ಸಾರಾಂಶ
2 ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಶಿಕ್ಷಣ, ಆರೋಗ್ಯ ಹಾಗೂ ಜನರ ಬದುಕಿನ ಬೇಕಾಗಿರುವ ಯೋಜನೆಗಳು ನೀಡುವುದೇ ರಾಜ್ಯದ ಕಾಂಗ್ರೆಸ್ ಸರ್ಕಾರದ ಗುರಿ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
ಕ್ಷೇತ್ರದ ವ್ಯಾಪ್ತಿಯ ದೇವಗೊಂಡನಹಳ್ಳಿ, ಬೆಳವಾಡಿ, ಕಳಸಾಪುರ, ಮಾಚಗೊಂಡನಹಳ್ಳಿ, ಜೋಡಿಲಿಂಗದಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ಎರಡು ಕೋಟಿ ವೆಚ್ಚದಲ್ಲಿ ಗ್ರಾಮಗಳ ರಸ್ತೆ ಅಭಿವೃದ್ಧಿ ಬೀದಿ ದೀಪ, ಚರಂಡಿ, ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.ದೇಶಕ್ಕೆ ಮಾದರಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಜನಪ್ರಿಯಗೊಂಡಿದ್ದು, ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಹದಿನಾರುವರೆ ವರ್ಷಗಳ ಸುದೀರ್ಘ ಆಡಳಿತ ನಡೆಸಿದ ಉಕ್ಕಿನ ಮಹಿಳೆ ಎಂದು ಹೇಳಿದರು.ಗುಜರಾತ್ ರಾಜ್ಯದ ಮಾದರಿಯಲ್ಲಿ ಕರ್ನಾಟಕವನ್ನು ಅಭಿವೃದ್ಧಿ ಮಾಡುತ್ತೇವೆ ಎಂಬುದನ್ನು ಜಾಹಿರಾತು ಮೂಲಕ ನೋಡಿದ್ದ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸರ್ಕಾರದ ಗ್ಯಾರಂಟಿ ಯೋಜನೆ ಮಾದರಿ ನೋಡಿ ಉತ್ತರ ಭಾರತ, ಹರಿಯಾಣ, ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಸಿವೆ ಎಂದು ಹೇಳಿದರು.20 ಅಂಶಗಳ ಕಾರ್ಯಕ್ರಮದ ಮೂಲಕ ಶೋಷಿತ, ಬಡ ವರ್ಗದ ಎಲ್ಲಾ ಜನರನ್ನು ಸಮಾನವಾಗಿ ಕಂಡು ಸರ್ವರೂ ಸಮಾಜದ ಮುನ್ನಲೆಗೆ ತರಬೇಕೆಂಬ ಪರಿಕಲ್ಪನೆಯನ್ನು ಇಂದಿರಾಗಾಂಧಿ ಹೊಂದಿದ್ದರು ಎಂದು ತಿಳಿಸಿದರು.ಉಳುವವನೇ ಭೂಮಿ ಒಡೆಯ ಯೋಜನೆಯನ್ನು ಜಾರಿಗೆ ತಂದು ಇಂದಿರಾಗಾಂಧಿ, ಡಿ. ದೇವರಾಜ್ ಅರಸ್ ಭೂ ರಹಿತರಿಗೆ ಭೂಮಿ ಮಂಜೂರು ಮಾಡಿದ್ದರು ಎಂದರು. ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಂದಾಯ ಗ್ರಾಮಗಳನ್ನು ಆಯ್ಕೆ ಮಾಡುವ ಮೂಲಕ ವಾಸಿಸುವವರಿಗೆ ಹಕ್ಕು ಪತ್ರ ನೀಡಿ ಮನೆ ಕೊಡುವ ಭರವಸೆ ಕೊಟ್ಟು, ವಾಸಿಸುವವನೇ ಮನೆ ಒಡೆಯ ಎಂಬ ಕಾನೂನು ಜಾರಿಗೆ ತಂದವರು ಮುಖ್ಯ ಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣ ಭೈರೇಗೌಡ ಎಂದು ತಿಳಿಸಿದರು.ವಿರೋಧ ಪಕ್ಷದ ಆರೋಪಗಳಿಗೆ ಜನ ಮೆಚ್ಚುವ ರೀತಿ ಅಭಿವೃದ್ಧಿ ಮಾಡುವುದಾಗಿ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದ್ದು, ಜಾತ್ಯತೀತ ಪಕ್ಷವಾದ ಕಾಂಗ್ರೆಸ್ ಪಕ್ಷ ಎಲ್ಲಾ ಧರ್ಮದವರನ್ನು ಸಮಾನವಾಗಿ ಪ್ರೀತಿಯಿಂದ ಕಾಣುತ್ತದೆ ಎಂದರು.ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ ಮಾತನಾಡಿ, ಸುಮಾರು ₹2 ಕೋಟಿ ವೆಚ್ಚದ ಅನುದಾನದಲ್ಲಿ ಬೀದಿದೀಪ, ಚರಂಡಿ, ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಸರ್ಕಾರದ ಈ ಸೌಲಭ್ಯವನ್ನು ಗ್ರಾಮಸ್ಥರು ಸದುಪಯೋಗಪಡಿ ಸಿಕೊಳ್ಳಬೇಕೆಂದು ತಿಳಿಸಿದರು.ಸರ್ಕಾರ ಬಂದು ಎರಡು ವರ್ಷಗಳಾಗಿದ್ದು, ಅಭಿವೃದ್ಧಿಗೆ ಹಣ ಇಲ್ಲ ಎನ್ನುವ ವಿರೋಧ ಪಕ್ಷಗಳ ಟೀಕೆಗೆ ಈ ರೀತಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವ ಮೂಲಕ ತಕ್ಕ ಉತ್ತರ ನೀಡುತ್ತಿದ್ದೇವೆ ಎಂದು ಹೇಳಿದರು.ಕಳೆದ 25 ವರ್ಷಗಳಿಂದ ಅಭಿವೃದ್ಧಿ ಕಾಣದೇ ಇದ್ದ ಈ ರಸ್ತೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಎಚ್.ಡಿ. ತಮ್ಮಯ್ಯ ಅಭಿವೃದ್ಧಿ ಕಾರ್ಯಗಳಿಗೆ ಮುಂದಾಗಿದ್ದಾರೆ. ಚುನಾವಣಾ ಪೂರ್ವದಲ್ಲಿ ಜೋಡಿ ಲಿಂಗದಹಳ್ಳಿ, ದೇವಗೊಂಡನಹಳ್ಳಿ, ಬೆಳವಾಡಿ, ಕಳಸಾಪುರ, ಮಾಚಗೊಂಡನಹಳ್ಳಿ ಗ್ರಾಮಸ್ಥರು ನೀಡಿದ ಪ್ರೀತಿ, ವಿಶ್ವಾಸ ಮತ್ತು ಕಾಂಗ್ರೆಸ್ ಪಕ್ಷದ ಶಾಸಕರ ಆಯ್ಕೆಗೆ ಶ್ರಮಿಸಿದ ಕಾರ್ಯಕರ್ತರನ್ನು ಇದೇ ಸಂದರ್ಭದಲ್ಲಿ ಸ್ಮರಿಸಿದರು.ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹಮದ್, ಕೃಷ್ಣಮೂರ್ತಿ, ಅಮೀರ್, ಜಗದೀಶ್, ಶಾಂತಕುಮಾರ್, ಸಂತೋಷ್, ಕುಮಾರ್, ಗುರು, ಮಧು, ಯೋಗೀಶ್, ಹರ್ಷದ್, ಪ್ರವೀಣ ಉಪಸ್ಥಿತರಿದ್ದರು. 30 ಕೆಸಿಕೆಎಂ 2ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ದೇವಗೊಂಡನಹಳ್ಳಿ ಶಾಸಕ ಎಚ್.ಡಿ. ತಮ್ಮಯ್ಯ ಸೋಮವಾರ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.