ಮಾಗಡಿ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಹಾಗೂ ಸರ್ಕಾರಿ ಶಾಲೆಗಳನ್ನು ಉಳಿಸಲು ಸರ್ಕಾರ ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಬಿಜೆಪಿ ಒಬಿಸಿ ರಾಜ್ಯ ಉಪಾಧ್ಯಕ್ಷ ಎ.ಎಚ್.ಬಸವರಾಜು ಹೇಳಿದರು

ಮಾಗಡಿ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಹಾಗೂ ಸರ್ಕಾರಿ ಶಾಲೆಗಳನ್ನು ಉಳಿಸಲು ಸರ್ಕಾರ ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಬಿಜೆಪಿ ಒಬಿಸಿ ರಾಜ್ಯ ಉಪಾಧ್ಯಕ್ಷ ಎ.ಎಚ್.ಬಸವರಾಜು ಹೇಳಿದರು.

ಪಟ್ಟಣದ ಹೊಂಬಾಳಮ್ಮನ ಪೇಟೆ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿ ವಿತರಿಸಿ ಮಾತನಾಡಿದ ಅವರು, ಹಿಂದಿನ ದಿನಗಳಲ್ಲಿ ಬಹುತೇಕ ಎಲ್ಲರೂ ಸರ್ಕಾರಿ ಶಾಲೆಗಳಲ್ಲಿಯೇ ಓದುತ್ತಿದ್ದರು. ಇಂದಿನ ವಿವಿಧ ಉನ್ನತ ಹುದ್ದೆಗಳಲ್ಲಿರುವವರು ಬಹುತೇಕರು ಸರ್ಕಾರಿ ಶಾಲೆಗಳಲ್ಲಿ ಓದಿದವರೇ ಆಗಿದ್ದಾರೆ. ಗುಣಮಟ್ಟದ ಶಿಕ್ಷಣಕ್ಕೆ ಹಿಂದೆ ಹೊತ್ತು ನೀಡುತ್ತಿದ್ದರು. ಈಗ ಸರ್ಕಾರಿ ಶಾಲೆಯಲ್ಲಿ ಸರ್ಕಾರ ಎಲ್ಲಾ ರೀತಿಯ ಸೌಲಭ್ಯಗಳನ್ನು ಕೊಡುತ್ತಿದ್ದರೂ, ಶಿಕ್ಷಕರ ಕೊರತೆ, ಮಕ್ಕಳಿಗೆ ಮೂಲ ಸೌಲಭ್ಯಗಳ ಕೊರತೆಯಿಂದ ಖಾಸಗಿ ಶಾಲೆಗಳತ್ತ ಪೋಷಕರು ಮುಖ ಮಾಡುತ್ತಿರುವುದು ವಿಪರ್ಯಾಸ. ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಹುಟ್ಟೂರಾದ ವೀರಾಪುರ ಗ್ರಾಮದಲ್ಲಿ ಮಕ್ಕಳ ದಾಖಲಾತಿ ಇಲ್ಲ ಎಂದು ಸರ್ಕಾರಿ ಶಾಲೆ ಮುಚ್ಚುವ ಹಂತ ತಲುಪಿದೆ. ತೀವ್ರ ವಿರೋಧದ ನಡುವೆ ಶಾಲೆಯನ್ನು ಉಳಿಸಿಕೊಂಡಿದ್ದು,ಸರ್ಕಾರ ಮಕ್ಕಳ ದಾಖಲಾತಿ ಹೆಚ್ಚಿಸುವತ್ತ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ನಂಜುಂಡಪ್ಪ ವರದಿ ಪ್ರಕಾರ ಮಾಗಡಿಗೆ ಹಿಂದುಳಿದ ತಾಲೂಕೆಂಬ ಹಣೆಪಟ್ಟಿ ಇದೆ. ಈಗ ಬಾಲಕೃಷ್ಣ ಸಚಿವರಾಗಿದ್ದು ನಮ್ಮ ಜಿಲ್ಲೆಯವರೇ ಮುಖ್ಯಮಂತ್ರಿಗಳೂ ಆಗಿದ್ದು, ಮಾಗಡಿ ತಾಲೂಕಿಗೆ ಹೆಚ್ಚಿನ ಅನುದಾನ ತಂದು ಹಿಂದುಳಿದ ತಾಲೂಕೆಂಬ ಹಣೆಪಟ್ಟಿ ಅಳಿಸಿ ಹಾಕಬೇಕು. ಹಲವು ಬಾರಿ ಬಾಲಕೃಷ್ಣ ನನಗೆ ಅಧಿಕಾರ ಸಿಕ್ಕರೆ ಉದ್ಯೋಗಾವಕಾಶ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಮಾಡುವುದಾಗಿ ತಿಳಿಸಿದ್ದರು. ಅದೇ ರೀತಿ ಈಗ ಅಭಿವೃದ್ಧಿ ಮಾಡಿ ತಾಲೂಕಿನ ಋಣ ತೀರಿಸುವ ಅವಕಾಶ ಸಿಕ್ಕಿದೆ. ಸದುಪಯೋಗ ಪಡಿಸಿಕೊಳ್ಳಲಿ ಮಾಡಲಿ ಎಂದು ಬಸವರಾಜು ಹೇಳಿದರು.

ನಾಗೇಂದ್ರ ರಾಜೀನಾಮೆ ಕೊಡುವವರೆಗೂ ಹೋರಾಟ ನಿಲ್ಲದು:

ಸಚಿವ ನಾಗೇಂದ್ರ ರಾಜೀನಾಮೆ ಕೊಡುವವರೆಗೂ ಬಿಜೆಪಿ ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಿಸುವುದಿಲ್ಲ. ಕಾಂಗ್ರೆಸ್ ಹೈಕಮಾಂಡ್ ನಾಗೇಂದ್ರರ ಬೆದರಿಕೆಗೆ ಹೆದರಿ ಸಚಿವ ಸ್ಥಾನ ಕೊಟ್ಟಿದ್ದಾರೆ. ಇಲ್ಲದಿದ್ದರೆ ಸರ್ಕಾರ ಪತನವಾಗುತ್ತದೆ ಎಂಬ ಭಯದಿಂದ ವಾಲ್ಮೀಕಿ ನಿಗಮದ ಹಣ ಲೂಟಿ ಮಾಡಿರುವ ಸಚಿವರಿಗೆ ಮತ್ತೆ ಅವಕಾಶ ಕೊಟ್ಟಿರುವುದು ನಾಚಿಗೇಡಿನ ಸಂಗತಿ. ರಾಜೀನಾಮೆ ಕೊಡುವವರೆಗೂ ನಮ್ಮ ಹೋರಾಟ ನಿರಂತರ ಎಂದು ತಿಳಿಸಿದರು.

ಇದೇ ವೇಳೆ ಹೊಂಬಾಳಮ್ಮ ಪೇಟೆ, ಬ್ಯಾಲಕೆರೆ ಜಡೇದೇವರ ಮಠ, ಕೆಂಚನಹಳ್ಳಿ, ಚನ್ನಮ್ಮನ ಪಾಳ್ಯ, ಉಡುವೆಗೆರೆ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಬ್ಯಾಗ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ರಾಘವೇಂದ್ರ, ವೀರಭದ್ರಯ್ಯ, ಶಶಿ, ಮಾರಪ್ಪ, ಭಾಸ್ಕರ್, ಕಿರಣ್, ಮುಖಂಡರಾದ ರಂಗಸ್ವಾಮಿಯ, ಜಯರಾಂ, ಶಂಕರಪ್ಪ, ಗಂಗರೇವಣ್ಣ, ಶಾಲಾ ಮುಖ್ಯ ಶಿಕ್ಷಕರಾದ ಲಿಂಗರಾಜು, ಸಹಶಿಕ್ಷಕರಾದ ಉಮೇಶ್ ಇತರರು ಭಾಗವಹಿಸಿದ್ದರು.

(ಫೋಟೊ ಕ್ಯಾಫ್ಞನ್‌)

ಮಾಗಡಿಯ ಹೊಂಬಾಳಮ್ಮನಪೇಟೆ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ಬಿಜೆಪಿ ಒಬಿಸಿ ರಾಜ್ಯ ಉಪಾಧ್ಯಕ್ಷ ಎ.ಎಚ್.ಬಸವರಾಜು ವಿತರಿಸಿದರು. ಬಿಜೆಪಿ ಮುಖಂಡರಾದ ರಾಘವೇಂದ್ರ, ವೀರಭದ್ರಯ್ಯ, ಶಶಿ, ಮಾರಪ್ಪ, ಭಾಸ್ಕರ್ ಇತರರಿದ್ದರು.