ನೀರಾವರಿ ಜಿಲ್ಲೆಯಾಗಿಸಲು ಸರ್ಕಾರಕ್ಕೆ ಎಚ್ಚರಿಸುವ ಅಗತ್ಯವಿದೆ

| Published : Jan 09 2025, 12:47 AM IST

ಸಾರಾಂಶ

ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಬಸವಲಿಂಗ ಸ್ವಾಮೀಜಿ ಹೇಳಿಕೆ.

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ಬಯಲು ಸೀಮೆಯ ಜೀವನಾಡಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ತೀವ್ರಗೊಳಿಸಿ ಜಿಲ್ಲೆಯನ್ನು ಸಂಪೂರ್ಣವಾಗಿ ನಿರಾವರಿಯನ್ನಾಗಿಸುವಲ್ಲಿ ದೊಡ್ಡ ಮಟ್ಟದ ಹೋರಾಟ ರೂಪಿಸಿ ಸರ್ಕಾರವನ್ನು ಎಚ್ಚರಿಸುವುದು ಅಗತ್ಯವಾಗಿದೆ ಎಂದು ಸಿದ್ದಯ್ಯನಕೋಟೆ ಬಸವಲಿಂಗ ಸ್ವಾಮೀಜಿ ಹೇಳಿದರು.

ಪಟ್ಟಣದ ಕನ್ನಡ ಭವನದಲ್ಲಿ ಬುಧವಾರ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ತೀವ್ರ ಗೊಳಿಸಲು ಹಾಗೂ ಕೈ ಬಿಟ್ಟ ಕೆರೆಗಳಿಗೆ ನೀರುಣಿಸಲು ರೈತರ ನಡೆ ಸಿರಿಗೆರೆ ಕಡೆ ಮಠದ ಕಡೆ ಎನ್ನುವ ಕಾರ್ಯಕ್ರಮದ ಭಾಗವಾಗಿ ರಾಜ್ಯ ರೈತ ಸಂಘ ಸೇರಿದಂತೆ ತಾಲೂಕಿನ ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಸದಾ ಬರಕ್ಕೆ ತುತ್ತಾಗುವ ತಾಲೂಕಿನಲ್ಲಿ ಪ್ರಮುಖ ಜಲ ಮೂಲಗಳು ಇಲ್ಲದೆ ರೈತರು ಮಳೆಯನ್ನೇ ನಂಬಿ ಬದುಕುವಂತಾಗಿದೆ. ಪ್ಲೋರೈಡ್ ಸಮಸ್ಯೆಯಿಂದ ಜನಸಾಮಾನ್ಯರು ಬಳಲುತ್ತಿದ್ದಾರೆ. ಸಾವಿರ ಅಡಿ ಕೊರೆದರೂ ಬೋರ್‌ವೆಲ್ ಗಳಲ್ಲಿ ನೀರು ಸಿಗುತ್ತಿಲ್ಲ.ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ಹೈರಾಣಾಗುತ್ತಿದ್ದಾರೆ. ಹಾಗಾಗಿ ಬಯಲು ಸೀಮೆಯ ಜೀವನಾಡಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ತೀವ್ರಗೊಳಿಸಿ ಜಿಲ್ಲೆಯನ್ನು ಸಂಪೂರ್ಣ ನಿರಾವರಿಯನ್ನಗಿಸಲು ಸರ್ಕಾರಕ್ಕೆ ಒತ್ತಡ ತರುವುದು ಪ್ರಸ್ತುತ ದಿನಗಳಲ್ಲಿ ಅನಿವಾರ್ಯವಾಗಿದೆ. ಈ ಹೋರಾಟಕ್ಕೆ ಜಿಲ್ಲೆಯ ಎಲ್ಲಾ ಶಾಸಕರ ಹಾಗೂ ಸಚಿವರ ವಿಧಾನ ಪರಿಷತ್ ಸದಸ್ಯರನ್ನು ವಿಶ್ವಾಸಕ್ಕೆ ಪಡೆದುಕೊಂಡು ನಡೆಸುವ ಹೋರಾಟಕ್ಕೆ ಪ್ರತಿಯೊಬ್ಬರು ಪಕ್ಷಾತೀತವಾಗಿ ಬೆಂಬಲ ನೀಡಬೇಕೆಂದು ತಿಳಿಸಿದರು.

ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೇಡರೆಡ್ಡಿ ಹಳ್ಳಿ ಬಸವರೆಡ್ಡಿ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾಗಿ ದಶಕಗಳೇ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಚ್ಚಾಶಕ್ತಿ ಕೊರತೆ ಇಲ್ಲದಿರುವುದೇ

ಯೋಜನೆ ವಿಳಂಬವಾಗಲು ಪ್ರಮುಖ ಕಾರಣವಾಗಿದೆ.

ಈ ಸಂಬಂಧ ಸರ್ಕಾರಗಳನ್ನು ಎಚ್ಚರಿಸುವ ಕೆಲಸ ಮಾಡಬೇಕು. ರಾಜ್ಯದ ಪ್ರಮುಖ ಮಠಗಳಲ್ಲಿ ಒಂದಾಗಿರುವ ಸಿರಿಗೆರೆ ಶ್ರೀಗಳು ನಿರಂತರ ಪ್ರಯತ್ನದಿಂದಾಗಿ ಅಲ್ಲಿನ ಕೆರೆಗಳಿಗೆ ನೀರು ತುಂಬಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಪ್ರಕಾರವಾಗಿ ಯೋಜನೆಯ ಕಾಮಗಾರಿ ತ್ವರಿತ ಗೊಳಿಸಲು ಜ.13ರಂದು ಸೋಮವಾರ ಪಾದಯಾತ್ರೆಯ ಮೂಲಕ ಸಿರಿಗೆರೆಗೆ ತೆರಳಿ ಶ್ರೀಗಳಿಗೆ ಮನವಿ ಸಲ್ಲಿಸಲಾಗುವುದು. ಈ ಮಹತ್ವದ ಕಾರ್ಯಕ್ಕೆ ಪ್ರತಿಯೊಬ್ಬರು ಭಾಗವಹಿಸುವಂತೆ ಮನವಿ ಮಾಡಿದರು.

ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ನಿಜಲಿಂಗಪ್ಪ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಗೆ ಕಾಮಗಾರಿ ನೆನೆಗುದಿಗೆ ಬಿದ್ದಿದ್ದರೂ ಜಿಲ್ಲೆಯ ಜನಪ್ರತಿನಿಧಿಗಳು ಚಕಾರ ಎತ್ತುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುದಾನ ನೀಡುವಲ್ಲಿ ನಿರ್ಲಕ್ಷ ವಹಿಸುತ್ತಿವೆ. ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಘೋಷಿಸಿದ್ದ 5,300 ಕೋಟಿ ಅನುದಾನ ಪಡೆಯಲು ಹಾಗೂ ಸದಾ ಬರಗಾಲಕ್ಕೆ ತುತ್ತಾಗುತ್ತಿರುವ ಚಳ್ಳಕೆರೆ ಮತ್ತು ಮೊಳಕಾಲ್ಮುರು ತಾಲೂಕುಗಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ವೇಗ ಗೊಳಿಸಲು ಸಿರಿಗೆರೆ ಶ್ರೀಗಳಿಗೆ ಇದೇ ಜ.13 ರಂದು ಸೋಮವಾರ ಮನವಿ ಸಲ್ಲಿಸಲಾಗುವುದು ಈ ಕಾರ್ಯಕ್ಕೆ ಪ್ರತಿಯೊಬ್ಬರು ಪಾಲ್ಗೊಳ್ಳುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ನೀರಾವರಿ ಹೋರಾಟ ಸಮಿತಿಯ ವಿ.ಮಾರನಾಯಕ, ಕೃಷಿಕ ಸಮಾಜದ ಭಕ್ತ ಪ್ರಹ್ಲಾದ್, ರೈತ ಸಂಘದ ಮರ್ಲಹಳ್ಳಿ ರವಿ ಕುಮಾರ್, ಕೋನಸಾಗರ ಮಂಜುನಾಥ, ವಕೀಲ ರಾಜಶೇಖರ ನಾಯಕ, ದಸಂಸ ಜಿಲ್ಲಾ ಸಂಚಾಲಕ ಕೊಂಡಾಪುರ ಪರಮೇಶ್, ಕೆ.ಟಿ.ಗಂಗಾಧರ, ಪಟ್ಟಣ ಪಂಚಾಯಿತಿ ಸದಸ್ಯ ಅಬ್ದುಲ್ಲಾ,ಡಿ. ಸಿ.ನಾಗರಾಜ, ದಾನಸೂರ ನಾಯಕ ಇದ್ದರು.