ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ರೈತರ ಬೆಳೆ ಹಾನಿಗೆ ಸೂಕ್ತ ಪರಿಹಾರ ಕೊಡಲು ಸಿದ್ದವಿದ್ದು, ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಶಾಸಕ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಪ್ರಕೃತಿ ವಿಕೋಪದಿಂದಾಗಿ ಹಾನಿಗೊಳಗಾದ ಬೆಳೆ ಸಮೀಕ್ಷೆ ಹಾಗೂ ಪರಿಹಾರ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಧಿಕಾರಿಗಳಾಗಲಿ ಅಥವಾ ನಾವಾಗಲಿ, ನಮ್ಮ ಸರ್ಕಾರವಾಗಲಿ ರೈತರಿಗೆ ಪರಿಹಾರದ ವಿಷಯದಲ್ಲಿ ಯಾವುದೇ ನಿರ್ಲಕ್ಷ ಮಾಡಿಲ್ಲ. ಯಾರು ಎಷ್ಟೇ ಟೀಕೆ ಮಾಡಿದರೂ ನಾವು ತಲೆಕೆಡಿಸಿಕೊಳ್ಳಲ್ಲ. ಬೆಳೆ ಹಾನಿ ವರದಿ ಬಂದನಂತರ ನಿಖರತೆ ಆಧಾರದ ಮೇಲೆ ಎಸ್‌ಆರ್ಎಫ್ ಹಾಗೂ ಎನ್‌ಡಿಆರ್‌ಎಫ್ ಯೋಜನೆಯಡಿ ಪರಿಹಾರ ನೀಡುವುದಾಗಿ ಅವರು ತಿಳಿಸಿದರು.
ನಾನೂ ಒಬ್ಬ ಕೃಷಿಕನಾಗಿ ರೈತರ ಸಮಸ್ಯೆ ಏನೆಂಬುದು ನನಗರಿವಿದೆ. ಈ ನಿಟ್ಟಿನಲ್ಲಿ ವಿಜಯಪುರ ಜಿಲ್ಲಾ ಜಂಟಿ ನಿರ್ದೇಶಕರಿಗೆ ಹಾಗೂ ತಾಲೂಕಾ ಕೃಷಿ ಇಲಾಖೆ ಅಧಿಕಾರಿಗಳಿಗೆ ಮತಕ್ಷೇತ್ರದಲ್ಲಿ ಎಷ್ಟು ಬೆಳೆ ಹಾನಿಯಾಗಿದೆ, ಯಾರೆಲ್ಲ ಬೆಳೆ ವಿಮೆ ಮಾಡಿಸಿದ್ದಾರೆ. ಯಾರು ವಿಮೆ ಮಾಡಿಸಿಲ್ಲ ಅಂತವರನ್ನು ಬೆಳೆ ನಷ್ಟದ ಕುರಿತು ಸಮಗ್ರ ವಾಸ್ತವ ವರದಿ ಸಿದ್ಧಪಡಿಸಿ ರೈತರಿಗೆ ನ್ಯಾಯ ಕೊಡಬೇಕು ಎಂದು ಜಿಲ್ಲಾ ಜಂಟಿ ನಿರ್ದೇಶಕರಿಗೆ ಹಾಗೂ ತಾಲೂಕು ಕೃಷಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ದೀಪಾವಳಿವರಿಗೂ ಮಳೆ ಇದೇ ಎಂಬ ವರದಿ ಬಂದಿದೆ. ಹೀಗಾಗಿ, ಮಳೆ ವಾತಾವರಣ ತಿಳಿದು ಸಮೀಕ್ಷೆ ಕೈಗೊಳ್ಳಲಿದ್ದಾರೆ. ಕಾರಣ ಯಾವ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದರು.ಶೇ.33ರಷ್ಟು ಬೆಳೆ ನಾಶವಾಗಿದ್ದರೆ ಸಂಪೂರ್ಣ ಹಾನಿಯಾಗಿದೆ ಎಂದು ಘೋಷಿಸಿ ಪರಿಹಾರ ವಿತರಿಸಲಾಗುತ್ತದೆ. ಇದರಲ್ಲಿ ವಿಮೆ ಮಾಡಿಸದೆ ಕೈಬಿಟ್ಟು ರೈತರನ್ನು ಪರಿಗಣಿಸಿ ಅವರ ಹೊಲದಲ್ಲಿ ಸಂಪೂರ್ಣ ಹಾನಿಯಾಗಿದ್ದರೆ ಅಂತಹವರಿಗೂ ಪರಿಹಾರ ವಿತರಿಸಲಾಗುತ್ತಿದೆ. ಈ ಕುರಿತು ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಬೆಳೆ ಸಮೀಕ್ಷೆ ಮಾಡಿದ ರೈತರ ಸಂಪೂರ್ಣ ವರದಿಯ ಪಟ್ಟಿಯನ್ನು ತಯಾರಿಸಿ ನೋಟಿಸ್ ಬೋರ್ಡಿಗೆ ಅಂಟಿಸಲಾಗುತ್ತದೆ. ಅದರಲ್ಲಿ ಹೆಸರು ಇರಲಿಲ್ಲವೆಂದರೆ ತಕ್ಷಣ ತಾಲೂಕು ಕೃಷಿ ಅಧಿಕಾರಿಗಳಿಗೆ ಅಥವಾ ತಹಸೀಲ್ದಾರ್‌ರನ್ನು ಭೇಟಿ ಮಾಡಿ ಹೆಸರು ಸೇರ್ಪಡೆ ಮಾಡಲು ಅವಕಾಶವಿದೆ ಎಂದು ತಿಳಿಸಿದರು.ಈ ವೇಳೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ, ತಹಸೀಲ್ದಾರ್ ಕೀರ್ತಿ ಚಾಲಕ, ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುರೇಶ ಭಾವಿಕಟ್ಟಿ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಢವಳಗಿ ಕೃಷಿ ಕೇಂದ್ರದ ಗೋವಿಂದಗೌಡ ಮೆದಿಕಿನಾಳ ಸೇರಿ ಹಲವರು ಇದ್ದರು.ಕೋಟ್‌ವಿರೋಧ ಪಕ್ಷದವರಿಗೆ ಮಾಡಲು ಕೆಲಸವಿಲ್ಲ. ವಿಶ್ರಾಂತಿ ಪಡೆಯಲೆಂದು ಜನರು ಅವರನ್ನು ಮನೆಯಲ್ಲಿ ಕೂರಿಸಿದ್ದಾರೆ. ಸುಮ್ಮನೆ ಪ್ರಚಾರಕ್ಕಾಗಿ ಹೊಲಗಳಲ್ಲಿ ತಿರುಗಾಡಿ ಪೋಸ್ ಕೊಡುವುದು ಅವರ ಕೆಲಸ. ಹೀಗೆ ಮಾಡಿದರೆ ಜನ ಇವರನ್ನು ನಂಬುತ್ತಾರೆ ಎಂದು ತಿಳಿದಿದ್ದಾರೆ. ಈ ಹಿಂದೆ ಕೋರಿ ಹುಳ ಬಾಧೆಗೆ ವೈಯಕ್ತಿಕ ಸಹಾಯ ಮಾಡುತ್ತೇನೆ ಎಂದು ಇವರು ಬಹಿರಂಗ ಹೇಳಿಕೆ ಕೊಟ್ಟಿದ್ದರು. ಬಳಿಕ ಎಷ್ಟು ರೈತರಿಗೆ ಸಹಾಯ ಮಾಡಿದ್ದಾರೆ ಎಂಬುದು ರೈತರಿಗೆ ಗೊತ್ತಿದೆ. ನಾವೇಕೆ ಟೀಕೆ ಮಾಡೋಣ. ಇದರಿಂದ ರೈತರ ಸಮಸ್ಯೆ ಬಗೆಹರಿಯಲ್ಲ. ಇವರ ರಾಜಕೀಯ ಡೊಂಬರಾಟ ಇನ್ನಷ್ಟು ಜನರಿಗೆ ಗೊತ್ತಾಗಲಿ ಎಂದು ನಾವೇ ಮೌನವಹಿಸಿದ್ದೇವೆ.ಸಿ.ಎಸ್.ನಾಡಗೌಡ(ಅಪ್ಪಾಜಿ), ಶಾಸಕರ