ದೇಶದಲ್ಲಿ ನಂದಿ ಸಂತತಿ ನಶಿಸಿ ಹೋಗುತ್ತಿದೆ. ಇದರ ಪರಿಣಾಮ ದೇಶದ ಒಂದರ ಮೂರಾಂಶ ಜನರಲ್ಲಿ ಬಿಪಿ, ಶುಗರ್ ಕಾಣುತ್ತಿದ್ದೇವೆ. ಆದ್ದರಿಂದ ಪ್ರತಿಯೊಬ್ಬ ರೈತರು ಜೋಡೆತ್ತಿನ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ದೇಶದಲ್ಲಿ ನಂದಿ ಸಂತತಿ ನಶಿಸಿ ಹೋಗುತ್ತಿದೆ. ಇದರ ಪರಿಣಾಮ ದೇಶದ ಒಂದರ ಮೂರಾಂಶ ಜನರಲ್ಲಿ ಬಿಪಿ, ಶುಗರ್ ಕಾಣುತ್ತಿದ್ದೇವೆ. ಆದ್ದರಿಂದ ಪ್ರತಿಯೊಬ್ಬ ರೈತರು ಜೋಡೆತ್ತಿನ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಗುರುಕೃಪಾ ಶಾಲೆಯ ಹಿಂಭಾಗದಲ್ಲಿ ಗುರುವಾರ ನಂದಿ ಕೂಗು ಅಭಿಯಾನದಡಿ ನಡೆದ ರೈತರ ಬಸವ ತತ್ವ ಕುರಿತು ವೈಜ್ಞಾನಿಕ ಚಿಂತನೆಗಾಗಿ ಒಂದು ಸಾವಿರ ಎತ್ತಿನ ಬಂಡಿಗಳ ಐತಿಹಾಸಿಕ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಗೋವಾ ಮಹಾರಾಷ್ಟ್ರ ಸೇರಿದಂತೆ ಹಲವು ಕಡೆಗಳಲ್ಲಿ ಜೋಡೆತ್ತಿನ ಕೃಷಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಅದರಂತೆ ಕರ್ನಾಟಕದಲ್ಲಿ ಸರ್ಕಾರ ಜೋಡೆತ್ತಿನ ಕೃಷಿಗೆ ಬರುವ ಬಜೆಟ್‌ನಲ್ಲಿ ಅನುದಾನ ಘೋಷಿಸಬೇಕು. ಸರ್ಕಾರ ಹಲವು ಜನಪ್ರಿಯ ಯೋಜನೆಗಳಿಗೆ ಕೋಟ್ಯಂತರ ರು. ಅನುದಾನ ಖರ್ಚು ಮಾಡುವ ಬದಲಾಗಿ ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ₹11 ಸಾವಿರ ಪ್ರೋತ್ಸಾಹ ಧನ ನೀಡುವ ಮೂಲಕ ಪ್ರೋತ್ಸಾಹಿಸಿ, ನಂದಿ ಸಂತತಿ ಉಳಿಸಬೇಕು ಎಂದರು.

ಜೋಡೆತ್ತು ಕೃಷಿ ಉಳಿಸಿ ಬೆಳೆಸುವುದು. ಸಾವಯವ ಕೃಷಿಯನ್ನು ಪ್ರೋತ್ಸಾಹಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಯಂತ್ರಗಳು, ರಾಸಾಯನಿಕ ಔಷಧಗಳ ಬಳಕೆ ಹೆಚ್ಚಾದಂತೆ ಮಣ್ಣಿನಸತ್ವ ಕಳೆದುಕೊಳ್ಳುತ್ತಿದೆ. ಮಣ್ಣು ಉಳಿಸಲು ಜೋಡೆತ್ತು ಕೃಷಿ ಅಗತ್ಯವಾಗಿದೆ. ಎತ್ತುಗಳಿಂದ ಭೂಮಿ ಉಳುಮೆ ಮಾಡಿದರೆ ಮಣ್ಣು ಮೃದು ಆಗುತ್ತದೆ. ನೀರು ಹೆಚ್ಚು ಹಿಡಿದಿಟ್ಟುಕೊಳ್ಳುತ್ತದೆ. ಅಂತರ್ಜಲ ರಕ್ಷಣೆಯೂ ಆಗುತ್ತದೆ. ಕೃಷಿ ಪದ್ಧತಿ, ಜೀವ ವೈವಿಧ್ಯತೆ, ಹಕ್ಕಿಗಳು, ಪ್ರಾಣಿಗಳು ಹೀಗೆ ಕೃಷಿಗೆ ಪೂರಕವಾದ ಅನೇಕ ಜೀವರಾಶಿಗಳು ಉಳಿಯುತ್ತವೆ. ಭೂಮಿಯಲ್ಲಿ ಶೇ.40 ರಷ್ಟು ಅರಣ್ಯ ಪ್ರದೇಶ ಹೊಂದಿದೆ. ಇನ್ನುಳಿದ ಅರ್ಧಕ್ಕಿಂತ ಹೆಚ್ಚು ಭೂಮಿ ಸಾಗುವಳಿ ಮಾಡಲು ಬಳಸಲಾಗುತ್ತದೆ, ಆದರೆ ಇಂದಿನ ಆಧುನಿಕತೆಯಲ್ಲಿ ಕೃಷಿ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಷಾದಕರ ಸಂಗತಿ ಎಂದರು.

ಕೃಷಿ ಎಂದರೆ ಲಾಭದಾಯಕವಲ್ಲದ ಕಾಯಕ ಎನ್ನುವ ಭಾವನೆ ರೈತರಲ್ಲಿ ಮೂಡಿದೆ. ರಸಗೊಬ್ಬರದಿಂದ ಹೆಚ್ಚಿಗೆ ಬೆಳೆ ಬರುತ್ತದೆ ಎಂಬ ತಪ್ಪು ಕಲ್ಪನೆ ರೈತರಲ್ಲಿ ಮೂಡಿದೆ. ನಾವು ಬಳಸುವ ರಾಸಾಯನಿಕ ಗೊಬ್ಬರದಿಂದ ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದೇವೆ. ಹತ್ತಿಯಿಂದ ತಯಾರಿಸಿದ ಬಟ್ಟಿಯಿಂದ ಚರ್ಮರೋಗ ಬರುತ್ತಿದೆ. ಕಬ್ಬು ತಿಂದ ರಾಜಸ್ಥಾನದ ಒಂಟೆಗಳಲ್ಲಿ ಟೊನ್ ರೋಗ ಕಂಡುಬರುತ್ತಿದೆ ಎಂದರು.

ಹಿಂದೆ ರೈತರು ಹಾಕಿರುವ ತಿಪ್ಪೆ ನೋಡಿ ಹೆಣ್ಣು ಕೊಡುವ ಕಾಲವಿತ್ತು. ಆದರೆ ಈಗ ರೈತರಿಗೆ ಹೆಣ್ಣು ಸಿಗುತ್ತಿಲ್ಲ. ಇದು ದುರದೃಷ್ಟಕರ ಸಂಗತಿ. ಗ್ಯಾಸ್ ಬಂದು ಬೂದಿ ಕಾಣದಂತಾಗಿದೆ. ಎಮ್ಮೆ, ಎತ್ತು, ಆಕಳು ಒಕ್ಕಲುತನ ಮಾಡುವ ರೈತನ ಮುಖ್ಯ ಸಾಧನಗಳಾಗಿವೆ. ಆಧುನಿಕತೆಯಿಂದ ಎಲ್ಲವೂ ಮಾಯವಾಗುತ್ತವೆ. ಸರ್ಕಾರಿ ಗೊಬ್ಬರ ಬಳಕೆಯಿಂದ ಭೂಮಿಯ ಫಲವತ್ತತೆ ಕಳೆದುಕೊಳ್ಳುತ್ತಿದೆ. ರೈತರು ಸಾವಯವ ಗೊಬ್ಬರ ಬಳಸಲು ಮುಂದಾಗಬೇಕು. ಇದರಿಂದ ಮಾತ್ರ ಮಣ್ಣಿನ ಫಲವತ್ತತೆ ಕಾಪಾಡಲು ಸಾಧ್ಯ ಎಂದು ನುಡಿದರು.

ಕೃಷಿ ವಿಜ್ಞಾನಿ ಚಂದ್ರಶೇಖರ ಬಿರಾದಾರ ಮಾತನಾಡಿ, ರೈತ ಸ್ವಾವಲಂಬಿಯಾಗಬೇಕಾದರೆ ನಂದಿ ಸಂಸ್ಕೃತಿ ಉಳಿಯಬೇಕು. ಹಳ್ಳ-ಕೊಳ್ಳ ಬಾವಿಗಳು ಮಾಯವಾಗಿವೆ. ರಾಸಾಯನಿಕ ಕೃಷಿಯಿಂದ ನಂದಿ ಸಂಸ್ಕೃತಿ ಮಾಯವಾಗಿದೆ. ಹಸಿರು ಗ್ರಾಮ ಸ್ವರಾಜ್ಯವಾಗಬೇಕಾದರೆ ಎತ್ತುಗಳ ಸಂತಂತಿ ಉಳಿಸಬೇಕು. ಎತ್ತುಗಳನ್ನು ಸಾಕಿ ನಂದಿ ಸಂತತಿ ಉಳಿಸುವ ಬೆಳೆಸುವ ಕಾರ್ಯವಾಗಬೇಕು ಎಂದರು.

ನಂದಿ ಕೂಗು ಅಭಿಯಾನದ ರೂವಾರಿ ಬಸವರಾಜ ಬಿರಾದಾರ ಮಾತನಾಡಿ, ಕೃಷಿ ಕಾಯಕ‌ ಮಾಡುವ ಸದ್ಭಕ್ತನ ಪಾದವ ತೋರಿ ಬದುಕಿಸಯ್ಯಾ ಎಂದು ವಿಶ್ವಗುರು ಬಸವಣ್ಣನವರು ಹೇಳಿದ ಮಾತಿನಂತೆ ಬಸವ ತತ್ವದ ಮೂಲ ಬೇರುಗಳಾದ ಜೋಡೆತ್ತಿನ ಕೃಷಿಕರು ಉಳಿದರೆ ಮಾತ್ರ ವಿಷಮುಕ್ತ ಆಹಾರ ಉತ್ಪಾದನೆಯಾಗಿ‌ ಮಾನವರು ಆರೋಗ್ಯಯುತವಾಗಿ ಜೀವನ ನಡೆಸಲು ಸಾಧ್ಯ ಎಂಬುದು ಇಂದಿನ ಆಧುನಿಕ ವಿಜ್ಞಾನದಿಂದ ಸ್ಪಷ್ಟವಾಗಿ ತಿಳಿಯುತ್ತಿದೆ. ನಮ್ಮನ್ನು ಆಳುವ ಸರ್ಕಾರಗಳು ನಾಲ್ಕು ಕಾಲಿನ ಬಸವಣ್ಣನ ವಿರುದ್ಧವೇ ಯೋಜನೆಗಳು ರೂಪಿಸುತ್ತಿವೆ. ಇದರಿಂದ ಎತ್ತುಗಳು ಕಸಾಯಿಖಾನೆ ಸೇರುವಂತಾಗಿದೆ ಎಂದರು.

ಧಾರವಾಡದ ವಿಶ್ರಾಂತ ಕುಲಪತಿ ಡಾ.ವಿ.ಐ.ಬೆಣಗಿ ರೈತರ ಬಸವ ತತ್ವ ಪುನರುತ್ಥಾನದ ಕುರಿತು ವೈಜ್ಞಾನಿಕ ವಿಚಾರ ಮಂಡನೆ ಮಾಡಿದರು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಎಪಿಎಂಸಿಯಿಂದ ಸಮಾವೇಶವ ಜರುಗುವ ವೇದಿಕೆಯವರೆಗೂ ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ 1200ಕ್ಕೂ ಹೆಚ್ಚಿನ ಎತ್ತಿನ ಬಂಡಿಗಳ ಮೆರವಣಿಗೆ ಜರುಗಿತು.

ವೇದಿಕೆಯಲ್ಲಿ ಮನಗೂಳಿಯ ಅಭಿನವ ಸಂಗನಬಸವ ಸ್ವಾಮೀಜಿ, ನಂದಿ ಕೂಗು ಅಭಿಯಾನದ ಮಾರ್ಗದರ್ಶಕ ಸೋಮಲಿಂಗ ಅಜ್ಜನವರು, ಕೆಸರಟ್ಟಿಯ ಸೋಮಲಿಂಗ ಸ್ವಾಮೀಜಿ, ಬುರಾಣಪುರದ ಮಾತಾಜಿ ಸೇರಿದಂತೆ ಇತರರು ಇದ್ದರು. ಅಶೋಕ ಹಾರಿವಾಳ ಸ್ವಾಗತಿಸಿದರು. ಅಶೋಕ ಹಂಚಲಿ ನಿರೂಪಿಸಿ, ವಂದಿಸಿದರು.

ಎತ್ತುಗಳಿಂದ ಬುಲ್ ಪವರ್ ತಯಾರಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ದಿನಕ್ಕೆ ಒಂದು ನೂರು ಕರು ಹಾಕಿಸಿ ಪ್ರತಿ ಕರುವನ್ನು ಸಾವಿರಕ್ಕೆ ನೀಡಬೇಕು ಎಂಬ ಸಂಕಲ್ಪ ಮಾಡಿರುವೆ. ರೈತರು ಎತ್ತುಗಳನ್ನು ಸಾಕಬೇಕು. ಎತ್ತುಗಳು ಇದ್ದರೆ ಒಕ್ಕಲುತನ ಎನ್ನುವುದನ್ನು ಅರಿತುಕೊಳ್ಳಬೇಕು. ಎತ್ತಗಳು ನಿಮ್ಮನ್ನು ಹಾಳು ಮಾಡುವುದಿಲ್ಲ. ಸಗಣಿಯಿಂದ ವಿಭೂತಿ ಸೇರಿದಂತೆ ಹಲವಾರು ಬಗೆಯ ಸಾವಯವ ವಸ್ತುಗಳನ್ನು ತಯಾರಿಸಬಹುದು. ಅವುಗಳನ್ನು ತಯಾರಿಸಲು ನಮ್ಮಲ್ಲಿ ತರಬೇತಿ ನೀಡಲಾಗುತ್ತದೆ. ಆಸಕ್ತರು ತರಬೇತಿ ಪಡೆಯಬಹುದು.

ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕನ್ಹೇರಿ ಮಠ

ನಂದಿಯನ್ನು ಬಿಟ್ಟು ಹೋದರೆ ಭವಿಷ್ಯವಿಲ್ಲ. ನಂದಿ ಸಂತತಿ ನಾಶವಾಗಿ ತಿನ್ನುವ ಅನ್ನ ವಿಷವಾಗುವ ಮುಂಚೆ ನಾವೆಲ್ಲರೂ ಒಗ್ಗೂಡಿ ಪರಿಹಾರ ಕಂಡುಕೊಳ್ಳುವ ಅವಶ್ಯಕತೆಯಿದೆ. ನಂದಿ ಕೃಷಿಕರಿಗೆ ಪೂರಕವಾದ ಕಾನೂನು ಹಾಗೂ ಯೋಜನೆಗಳನ್ನು ಜಾರಿಗೆ ತಂದು ಗ್ರಾಮಗಳನ್ನು ಸ್ವಾವಲಂಬಿ ಹಾಗೂ ಆರೋಗ್ಯಯುತವಾಗಿ ಇಡುವುದು ಪ್ರತಿಯೊಬ್ಬರ ಜವಾಬ್ದಾರಿ. ಬಸವ ತತ್ವದ ಮೂಲ ಬೇರುಗಳಾದ ಜೋಡೆತ್ತಿನ ಕೃಷಿಕರು ಉಳಿದರೆ ಮಾತ್ರ ಇನ್ನು ಮುಂದೆ ನಮಗೆ ಪೌಷ್ಟಿಕ ಹಾಗೂ ವಿಷಮುಕ್ತ ಆಹಾರ ದೊರೆಯಲು ಸಾಧ್ಯವಿದೆ. ಈ ಹಿನ್ನೆಲೆ ಬಸವ ಸಂತಂತಿ ಉಳಿಸುವಲ್ಲಿ ಪ್ರತಿಯೊಬ್ಬರು ಸಂಕಲ್ಪ ಮಾಡಬೇಕಾಗಿದೆ.

ಬಸವರಾಜ ಬಿರಾದಾರ, ನಂದಿ ಕೂಗು ಅಭಿಯಾನದ ರೂವಾರಿ