ಹುಬ್ಬಳ್ಳಿ:
ಜನಪದದ ಉಳಿವಿಗಾಗಿ ಪ್ರತಿಯೊಬ್ಬರೂ ಶ್ರಮಿಸುವ ಕಾರ್ಯವಾಗಬೇಕಿದೆ. ಜತೆಗೆ ಸರ್ಕಾರ ಜನಪದವನ್ನು ಶಾಲಾ ಪಠ್ಯದಲ್ಲಿ ಅಳವಡಿಸಬೇಕೆಂದು ಜಾನಪದ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಡಾ. ಹಿ.ಸಿ. ಬೋರಲಿಂಗಯ್ಯ ಹೇಳಿದರು.ನವನಗರ ಚನ್ನಬಸವೇಶ್ವರ ಶಿಕ್ಷಣ ಸಂಸ್ಥೆಯ ಶ್ರೀಸಾಯಿ ಬಿಇಡಿ ಕಾಲೇಜಿನಲ್ಲಿ ಗುರುವಾರ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕ, ಜನಪದರು ಕರ್ನಾಟಕ ಜಾನಪದ ಜಗತ್ತು ಟ್ರಸ್ಟ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಚನ್ನಬಸವೇಶ್ವರ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜನಪದ ಸಾಹಿತಿ ಡಾ. ರಾಮು ಮೂಲಗಿ ರಚಿಸಿದ "ಲಲಿತ ಪ್ರಬಂಧಗಳ ಮಣ್ಣು ಪೂಜೆ " ಕುರಿತ ವಿಚಾರ ಸಂಕಿರಣ ಹಾಗೂ ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ರಚಿಸಿದ "ರಾಮಣ್ಣ ಮಾಸ್ತರ " ಕಿರುಚಿತ್ರ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿಯೇ 184 ಜನಪದ ಕಲೆಗಳಿವೆ. ಮಧ್ಯಪ್ರದೇಶ ಬಿಟ್ಟರೆ ರಾಜ್ಯವೇ ಹೆಚ್ಚಿನ ಜನಪದ ಕಲೆ ಹೊಂದಿದೆ. ಇಂತಹ ಕಲೆಗಳಿಗೆ ಸರ್ಕಾರಗಳು ಅನಾಧಾರ ತೋರಿದ ಪರಿಣಾಮ ಜನಪದ ಗಟ್ಟಿಯಾಗಿಲ್ಲ. ಗಟ್ಟಿ ಮಾಡುವ ಜಾನಪದ ಸಾಹಿತ್ಯ ಪರಿಷತ್‌ನಲ್ಲಿ ಹಣವಿಲ್ಲ. ಪರಿಷತ್‌ನಲ್ಲಿ 1500 ಸಾವಿರ ಗಂಟೆ ಕೇಳುವ ಹಾಡುಗಳಿವೆ. ಆದರೆ, ಅವುಗಳನ್ನು ಇಂದಿನ ಕಾಲಕ್ಕೆ ತಕ್ಕಂತೆ ಪರಿವರ್ತಿಸಲು ನಮ್ಮಲ್ಲಿ ಹಣವಿಲ್ಲ. ಪರಿಷತ್‌ಗೆ ಸರ್ಕಾರ ₹1 ಕೋಟಿ ಅನುದಾನ ನೀಡುತ್ತಿದ್ದು ಅದರಲ್ಲಿ ಸಿಬ್ಬಂದಿಗೆ ವೇತನ ನೀಡಲು ಮಾತ್ರ ಸಾಲುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.ಕನಕದಾಸ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಶಾಂತಣ್ಣ ಕಡಿವಾಳ ಮಾತನಾಡಿ, ಭಾರತವನ್ನು ಹಳ್ಳಿಗಳ ನಾಡು, ಸಂಸ್ಕೃತಿ, ಕಲೆಗಳ ತವರೂರು ಎಂದು ಹೇಳುತ್ತಾರೆ. ಅಂತಹ ಕಲೆ, ಸಂಸ್ಕೃತಿಯನ್ನು ಯುವ ಸಮೂಹ ಉಳಿಸಿ, ಬೆಳೆಸಿಕೊಂಡು ಹೋಗುವ ಅನಿವಾರ್ಯತೆಯಿದೆ ಎಂದರು. ಬಳಿಕ ಮಣ್ಣಿತ್ತಿನ ಅಮಾವಾಸ್ಯೆ ಗುಳ್ಳವ್ವ ಹಬ್ಬಗಳು, ನಾಗರ ಪಂಚಮಿ ಹಾಗೂ ಗಣೇಶ ಚೌತಿ ಹಬ್ಬ, ಮಣ್ಣು ಪೂಜೆಗಳ ಕುರಿತು ಹಾಡುಗಾರಿಕೆ, ಜೋಕುಮಾರ ಹಬ್ಬದ ಕುರಿತು ಉಪನ್ಯಾಸ ನಡೆಯಿತು.
ವ್ಯಾಪಾರಸ್ಥ ಬಸವರಾಜ ಯಕಲಾಸಪೂರ, ಜನಪದ ಸಾಹಿತಿ ಡಾ. ರಾಮು ಮೂಲಗಿ ಪ್ರಾಸ್ತಾವಿಕ ಮಾತನಾಡಿದರು. ರಾಜ್ಯ ಕಾನೂನು ವಿವಿ ಸಿಂಡಿಕೇಟ್ ಸದಸ್ಯ ಡಾ. ಎಚ್.ವಿ. ಬೆಳಗಲಿ, ಚನ್ನಬಸವೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಆರ್.ಎಸ್. ಹೊಸೂರ, ವಿ.ಜಿ. ಪಾಟೀಲ, ಸಾಯಿ ಬಿಇಡಿ ಕಾಲೇಜು ಪ್ರಾಚಾರ್ಯ ಪಿ.ಎಸ್. ಕೆಂಗಾರ, ಬಿ.ಐ. ಈಳಿಗೇರ, ಕೃಷ್ಣಮೂರ್ತಿ ಕುಲಕರ್ಣಿ ಸೇರಿ ಹಲವರಿದ್ದರು.
ಹಿರಿಯರು ಮಕ್ಕಳಿಗೆ ಜನಪದದ ಅರಿವು ಮೂಡಿಸಿ
ಸಮಾರೋಪ ಸಮಾರಂಭದಲ್ಲಿ ರಾಮಣ್ಣ ಮಾಸ್ತರ ಕಿರುಚಿತ್ರ ಬಿಡುಗಡೆ ಮಾಡಿದ ಕುಲಪುರೋಹಿತ ಆಲೂರು ವೆಂಕಟರಾವ ಟ್ರಸ್ಟ್ ಅಧ್ಯಕ್ಷ ರಂಜಾನ್ ದರ್ಗಾ, ಜಗತ್ತಿನಲ್ಲಿರುವ ಎಲ್ಲ ಸಂಗೀತಗಳು ಈ ಜಾನಪದದಿಂದಲೇ ಬಂದಿವೆ. ಇಂದಿನ ಆಧುನಿಕ ಜೀವನ ಶೈಲಿಯಿಂದಾಗಿ ಜನಪದವು ತೆರೆಮರೆಯಿಂದ ಹಿಂದೆ ಸರಿಯುತ್ತಿದೆ. ಇದೇ ರೀತಿ ಮುಂದುವರಿದಲ್ಲಿ ಜನಪದವನ್ನು ಸಂಗ್ರಹಾಲಯಗಳಲ್ಲಿ ನೋಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಹಿರಿಯರು ಮಕ್ಕಳಿಗೆ ಈ ಜನಪದದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ, ಮಾರಣ್ಣ ಮಾಸ್ತರ ಕಿರುಚಿತ್ರದ ಮಾಹಿತಿ ನೀಡಿದರು. ಈ ವೇಳೆ ಎಲ್.ಐ. ಲಕ್ಕಮ್ಮನವರ, ಚನ್ನು ಹೊಸಮನಿ, ಲಕ್ಷ್ಮೀ ಬಡಿಗೇರ, ಪ್ರೇಮಾ ಪೂಜಾರ, ರಾಜೀವಸಿಂಗ ಹಲವಾಯಿ ಇದ್ದರು.