ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭಾರತ್ ಜೋಡೋ ಯುವ ಸಂಘ ಯೋಜನೆಯ ಉದ್ದೇಶ ಸ್ವಾಗತಾರ್ಹ. ಆದರೆ, ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ವೆಚ್ಚವನ್ನು ಮಹಾನಗರ ಪಾಲಿಕೆಗಳು ಹಾಗೂ ಕೆಲವು ನಗರ ಸ್ಥಳೀಯ ಸಂಸ್ಥೆಗಳು ತಮ್ಮ ಸ್ವಂತ ಆಯವ್ಯಯದಿಂದ ಭರಿಸಬೇಕೆಂಬ ನಿರ್ದೇಶನಕ್ಕೆ ವಿರೋಧ.

ಧಾರವಾಡ:

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭಾರತ್ ಜೋಡೋ ಯುವ ಸಂಘ ಯೋಜನೆಯ ಉದ್ದೇಶ ಸ್ವಾಗತಾರ್ಹ. ಆದರೆ, ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ವೆಚ್ಚವನ್ನು ಮಹಾನಗರ ಪಾಲಿಕೆಗಳು ಹಾಗೂ ಕೆಲವು ನಗರ ಸ್ಥಳೀಯ ಸಂಸ್ಥೆಗಳು ತಮ್ಮ ಸ್ವಂತ ಆಯವ್ಯಯದಿಂದ ಭರಿಸಬೇಕೆಂಬ ನಿರ್ದೇಶನಕ್ಕೆ ಪಾಲಿಕೆ ಮಾಜಿ ಮೇಯರ್‌ ಈರೇಶ ಅಂಚಟಗೇರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿರುವ ಅವರು, ರಾಜ್ಯ ಸರ್ಕಾರ ತನ್ನ ಆದೇಶದಲ್ಲಿ ಸ್ಥಳೀಯ ಸಂಸ್ಥೆಗಳ ಮೇಲೆ ಹಣಕಾಸಿನ ಹೊಣೆಗಾರಿಕೆ ಹೇರಿರುವ ಅಂಶವನ್ನು ಮರುಪರಿಶೀಲಿಸಿ, ಯೋಜನೆಗೆ ಅಗತ್ಯ ಪೂರ್ತಿ ಅನುದಾನವನ್ನು ರಾಜ್ಯ ಸರ್ಕಾರವೇ ಒದಗಿಸಬೇಕು. ಯುವಜನರ ಸಬಲೀಕರಣದ ದೃಷ್ಟಿಯಿಂದ ಇಂತಹ ಯೋಜನೆಗಳು ಅಗತ್ಯ. ಯೋಜನೆಯ ಉದ್ದೇಶಕ್ಕೆ ಯಾವುದೇ ವಿರೋಧವಿಲ್ಲ. ಆದರೆ, ಯೋಜನೆಯ ನೀತಿ, ರೂಪುರೇಷೆ, ವ್ಯಾಪ್ತಿ ಹಾಗೂ ಅನುಷ್ಠಾನ ಹಾಗೂ ಅದರ ಹಣಕಾಸಿನ ಹೊಣೆಯನ್ನು ರಾಜ್ಯ ಸರ್ಕಾರವೇ ವಹಿಸಬೇಕು ಎಂಬುದು ನನ್ನ ನ್ಯಾಯಸಮ್ಮತ ನಿಲುವು ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ವಿವಿಧ ಮಹಾನಗರ ಪಾಲಿಕೆಗಳು ಈಗಾಗಲೇ ಹಲವು ಮೂಲಭೂತ ನಾಗರಿಕ ಸೇವೆಗಳ ಜವಾಬ್ದಾರಿ ನಿರ್ವಹಿಸುತ್ತಿವೆ. ಕುಡಿಯುವ ನೀರು ಪೂರೈಕೆ, ರಸ್ತೆ ನಿರ್ಮಾಣ ಮತ್ತು ದುರಸ್ತಿ, ಒಳಚರಂಡಿ ವ್ಯವಸ್ಥೆ, ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ, ಬೀದಿದೀಪ, ಸಾರ್ವಜನಿಕ ಆರೋಗ್ಯ, ಉದ್ಯಾನವನಗಳ ನಿರ್ವಹಣೆ ಸೇರಿದಂತೆ ಅನೇಕ ಸೇವೆಗಳಿಗೆ ಪ್ರತಿ ವರ್ಷ ದೊಡ್ಡ ಪ್ರಮಾಣದ ಹಣಕಾಸು ಅಗತ್ಯವಿದೆ. ಇದರ ಜತೆಗೆ ಸಿಬ್ಬಂದಿ ವೇತನ, ನಿವೃತ್ತಿ ಸೌಲಭ್ಯ, ನಿರ್ವಹಣಾ ವೆಚ್ಚ, ವಿದ್ಯುತ್ ಬಿಲ್, ವಾಹನ ನಿರ್ವಹಣೆ ಹಾಗೂ ವಿವಿಧ ಮೂಲಸೌಕರ್ಯ ಕಾಮಗಾರಿಗಳ ವೆಚ್ಚವನ್ನೂ ಪಾಲಿಕೆಯೇ ನಿರ್ವಹಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯ ಸೀಮಿತ ಸ್ವಂತ ಆದಾಯವನ್ನು ಹೊಸ ರಾಜ್ಯಮಟ್ಟದ ಯೋಜನೆಗೆ ಬಳಸುವಂತೆ ಮಾಡಿದರೆ ಆರ್ಥಿಕ ಸಂಕಷ್ಟ ಉಂಟಾಗುತ್ತದೆ ಎಂದು ಅಂಚಟಗೇರಿ ಎಚ್ಚರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಯೋಜನೆಯ ಹಣಕಾಸಿನ ಮಾದರಿಯನ್ನು ಮರುಪರಿಶೀಲಿಸಬೇಕು. ಅಗತ್ಯವಿದ್ದಲ್ಲಿ ಈಗಿರುವ ಸರ್ಕಾರಿ ಆದೇಶಕ್ಕೆ ತಿದ್ದುಪಡಿ ಅಥವಾ ಸ್ಪಷ್ಟೀಕರಣ ನೀಡಬೇಕು ಎಂದಿರುವ ಅವರು, “ಭಾರತ್ ಜೋಡೋ ಯುವ ಸಂಘಗಳ ಯೋಜನೆಗೆ ಪಾಲಿಕೆಯ ಸ್ವಂತ ನಿಧಿ ಬಳಸುವ ವಿಚಾರವನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯ ಮುಂದೆ ಮಂಡಿಸಿ ಸಮಗ್ರವಾಗಿ ಚರ್ಚಿಸಬೇಕು ಎಂದು ಈರೇಶ ಅಂಚಟಗೇರಿ ಆಗ್ರಹಿಸಿದ್ದಾರೆ.