ತರೀಕೆರೆಕರ್ನಾಟಕದಲ್ಲಿ ಸರ್ಕಾರವೇ ಇಲ್ಲ, ರಾಜ್ಯ ಹೊತ್ತಿ ಉರಿಯುತ್ತಿದೆ. ಕರ್ನಾಟಕ ಸರ್ಕಾರ ಸತ್ತು ಹೋಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.

-ಸರ್ಕಾರದ ವೈಫಲ್ಯ ಖಂಡಿಸಿ ತರೀಕೆರೆಯಲ್ಲಿ ಬೃಹತ್ ಪ್ರತಿಭಟನೆ । ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಕೆ

ಕನ್ನಡಪ್ರಭ ವಾರ್ತೆ ತರೀಕೆರೆ

ಕರ್ನಾಟಕದಲ್ಲಿ ಸರ್ಕಾರವೇ ಇಲ್ಲ, ರಾಜ್ಯ ಹೊತ್ತಿ ಉರಿಯುತ್ತಿದೆ. ಕರ್ನಾಟಕ ಸರ್ಕಾರ ಸತ್ತು ಹೋಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.

ಸೋಮವಾರ ತರೀಕೆರೆ ಮಂಡಲ ಬಿಜೆಪಿಯಿಂದ ರಾಜ್ಯ ಸರ್ಕಾರ ಗುಟ್ಕಾ ನಿಷೇಧದ ದ್ವಂದ್ವ ನೀತಿ ಖಂಡಿಸಿ, ಕಾಮಗಾರಿಗಳ ಹೆಸರಿನಲ್ಲಿ ಕಮೀಷನ್ ದಂಧೆ ಹಾಗೂ ಕುಟುಂಬ ರಾಜಕಾರಣ ಮಾಡುತ್ತಿರುವ ತರೀಕೆರೆ ಕ್ಷೇತ್ರ ಶಾಸಕರ ವಿರುದ್ಧದ ಬೃಹತ್ ಪ್ರತಿಭಟನಾ ಮೆರವಣಿಗೆ ನಂತರ ಮಹಾತ್ಮಾ ಗಾಂಧಿ ವೃತ್ತದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.

ಸಿದ್ದರಾಮಯ್ಯ ಸಭೆಗಳಲ್ಲಿ ನನಗೂ ಫ್ರೀ ನಿಮಗೂ ಫ್ರೀ ಎಂದು ಹೇಳಿದ್ದರು. ಆದರೆ ಈ ಹಿಂದೆಯೇ ನಾನು ಹೇಳಿದ್ದೆ, ಈ ಗ್ಯಾರಂಟಿಗಳಿಗೆ ವಾರಂಟಿ ಇಲ್ಲ. ಈಗ ರಾಜ್ಯದಲ್ಲಿ 15 ಲಕ್ಷ ಕುಟುಂಬಗಳಿಗೆ ಗೃಹಲಕ್ಷ್ಮಿ ತಲುಪಿಲ್ಲ, ಕೇಂದ್ರ ಸರ್ಕಾರದಿಂದ ಉಚಿತ ಅಕ್ಕಿ ಪಡೆಯುತ್ತಿದ್ದಾರೆ. ಆದರೆ 14 ಲಕ್ಷ ಬಿಪಿಎಲ್‌ ಕಾರ್ಡುಗಳನ್ನು ರದ್ದು ಮಾಡಿದ್ದೇಕೆ? ಸರ್ಕಾರಕ್ಕೆ ಇಂತಹ ದುಸ್ಥಿತಿ ಬಂದಿದೆಯೇ ಎಂದರು.

ಮಾಜಿ ಶಾಸಕ ಡಿ.ಎಸ್. ಸುರೇಶ್ ಮಾತನಾಡಿ ಸರ್ಕಾರದ ರೈತ ವಿರೋಧಿ ನೀತಿ ಹಾಗೂ ಕಳಪೆ ಕಾಮಗಾರಿ ಖಂಡಿಸಿ, ಕೇಂದ್ರದ ಯೋಜನೆ ದುರುಪಯೋಗ ಪಡಿಸಿಕೊಂಡಿರುವುದನ್ನು ಖಂಡಿಸಿ ಇಂದು ಬೃಹತ್ ಹೋರಾಟ ಆಯೋಜಿಸಿದೆ.

ತಾಲೂಕಿನಲ್ಲಿ ಬರಗಾಲ ಇದ್ದರೂ ರೈತರಿಗೆ ಸ್ಪಂದಿಸುತ್ತಿಲ್ಲ. ಕಾಮಗಾರಿ ಕಳಪೆಯಿಂದ ಪಟ್ಟಣದ ರಸ್ತೆಗಳೆಲ್ಲಾ ಕುಸಿದಿದೆ. ₹56 ಕೋಟಿ ಗಳಲ್ಲಿ ರಸ್ತೆ ಕಾಮಗಾರಿ ನಡೆದಿದೆ ಎಂದಿದ್ದು ಈ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಲಕ್ಕವಳ್ಳಿ ಆಸ್ಪತ್ರೆ ಇನ್ನೂ ಕಾರ್ಯಾರಂಭ ಮಾಡಿಲ್ಲ. ಕಟ್ಟಡ ಹಾಳಾಗುತ್ತಿದೆ ಎಂದು ಆರೋಪಿಸಿದ ಅವರು.ಇನ್ನು ಒಂದು ತಿಂಗಳಲ್ಲಿ ತರೀಕೆರೆ ತಾಯಿ-ಮಗು ಆಸ್ಪತ್ರೆ ಪ್ರಾರಂಭವಾಗದಿದ್ದರೆ ಪಕ್ಷದಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಗುದ್ದಲಿ-ಹಾರೆ ಹಿಡಿದು ಗುದ್ದಲಿ ಪೂಜೆ ನಡೆಸುತ್ತಿರುವುದು ವೈರಲ್ ಆಗಿದೆ. ಶಾಸಕರು ಡ್ರಾಮ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು. ಸರ್ಕಾರ ಗುಟ್ಕಾ ನಿಷೇಧ ಮಾಡಿದೆ ಆದರೆ ಮದ್ಯಪಾನದಿಂದ ಜನ ಹಾಳಾಗುವುದಿಲ್ಲವೇ ಎಂದ ಅವರು ಕ್ಷೇತ್ರದ ಪರಿಸ್ಥಿತಿ ಅಧೋಗತಿಗೆ ಹೋಗಿದೆ.

ಮಟ್ಕಾ ಹಾವಳಿ:

ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಲ್. ರಮೇಶ್ ಮಾತನಾಡಿ ರಸ್ತೆ ಕಾಮಗಾರಿ ವಿಳಂಬದಿಂದ 2 ವರ್ಷಗಳಲ್ಲಿ 7 ಜನ ಮೃತಪಟ್ಟಿದ್ದಾರೆ. ಏನೂ ಕ್ರಮ ಕೈಗೊಂಡಿಲ್ಲ. ಶಿಕ್ಷಣ ಇಲಾಖೆ ಮತ್ತಿತರ ಇಲಾಖೆಗಳ ಕಾರ್ಯಕ್ರಮದಲ್ಲಿ ಶಾಸಕರ ಕುಟುಂಬದವರೇ ಭಾಗವಹಿಸುತ್ತಿದ್ದಾರೆ. ಮಟ್ಕಾ ಹಾವಳಿ ಹೆಚ್ಚಾದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ. ಕ್ಲಬ್ ಗಳೆಲ್ಲಾ ಓಪನ್ ಆಗಿದೆ, ತರೀಕೆರೆ ಇಸ್ಪೀಟ್ ಅಡ್ಡ ಆಗಿದೆ. ಇದನ್ನು ಖಂಡಿಸಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.

ಪುರಸಭೆ ಸದಸ್ಯ ಟಿ.ಎಂ. ಬೋಜರಾಜ್ ಮಾತನಾಡಿ ಕಳಪೆ ಕಾಮಗಾರಿ ಕಮೀಷನ್, ಮದ್ಯದಂಗಡಿಗಳ ಕಮೀಷನ್ ಮತ್ತು ಪುರಸಭೆಯಲ್ಲಿ ನಿರ್ಮಿಸಬೇಕಾದ ಕಾಮಗಾರಿಗಳನ್ನು ಪಿಡಬ್ಲ್ಯೂಡಿ ಇಲಾಖೆ ಮುಖಾಂತರ ಮಾಡಿಸಿ ಪುರಸಭೆ ಅಡಳಿತ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಭಾರತೀಯ ಜನತಾ ಪಾರ್ಟಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ, ಜಿಪಂ ಮಾಜಿ ಅಧ್ಯಕ್ಷೆ ಚೈತ್ರಶ್ರೀ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಆರ್.ಆನಂದಪ್ಪ, ಬಿಜೆಪಿ ತರೀಕೆರೆ ಮಂಡಲ ಅಧ್ಯಕ್ಷ ಪ್ರತಾಪ್ ಗರಗದಹಳ್ಳಿ, ಮುಖಂಡರಾದ ಹಳಿಯೂರು ಸೋಮಶೇಖರ್ ಮತ್ತಿತರರು ಮಾತನಾಡಿದರು.

ಪ್ರತಿಭಟನೆಯಲ್ಲಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು. ಮುಖಂಡ ರಂಗಸ್ವಾಮಿ ಮನವಿ ಪತ್ರ ಓದಿದರು. ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

24ಕೆಟಿಆರ್.ಕೆ.4ಃ

ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ತರೀಕೆರೆಯಲ್ಲಿ ಬಿಜೆಪಿ ಮಂಡಲದಿಂದ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಡಿ.ಎಸ್.ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ, ತಾಲೂಕು ಅಧ್ಯಕ್ಷ ಪ್ರತಾಪ್ ಗರಗದಹಳ್ಳಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಲ್. ರಮೇಶ್, ಪುರಸಭೆ ಸದಸ್ಯ ಟಿ.ಎಂ. ಬೋಜರಾಜ್ ಕಾರ್ಯಕರ್ತರು ಭಾಗವಹಿಸಿದ್ದರು.