ನೀಡಿ, ಮನೆ ಕೂಡ ನಿರ್ಮಿಸಿ ಕೊಡಲು ಚಿಂತನೆ ನಡೆಸಿದ್ದೇವೆ. ಇದಕ್ಕಾಗಿ ಹೆಚ್ಚುವರಿ ಭೂಮಿ ಅಗತ್ಯವಾಗಿದ್ದು, ಸರ್ಕಾರವೇ ಭೂಮಿ ಖರೀದಿಸಿ ಅರ್ಹರಿಗೆ ಮನೆ ನೀಡುತ್ತೇವೆ, ಬಡವರಿಗೆ ಗೊಂದಲ ಬೇಡವೆಂದರು.
ನಗರ ಆಶ್ರಯ ಸಮಿತಿ ಅಧ್ಯಕ್ಷ ಮುನಾಫ್ ಎರೆಸೀಮೆ ಮಾತನಾಡಿ, ಹಲವು ವರ್ಷಗಳಿಂದ ಸಾವಿರಾರು ಜನ ನಿವೇಶನ ನೀಡುವಂತೆ ಪುರಸಭೆಗೆ ಮನವಿ ಮಾಡಿದ್ದಾರೆ. ಬಡವರ ತೊಂದರೆ ಆಶ್ರಯ ಸಮಿತಿಗೆ ಅರ್ಥವಾಗಿದೆ, ಹೆಚ್ಚು ಸಮಯ ವ್ಯರ್ಥ ಮಾಡದೆ, ಶೀಘ್ರದಲ್ಲೇ ಎಲ್ಲರಿಗೂ ನ್ಯಾಯ ದೊರಕಿಸಿಕೊಡುವ ಪ್ರಯತ್ನ ಮಾಡಲಾಗುವುದು, ಸ್ಥಳೀಯ ಬಡವರಿಗೆ ನಿವೇಶನ ಹಂಚಿಕೆ ಮಾಡುವಲ್ಲಿ ಸ್ಥಳೀಯ ಶಾಸಕ ಬಸವರಾಜ ಶಿವಣ್ಣನವರ ಹೆಚ್ಚು ಕಾಳಜಿ ತೋರಿದ್ದು, ಪುರಸಭೆ ಎಲ್ಲ ಸದಸ್ಯರು ಅವರಿಗೆ ಸಹಕಾರ ನೀಡುವ ಮೂಲಕ ಸಾರ್ವಜನಿಕರ ಹಿತವನ್ನು ಕಾಯೋಣ. ಎಲ್ಲರಿಗೂ ಪುರಸಭೆ ನಿವೇಶನ ವಿತರಿಸುವ ವಿಶ್ವಾಸ ವ್ಯಕ್ತಪಡಿಸಿದರು.ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ್ರ ಪಾಟೀಲ, ಉಪಾಧ್ಯಕ್ಷ ಸುಭಾಸ್ ಮಾಳಗಿ, ಆಶ್ರಯ ಸಮಿತಿ ಸದಸ್ಯರಾದ ಗಿರೀಶ ಇಂಡಿಮಠ, ದುರುಗೇಶ ಗೋಣೆಮ್ಮನವರ, ಅಬ್ದುಲ್‌ಮಜೀದ್ ಮುಲ್ಲಾ, ಲಕ್ಷ್ಮಿ ಬಮ್ಮಲಾಪುರ, ತಹಸೀಲ್ದಾರ ಫಿರೋಜ್ ಷಾ ಸೋಮನಕಟ್ಟಿ, ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ ಇತರರಿದ್ದರು.