ಸಾರಾಂಶ
ಜಾನಪದ ಕಲಾವಿದರಿಗೆ ಮೊದಲು 55 ವರ್ಷಕ್ಕೆ ಮಾಶಾಸನ ನೀಡುತ್ತಿದ್ದರು. ಈಗ 75 ವರ್ಷ ಆಗಬೇಕು ಎಂಬ ನಿಯಮ ಮಾಡಿದ್ದಾರೆ. ಅಷ್ಟು ವರ್ಷ ಬದುಕಿ ಇರುವವರು ಯಾರು. ನಾವು ಸದೃಢವಾಗಿ ಇರುವಾಗಲೆ, ಸರ್ಕಾರ ನಮ್ಮ ನೆರವಿಗೆ ಬರಬೇಕು. ಬದುಕು ಕಟ್ಟಿಕೊಳ್ಳಲು ಇಂದಿನ ಕಾಲದ ಅಗತ್ಯಕ್ಕೆ ತಕ್ಕಂತೆ ಹಣಕಾಸಿನ ಸಹಾಯ ಹಸ್ತ ನೀಡಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಗುಡ್ಡಪ್ಪ ಜೋಗಿ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಆನವಟ್ಟಿ
ಜಾನಪದ ಕಲಾವಿದರಿಗೆ ಮೊದಲು 55 ವರ್ಷಕ್ಕೆ ಮಾಶಾಸನ ನೀಡುತ್ತಿದ್ದರು. ಈಗ 75 ವರ್ಷ ಆಗಬೇಕು ಎಂಬ ನಿಯಮ ಮಾಡಿದ್ದಾರೆ. ಅಷ್ಟು ವರ್ಷ ಬದುಕಿ ಇರುವವರು ಯಾರು. ನಾವು ಸದೃಢವಾಗಿ ಇರುವಾಗಲೆ, ಸರ್ಕಾರ ನಮ್ಮ ನೆರವಿಗೆ ಬರಬೇಕು. ಬದುಕು ಕಟ್ಟಿಕೊಳ್ಳಲು ಇಂದಿನ ಕಾಲದ ಅಗತ್ಯಕ್ಕೆ ತಕ್ಕಂತೆ ಹಣಕಾಸಿನ ಸಹಾಯ ಹಸ್ತ ನೀಡಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಗುಡ್ಡಪ್ಪ ಜೋಗಿ ಮನವಿ ಮಾಡಿದರು.ಶುಕ್ರವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿದ್ದ ವಿಶ್ವ ಜಾನಪದ ದಿನಾಚರಣೆ ಪ್ರಯಕ್ತ ಜಾನಪದ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹುಟ್ಟು-ಸಾವಿನ ಮಧ್ಯ ಬರುವ ಬದುಕಿನ ಸನ್ನಿವೇಷಗಳನ್ನು ಜಾನಪದರು ತಮ್ಮ ಪದಗಳ ಮೂಲಕ ಭಾವನೆಗಳನ್ನು ಕಟ್ಟಿಕೊಟ್ಟಿದ್ದಾರೆ. ಅಂತಹ ಜಾನಪದ ಸಾಹಿತ್ಯ, ಸಿನಿಮಾ ಜನಪ್ರಿಯತೆಯಿಂದ ಮರೆಯಾಗಬಾರದು. ಇಂದಿನ ಯುವ ಪೀಳಿಗೆ ಜಾನಪದ ಲೋಕಕ್ಕೆ ಮರಳಿ ಬರಬೇಕು ಎಂದರು.ಸಿನಿಮಾ ನಟ ನಾಗೇಶ್ವರ್ ವಿಜಾಪುರ್ ಮಾತನಾಡಿ, ಜಗತ್ತಿನ ಜಾನಪದ ಸಾಹಿತ್ಯ ಸಂಗ್ರಹ ಕರ್ನಾಟಕದಲ್ಲೇ ಹೆಚ್ಚು ಇರುವುದು. ನೀತಿ ಕಥೆಗಳು, ಬುದ್ದಿ ಚುರುಕುಗೊಳಿಸುವ ಒಗಟುಗಳು, ಗಾದೆಗಳು ಇನ್ನೂ ಅನೇಕ ವಿಧಗಳನ್ನು ಒಳಗೊಂಡ ಜಾನಪದ ಸಾಹಿತ್ಯ ಕಡೆಗಣನೆಗೆ ಒಳಗಾಗದೆ ಯುವ ಪೀಳಿಗೆ ಬೆಳಸುವ ಕಡೆ ಗಮನ ನೀಡಬೇಕು. ಜಾನಪದ ಕಲಾವಿದರಿಗೆ ಸರ್ಕಾರ ಹೆಚ್ಚಿನ ನೆರವು ನೀಡಬೇಕು ಎಂದರು.
ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ಶಂಕರ್ ಶೇಟ್ ಮಾತನಾಡಿ, ಪದವಿ ಹಂತದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಮೊಬೈಲ್ ಉಜ್ಜುವುದನ್ನು ಬಿಟ್ಟು, ಜಾನಪದ ಸಾಹಿತ್ಯದ ಪುಸ್ತಕಗಳ ಅಧ್ಯಯನ ಮಾಡಿ, ನಮ್ಮ ಸಂಸ್ಕೃತಿ, ಸಂಸ್ಕಾರ ಆಚಾರ-ವಿಚಾರ ಅರ್ಥವಾಗುವ ಜೊತೆಗೆ ಮನಸ್ಸು ಪ್ರಶಾಂತವಾಗುತ್ತದೆ. ವಿದ್ಯಾರ್ಥಿಗಳು ಕಾಲೇಜು ಸಭೆ, ಸಮಾರಂಭಗಳಲ್ಲಿ ಜಾನಪದ ಸಾಹಿತ್ಯದ ಗೀತೆ, ನಾಟಕ, ಲಾವಣಿಗಳು, ಜಾನಪದ ನೃತ್ಯಗಳನ್ನು ಮಾಡುವ ಮೂಲಕ ಜಾನಪದ ಸಾಹಿತ್ಯವನ್ನು ಉಳಿಸಿ, ಬೆಳಸಬೇಕು ಎಂದರು.ಕಾಲೇಜು ವಿದ್ಯಾರ್ಥಿಗಳು ವಿವಿಧ ಜಾನಪದ ಗೀತೆಗಳನ್ನು ಹಾಡಿ, ನೃತ್ಯ ಮಾಡಿದರು. ರಾಜ್ಯೋತ್ಸವ ಪ್ರಶಸ್ತಿ, ಎಚ್.ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಕೆ. ಗುಡ್ಡಪ್ಪ ಜೋಗಿ ಹಾಗೂ ಸಿನಿಮಾ ನಟ ನಾಗೇಶ್ವರ್ ವಿಜಾಪುರ್ ಅವರನ್ನು ಸನ್ಮಾನಿಸಲಾಯಿತು.
ಸಿನಿಮಾ ಹಾಗೂ ಧಾರವಾಹಿ ನಟ ಡಾ. ನಾಗೇಶ್ವರ್ ವಿಜಾಪುರ್, ಸಮಾಜ ಸೇವಕ ಕಾರ್ತಿಕ್ ಸಾಹುಕಾರ್, ಪ್ರಾಂಶುಪಾಲ ಆರ್.ಸಿ ಭೀಮಪ್ಪ ಜಾನಪದ ಸಾಹಿತ್ಯ ಬಗೆಗೆ ಮಾತನಾಡಿದರು. ಉಪನ್ಯಾಸಕ ಶ್ರೀಕಾಂತ್, ರಾಘವೇಂದ್ರ ನಾಯಕ್ ಇದ್ದರು.