ಕರ್ನಾಟಕ ಎಂದರೆ ಕೇವಲ ಬೆಂಗಳೂರು-ಮೈಸೂರು ಅಲ್ಲ. ಉತ್ತರ ಕರ್ನಾಟಕ ಭಾಗವೂ ಇದ್ದು, ರಾಜ್ಯ ಸರ್ಕಾರದಿಂದ ಮಲತಾಯಿ ಧೋರಣೆ ಮುಂದುವರಿದರೆ ಪ್ರತ್ಯೇಕ ರಾಜ್ಯದ ಹೋರಾಟ ಶುರು ಮಾಡಬೇಕಾಗುತ್ತದೆ.

ಧಾರವಾಡ:

ಕರ್ನಾಟಕ ಎಂದರೆ ಕೇವಲ ಬೆಂಗಳೂರು-ಮೈಸೂರು ಅಲ್ಲ. ಉತ್ತರ ಕರ್ನಾಟಕ ಭಾಗವೂ ಇದ್ದು, ರಾಜ್ಯ ಸರ್ಕಾರದಿಂದ ಮಲತಾಯಿ ಧೋರಣೆ ಮುಂದುವರಿದರೆ ಪ್ರತ್ಯೇಕ ರಾಜ್ಯದ ಹೋರಾಟ ಶುರು ಮಾಡಬೇಕಾಗುತ್ತದೆ. ಆದ್ದರಿಂದ ಉತ್ತರ ಕರ್ನಾಟಕದಲ್ಲಿಯೇ ಎರಡನೇ ರಾಜಧಾನಿ ಮಾಡುವುದು ಮತ್ತು ಈ ಭಾಗದಲ್ಲಿಯೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಬೇಕು!

ಉತ್ತರ ಕರ್ನಾಟಕ ಸಂಘ-ಸಂಸ್ಥೆಗಳ ಮಹಾ ಸಂಸ್ಥೆ ಒಕ್ಕೊರಲ ನಿರ್ಣಯಗಳಿವು. ಬುಧವಾರ ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆದ ಉಕ ಭಾಗದ ಸಂಘ-ಸಂಸ್ಥೆಗಳ ದುಂಡು ಮೇಜಿನ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ಉತ್ತರ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬಾರದು. ಈ ಎರಡೂ ಕಾರ್ಯಗಳನ್ನು ಶೀಘ್ರವೇ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಉಕ ಸಂಘ-ಸಂಸ್ಥೆಗಳ ಮಹಾ ಸಂಸ್ಥೆ ಅಧ್ಯಕ್ಷ ಶಿವಕುಮಾರ ಮೇಟಿ, ಈ ಭಾಗದ ಅಭಿವೃದ್ಧಿಗೆ ನಮ್ಮ ಸಂಘ ಕೆಲಸ ಮಾಡುತ್ತಿದೆ. ಈ ಭಾಗದ ನೆಲ, ಜಲ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಹತ್ತಾರು ಕೆಲಸಗಳು ಆಗಬೇಕಿದ್ದು ಸರ್ಕಾರ ಗಮನ ಹರಿಸಬೇಕು ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಪಾಗೋಜಿ ಮಾತನಾಡಿ, ಪ್ರಾದೇಶಿಕ ಅಸಮತೋಲನ ನಿವಾರಣೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಅದಕ್ಕಾಗಿ ಉಕ ಭಾಗದ ಸಂಘ-ಸಂಸ್ಥೆಗಳು ಸರ್ಕಾರದ ಮೇಲೆ ಒತ್ತಡ ಹೇರುವುದು ಅನಿವಾರ್ಯ ಎಂದು ಹೇಳಿದರು.

ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಮಂಜುನಾಥ ಹಗೇದಾರ, ಆರ್ಥಿಕತೆ ಮಾತ್ರವಲ್ಲ ಮನರಂಜನಾ ಕ್ಷೇತ್ರದಲ್ಲಿ ಕೂಡ ತಾರತಮ್ಯವಾಗುತ್ತಲಿದೆ. ಹೀಗಾಗಿ ಸರ್ಕಾರ ಇದನ್ನು ಸರಿಪಡಿಸಬೇಕು ಎಂದರು.

ಉಕ ಹೋರಾಟ ಸಮಿತಿ ಕಾರ್ಯದರ್ಶಿ ನಾಗೇಶ ಗೋಳಶೆಟ್ಟಿ ಮಾತನಾಡಿ, ಸಾಕಷ್ಟು ವರ್ಷಗಳಿಂದ ಹೋರಾಟ ಮಾಡಿದರೂ ಉತ್ತರ ಕರ್ನಾಟಕದ ಬಗ್ಗೆ ನಿರ್ಲಕ್ಷ್ಯ ಮುಂದುವರಿದಿದೆ. ಸರ್ಕಾರ ಎಚ್ಚೆತ್ತುಕೊಳ್ಳದೆ ಹೋದರೆ ಪ್ರತ್ಯೇಕ ರಾಜ್ಯದ ಕೂಗು ಬಲವಾಗುವುದು ನಿಶ್ಚಿತ ಎಂದು ಎಚ್ಚರಿಕೆ ನೀಡಿದರು.

ಉಕ ಸಂಘ-ಸಂಸ್ಥೆಗಳ ಮಹಾ ಸಂಸ್ಥೆ ಉಪಾಧ್ಯಕ್ಷ ಬಸವರಾಜ ಬೀಳೂರು ಮಾತನಾಡಿ, ಕೇವಲ ಬೆಂಗಳೂರು, ಮೈಸೂರು ಕೇಂದ್ರಿತ ಅಭಿವೃದ್ಧಿ ನಾಡಿನ ಅಖಂಡತೆಗೆ ಧಕ್ಕೆ ತರುತ್ತದೆ. ಹೀಗಾಗಿ ಸರ್ಕಾರ ಕೂಡಲೇ ಉಕ ಅಭಿವೃದ್ಧಿಗೆ ಪ್ರತ್ಯೇಕ ಪ್ಯಾಕೇಜ್ ಘೋಷಿಸಬೇಕೆಂದು ಒತ್ತಾಯಿಸಿದರು.

ಪಕ್ಷಿ ಮಿತ್ರ ಸಂಘಟನೆಯ ಪ್ರಕಾಶ ಗೌಡರ, ಕಾಳಿ ಹೋರಾಟ ಸಮಿತಿ ಶ್ರೀಶೈಲಗೌಡ ಕಮತರ, ಹಿರಿಯ ಮಲ್ಲಕಂಭ ಪಟು ಸಿದ್ಧಾರೂಢ ಹೂಗಾರ, ಸಂಸ್ಥೆ ಪದಾಧಿಕಾರಿಗಳಾದ ಬಸಯ್ಯ ನಂದಿಕೋಲ, ಶಾಂತೇಶ ಮಠ, ದೇವರಾಜ್ ಕವಳಿಕಾಯಿ ಸೇರಿದಂತೆ ಇತರರು ಇದ್ದರು.ಉತ್ತರ ಕರ್ನಾಟಕ ಮಲತಾಯಿ ಧೋರಣೆ ಕೇವಲ ಅಭಿವೃದ್ಧಿಗೆ ಅಷ್ಟೇ ಅಲ್ಲ, ಸಾಂಸ್ಕೃತಿಕ ಕ್ಷೇತ್ರದಲ್ಲೂ ಮುಂದುವರಿದಿದೆ. ಇದು ಕೊನೆಗೊಳ್ಳಬೇಕಾದರೆ ಈ ಭಾಗದ ಜನರು ಸರ್ಕಾರದ ಕಿವಿ ಹಿಂಡಬೇಕು. ಈ ಭಾಗದ ರಾಜಕಾರಣಿಗಳು ತಮ್ಮ ಬದ್ಧತೆ ಪ್ರದರ್ಶಿಸಬೇಕು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಆಗ್ರಹಿಸಿದರು.