ಸಾರಾಂಶ
ಭರಮಸಾಗರ ಸರ್ಕಾರಿ ಪದವಿ ಕಾಲೇಜಿನ ಸಹಯೋಗದಲ್ಲಿ ದಾವಣಗೆರೆ ವಿವಿ ಮಟ್ಟದ ಅಂತರ ಕಾಲೇಜು ಗುಡ್ಡಗಾಡು ಓಟ ಸ್ಪರ್ಧೆಗಳು ಇಂದು ಭರಮಸಾಗರದಲ್ಲಿ ನಡೆದವು. ವಿಜೇತರಿಗೆ ಶಾಸಕ ಎಂ.ಚಂದ್ರಪ್ಪ ಬಹುಮಾನ ವಿತರಿಸಿದರು. ಕಾಲೇಜು ಪ್ರಾಚಾರ್ಯೆ ಡಾ.ಎಸ್.ಶಶಿಕಲಾ ಭಾಗಿಯಾಗಿದ್ದರು.
ಕನ್ನಡಪ್ರಭ ವಾರ್ತೆ ಸಿರಿಗೆರೆ
ಮಕ್ಕಳು ಸದೃಢ ಮತ್ತು ಆರೋಗ್ಯದಿಂದ ಇರಬೇಕಾದರೆ ಸರ್ಕಾರ ಕ್ರೀಡೆಗೆ ಹೆಚ್ಚಿನ ಹಣ ಖರ್ಚು ಮಾಡಬೇಕೆಂದು ಶಾಸಕ ಡಾ.ಎಂ.ಚಂದ್ರಪ್ಪ ಮನವಿ ಮಾಡಿದರು.ಭರಮಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ವತಿಯಿಂದ ನಡೆದ ಅಂತರ ಕಾಲೇಜುಗಳ ಪುರಷರ ಮತ್ತು ಮಹಿಳೆಯರ ಗುಡ್ಡಗಾಡು ಓಟದ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
10 ಕಿಮೀ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿರುವುದು ಬಹಳ ಸಂತೋಷವಾಗಿದೆ. ಮೊಳಕಾಲ್ಮುರು ತಾಲೂಕು ಅತಿ ಹೆಚ್ಚು ಗುಡ್ಡಗಾಡಿನಿಂದ ಕೂಡಿದೆ. ಸಿನಿಮಾ ನಟರು ಆಯಾ ರಾಜ್ಯ ಇಲ್ಲವೆ ದೇಶಕ್ಕೆ ಪರಿಚಯವಿರಬಹುದು. ಅದೆ ಒಬ್ಬ ಕ್ರೀಡಾಪಟುವಿಗೆ ವಿಶ್ವದಲ್ಲಿಯೇ ಗೌರವ ಸಿಗುತ್ತದೆ. ಬೇರೆ ಯಾರಿಗೂ ಇಂತಹ ಅವಕಾಶವಿಲ್ಲ. ಐಪಿಎಲ್ ನಲ್ಲಿ ಆರ್‌ಸಿಬಿ ತಂಡ ಟ್ರೋಫಿಯನ್ನು ಗೆದ್ದಿತು. ಆದರೆ ಕರ್ನಾಟಕದವರು ತಂಡದಲ್ಲಿ ಇರಲಿಲ್ಲ ಎನ್ನುವುದಕ್ಕಿಂತ ಗೆಲುವು ಮುಖ್ಯ. ಪಾಠಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತೀರೋ ಕ್ರೀಡೆಗೂ ಅಷ್ಟೆ ಪ್ರಾಮುಖ್ಯತೆ ಕೊಡಬೇಕೆಂದು ವಿದ್ಯಾರ್ಥಿಗಳಿಗೆ ಶಾಸಕ ಡಾ.ಎಂ.ಚಂದ್ರಪ್ಪ ಕರೆ ನೀಡಿದರು.ಹೊಳಲ್ಕೆರೆಯಲ್ಲಿ 12 ಕೋಟಿ ರು.ಖರ್ಚು ಮಾಡಿ ಪ್ರಥಮ ದರ್ಜೆ ಕಾಲೇಜು ಕಟ್ಟಿಸಿದ್ದೇನೆ. 30 ಕೋಟಿ ರು. ಸ್ಟೇಡಿಯಂ ನಿರ್ಮಾಣವಾಗಿದೆ. ನಾಲ್ಕೈದು ಕೋಟಿ ರು.ಗಳಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದೆ. ಮಕ್ಕಳಿಗೆ ಈಜುಕೊಳ ಕೂಡ ನಿರ್ಮಿಸಲಾಗಿದೆ. ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ ಸಾಕಷ್ಟು ಅವಕಾಶಗಳು ಸಿಗುತ್ತದೆ ಎಂದರು.
ಈ ವೇಳೆ ಭರಮಸಾಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಶಶಿಕಲಾ ಎಸ್. ದಾವಣಗೆರೆ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ತಿಪ್ಪೇಸ್ವಾಮಿ ಎಚ್.ಸಿ.ಶಂಕರಪ್ಪ, ಡಾ.ಪ್ರಸನ್ನಕುಮಾರ್ ಡಿಆರ್‌ಡಿಎಸ್ ಪ್ರದೀಪ್, ಎಚ್.ಎಂ.ಮಂಜುನಾಥ, ಕಲ್ಲೇಶ್, ಕೊಟ್ರೇಶ್, ಡಾ.ಹರೀಶ್, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ 25 ಕಾಲೇಜುಗಳಿಂದ ಆಗಮಿಸಿದ್ದ 65 ಪುರುಷ ಸ್ಪರ್ಧಿಗಳು ಹಾಗೂ 35 ಮಹಿಳಾ ಸ್ಪರ್ಧಿಗಳು ಭಾಗವಹಿಸಿದ್ದರು.ಸ್ಪರ್ಧೆ ವಿಜೇತರು:
ಪುರುಷರ ವಿಭಾಗದಲ್ಲಿ ಚಿತ್ರದುರ್ಗದ ಡಾನ್ ಬಾಸ್ಕೋ ಕಾಲೇಜಿನ ಜಸ್ಟ್ ಐಸಾಯಿಲ್ ಪ್ರಥಮ, ಹರಿಹರದ ಸರ್ಕಾರಿ ಪದವಿ ಕಾಲೇಜಿನ ನವೀನ್ ನಾಯಕ್ ದ್ವಿತೀಯ ಹಾಗೂ ಮೊಳಕಾಲ್ಮೂರು ಸರ್ಕಾರಿ ಪದವಿ ಕಾಲೇಜಿನ ಜಿ.ಸಂತೋಷ್ ತೃತೀಯ ಸ್ಥಾನ ಗಳಿಸಿದರು. ಮಹಿಳೆಯರ ವಿಭಾಗದಲ್ಲಿ ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜಿನ ಟಿ.ಐಸಿರಿ ಪ್ರಥಮ, ದಾವಣಗೆರರೆ ಎವಿಕೆ ಕಾಲೇಜಜಿನ ದೀಪ ದ್ವಿತೀಯ ಹಾಗೂ ಮೊಳಕಾಲ್ಮೂರು ಸರ್ಕಾರಿ ಪದವಿ ಕಾಲೇಜಿನ ಡಿ. ಚಂದ್ರಕಲಾ ತೃತೀಯ ಸ್ಥಾನ ಗಳಿಸಿದರು.