ಸಾರಾಂಶ
ಕನ್ನಡ ಪ್ರಭ ವಾರ್ತೆ ಬ್ಯಾಕೋಡು
ಸಿಗಂದೂರು ದೇವಸ್ಥಾನದ ರಕ್ಷಣೆಯ ಹೊಣೆ ನಮ್ಮದು, ಎಂತಹ ಕಷ್ಟದ ಸಮಯದಲ್ಲೂ ಸಿಗಂದೂರಿನ ರಕ್ಷಣೆಗೆ ನಮ್ಮ ಸರಕಾರ ಬದ್ಧವಾಗಿರುತ್ತದೆ ಎಂದು ಶಿಕ್ಷಣ ಸಚಿವ ಮದು ಬಂಗಾರಪ್ಪ ಹೇಳಿದರು.ಇಲ್ಲಿಯ ಸಮೀಪದ ಸಿಗಂದೂರು ದೇವಸ್ಥಾನದ ಶೇಷಪ್ಪ ನಾಯಕ ವೇದಿಕೆಯಲ್ಲಿ ಸಿಗಂದೂರು ದಸರಾ ವೈಭವಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿ, ರೈತಪರ ಕಾಳಜಿ ಇರುವ ಕಾಗೋಡು ತಿಮ್ಮಪ್ಪರವರ ಕಾಲದಲ್ಲಿ ಶರಾವತಿ ಸಂತ್ರಸ್ತರು ಪಡೆದ ಭೂಮಿ ಹಕ್ಕನ್ನು ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ವಜಾ ಗೊಳಿಸಲಾಗಿತ್ತು. ಈಗ ಅಂತಹ ಭೂಮಿ ಕಳೆದುಕೊಂಡ ರೈತರಿಗೆ ಮರು ಹಕ್ಕನ್ನು ನೀಡುವ ಭರವಸೆ ನೀಡಿದರು.
ಸಿಗಂದೂರಿನಧರ್ಮದರ್ಶಿ ಡಾ. ಎಸ್. ರಾಮಪ್ಪ ಮಾತನಾಡಿ, ಸಿಗಂದೂರು ದೇವಸ್ಥಾನ ನನ್ನದೊಬ್ಬನದಲ್ಲ. ಜಾತಿ, ಧರ್ಮ ಎನ್ನದೇ, ಕಷ್ಟ ಎಂದು ಬಂದವರಿಗೆ ದೇವಿ ಕರುಣಿಸುತ್ತಾಳೆ. ದೇವಿಯ ಪವಾಡ ಅದ್ಬುತ ಮೂರು ದಶಕಗಳಲ್ಲಿ ಹಲವು ಬದಲಾವಣೆತಂದಿದ್ದು, ಸಿಗಂದೂರು ಸೇತುವೆ ಆಗಿದೆ ಎಂದರೆ ದೇವಿಯ ಆಶೀರ್ವಾದ ಅಪಾರವಾದುದು. ಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಸದ್ಭಕ್ತರು ಕಣ್ತುಂಬಿಕೊಂಡು ದೇವಿಯ ಆಶೀರ್ವಾದ ಪಡೆದುಕೊಳ್ಳಿ ಎಂದು ಕರೆ ನೀಡಿದರು.ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ ಮಾತನಾಡಿ, ರಾಮಪ್ಪನವರ ಅವಿರತ ಶ್ರಮ, ಮತ್ತು ಭಕ್ತರ ಸಹಕಾರ, ಕಾಗೋಡು ತಿಮ್ಮಪ್ಪನವರು ಈ ಹಿಂದೆ ದೇವಸ್ಥಾನಕ್ಕೆ ಒದಗಿಸಿದ ಮೂಲಭೂತ ಸೌಕರ್ಯಗಳು ದೇವಸ್ಥಾನ ಈ ಮಟ್ಟಕ್ಕೆ ಬೆಳೆಯಲು ಕಾರಣ ಎಂದರು.
ದೇವಸ್ಥಾನದಲ್ಲಿ ದೇವರ ಪೂಜೆಯ ಜೊತೆಗೆ ಸಿಗಂದೂರಿನ ಚಿತ್ತ ಸರ್ಕಾರಿ ಶಾಲೆಗಳತ್ತ ಎನ್ನುವ ಕಾರ್ಯಕ್ರಮದಡಿಯಲ್ಲಿ ಶಿಕ್ಷಣಕ್ಕೆ ಒತ್ತುನೀಡುತ್ತಿರುವ ದೇವಸ್ಥಾನದ ಕಾರ್ಯದರ್ಶಿಗಳ ಕೆಲಸ ಮೆಚ್ಚುವಂತದ್ದು ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮಕ್ಕೂ ಮುನ್ನ ಗಣ್ಯರನ್ನು ಡೊಳ್ಳು ತಂಡದವರು ಸ್ವಾಗತಿಸಿದರು. ಎಲ್ಲಾ ಗಣ್ಯರಿಗೂ ದೇವಸ್ಥಾನದ ಸಮಿತಿಯಿಂದ ಗೌರವಸಮರ್ಪಣೆ ನಡೆಯಿತು.
ತುಮರಿ ಗ್ರಾಪಂ ಅಧ್ಯಕ್ಷೆ ಶ್ರೀದೇವಿ ರಾಮಚಂದ್ರ, ದುಗುರು ಗ್ರಾಪಂ ಅಧ್ಯಕ್ಷ ಫಯಾಜ್ ಅಹಮದ್, ಚಲನಚಿತ್ರ ನಟಿ ಕಾರುಣ್ಯ ರಾಮ್, ಪ್ರಮುಖರಾದ ಪ್ರವೀಣ ಹಿರೇಗೋಡು, ರಮೇಶ್ ಶಂಕರಘಟ್ಟ, ರಾಮಚಂದ್ರ ಹಾಬಿಗೆ ಮತ್ತಿತರರು ಹಾಜರಿದ್ದರು.ಪೂರ್ಣಿಮಾ ಕರೂರು ಪ್ರಾರ್ಥಿಸಿ, ಎಚ್ ಆರ್ ರವಿಕುಮಾರ್ ಸ್ವಾಗತಿಸಿದರು.
ಸರ್ಕಾರಿ ಶಾಲೆಗಳಿಗೆ ಬಣ್ಣ ವಿತರಣೆಸಿಗಂದೂರಿನ ಚಿತ್ತ ಸರ್ಕಾರಿ ಶಾಲೆಗಳತ್ತ ಎನ್ನುವ ವಿಶೇಷ ಕಾರ್ಯಕ್ರಮದಡಿಯಲ್ಲಿ ಇಲ್ಲಿಯವರೆಗೂ ಎಪ್ಪತ್ತೆರಡು ಶಾಲೆಗಳಿಗೆ ಸುಣ್ಣ-ಬಣ್ಣ ನೀಡುವುದರ ಮೂಲಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದ್ದು 2025ರ ದಸರಾ ಪ್ರಯುಕ್ತ, ಮರಾಠಿ, ಹುರುಳಿ ಹಾಗೂ ಕಟ್ಟಿನಕಾರು ಸರ್ಕಾರಿ ಶಾಲೆಗಳಿಗೆ ಬಣ್ಣ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶರಾವತಿ ಹಿನ್ನೀರಿನ ಹಲ್ಕೆ- ಮುಪ್ಪಾನೆ ಕಡುವಿನಲ್ಲಿ ಈಗ ಸಂಚರಿಸುತ್ತಿರುವ ಲಾಂಚ್ ಸಣ್ಣದಾಗಿದ್ದು ದೊಡ್ಡ ಲಾಂಚ್ ನೀಡುವಂತೆ ಹಾಗೂ ಅಲ್ಲಿಗೆ ಉತ್ತಮ ರಸ್ತೆಯನ್ನು ನೀಡುವಂತೆ ಸಚಿವರಿಗೆ ದೇವಸ್ಥಾನದ ಕಾರ್ಯದರ್ಶಿ ಎಚ್ ಆರ್ ರವಿಕುಮಾರ್ ಮನವಿಪತ್ರ ನೀಡಿದರು. ಸೊರಬ ತಾಲೂಕು ಕಾನಹಳ್ಳಿ ದುರ್ಗಾ ಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಆರ್ಥಿಕ ನೆರವು ನೀಡಲಾಯಿತು.;Resize=(128,128))
;Resize=(128,128))
;Resize=(128,128))
;Resize=(128,128))