ಗಡಿಗ್ರಾಮ ಕರಿಕೆ ಅಭಿವೃದ್ಧಿಗಾಗಿ ಸಿಎಂಗೆ ಮನವಿ ಸಲ್ಲಿಸಿದ ಗ್ರಾ.ಪಂ.

| Published : Feb 06 2025, 12:21 AM IST

ಗಡಿಗ್ರಾಮ ಕರಿಕೆ ಅಭಿವೃದ್ಧಿಗಾಗಿ ಸಿಎಂಗೆ ಮನವಿ ಸಲ್ಲಿಸಿದ ಗ್ರಾ.ಪಂ.
Share this Article
  • FB
  • TW
  • Linkdin
  • Email

ಸಾರಾಂಶ

ಕರಿಕೆ ವ್ಯಾಪ್ತಿಯ ಪ್ರದೇಶದ ಅಭಿವೃದ್ಧಿಗೆ ಅಗತ್ಯಕ್ರಮ ಕೈಗೊಳ್ಳಬೇಕು ಎಂದು ಕೋರಿ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಮುಖ್ಯಮಂತ್ರಿ ಅವರಿಗೆ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯ ಗಡಿ ಗ್ರಾಮ ಪಂಚಾಯ್ತಿ ಕರಿಕೆ ವ್ಯಾಪ್ತಿಯ ಪ್ರದೇಶದ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೋರಿ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಗ್ರಾ.ಪಂ ಅಧ್ಯಕ್ಷ ಎನ್. ಬಾಲಚಂದ್ರನ್ ನಾಯರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದಾರೆ.

ಇತ್ತೀಚೆಗೆ ಭಾಗಮಂಡಲಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳನ್ನು ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಅವರ ನೇತೃತ್ವದಲ್ಲಿ ಭೇಟಿಯಾದ ಎನ್.ಬಾಲಚಂದ್ರನ್ ನಾಯರ್ ಅವರು ಕರಿಕೆ ಗ್ರಾಮವು ಕರ್ನಾಟಕ- ಕೇರಳ ರಾಜ್ಯಗಳ ಗಡಿಯಲ್ಲಿದ್ದು, ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಕೋರಿದರು.

ಕರಿಕೆ ಗ್ರಾಮ ಜಿಲ್ಲಾ ಕೇಂದ್ರವಾದ ಮಡಿಕೇರಿಯಿಂದ 70ಕಿ.ಮೀ ಮತ್ತು ಹೋಬಳಿ ಕೇಂದ್ರವಾದ ಭಾಗಮಂಡಲದಿಂದ 30 ಕಿ.ಮೀ ದೂರದಲ್ಲಿದೆ. ಸಾರಿಗೆ ಸಂಚಾರ ವ್ಯವಸ್ಥೆಯು ದುಸ್ತರವಾಗಿದೆ. ಗ್ರಾಮದ ಜನಸಂಖ್ಯೆಯ ಶೇಕಡಾ 70 ಭಾಗದಷ್ಟು ಜನರು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. ಶೇಕಡಾ 95 ರಷ್ಟು ಮಂದಿ ಕೃಷಿ ಕೂಲಿ ಕಾರ್ಮಿಕರು ಹಾಗೂ ಅತೀ ಸಣ್ಣ ರೈತರಾಗಿದ್ದಾರೆ.

ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಕರಿಕೆ ಗ್ರಾಮವನ್ನು ಪರಿಗಣಿಸಿದರೆ ಗ್ರಾಮವು ಹಲವು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗುತ್ತದೆ. ಆದುದರಿಂದ ಕರಿಕೆಯನ್ನು ವಿಶೇಷವೆಂದು ಪರಿಗಣಿಸಿ ಸರ್ಕಾರದ ಮೂಲಕ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಬೇಡಿಕೆಗಳು:

ಕರ್ನಾಟಕ ಕೇರಳ ಗಡಿ ಭಾಗವಾದ ಕರಿಕೆ ಗ್ರಾಮದ ಚೆಂಬೇರಿಯಲ್ಲಿ ಬಸ್ ನಿಲ್ದಾಣಕ್ಕೆ ಕಾಯ್ದಿರಿಸಿದ 0.69 ಏಕ್ರೆ ಜಾಗದಲ್ಲಿ ಬಸ್ ನಿಲ್ದಾಣ ಮತ್ತು ವಾಣಿಜ್ಯ ಸಂಕೀರ್ಣ ಕಟ್ಟಡ ಮಂಜೂರು ಮಾಡಿಕೊಡಬೇಕು. ಕರಿಕೆ ಭಾಗಮಂಡಲ ಅಂತರರಾಜ್ಯ ಹೆದ್ದಾರಿಯ 20ಕಿ.ಮೀ. ರಸ್ತೆಯನ್ನು ಅಗಲೀಕರಣ ಮತ್ತು ಮರು ಡಾಮರೀಕರಣ ಮಾಡಿ ಅಭಿವೃದ್ಧಿಪಡಿಸಬೇಕು. ಕರಿಕೆ ಗ್ರಾಮದ ಸರ್ಕಾರಿ ಆರೋಗ್ಯ ಉಪಕೇಂದ್ರಕ್ಕೆ ಹೊಸ ಕಟ್ಟಡ ಮಂಜೂರು ಮಾಡಿ ಖಾಯಂ ವೈದ್ಯರನ್ನು ನೇಮಿಸಿ ಕೊಡಬೇಕು. ಕರಿಕೆ ಗ್ರಾಮಕ್ಕೆ ಹೊಸ ಪ್ರವಾಸಿ ಮಂದಿರವನ್ನು ಮಂಜೂರು ಮಾಡಿಕೊಡಬೇಕು. ಕರ್ನಾಟಕ ಕೇರಳ ಗಡಿ ಭಾಗವಾದ ಕರಿಕೆ ಗ್ರಾಮದ ಅಂತರರಾಜ್ಯ ಹೆದ್ದಾರಿಯ ಗಡಿಯಾದ ಚೆಂಬೇರಿಯಲ್ಲಿ ಸ್ವಾಗತ ದ್ವಾರವನ್ನು ಮಂಜೂರು ಮಾಡಿಕೊಡಬೇಕು. ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 28 ಪಂಚಾಯಿತಿ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಿಕೊಡಬೇಕು. ಕರಿಂಬಳಪು ಎಸ್.ಸಿ. ಕಾಲೋನಿಗೆ ಹೋಗುವ ರಸ್ತೆಯಲ್ಲಿ ಸೇತುವೆ ನಿರ್ಮಾಣ ಮಾಡಬೇಕು. ಹಳೇ ಮನೆಯಿಂದ ಆಲತ್ತಿಕಡವಿಗೆ ಹೊಸ ಸಂಪರ್ಕ ರಸ್ತೆ ಮತ್ತು ಸೇತುವೆ ನಿರ್ಮಿಸಬೇಕು. ಅರ್ತುಕುಟ್ಟಿ ರಸ್ತೆಯಲ್ಲಿ ದೇರ್ಮಕೊಚ್ಚಿ ಎಂಬಲ್ಲಿ ಸೇತುವೆ ನಿರ್ಮಾಣ ಮಾಡಬೇಕು.

ಕರಿಕೆಯಲ್ಲಿ ಆಟದ ಮೈದಾನಕ್ಕೆ ಜಾಗ ಮಂಜೂರು ಮಾಡಬೇಕು. ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡುಬಡವರಾದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತಿತರರಿಗೆ 150 ಮನೆಗಳನ್ನು ಮಂಜೂರು ಮಾಡಿಕೊಡಬೇಕು. ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೋಟದ ಒಳಗೆ ಇರುವ ವಿದ್ಯುತ್ ಕಂಬಗಳ ಮತ್ತು ತಂತಿಗಳನ್ನು ಮುಖ್ಯ ರಸ್ತೆಗೆ ಸ್ಥಳಾಂತರಿಸಿಕೊಡಬೇಕು. ಕರಿಕೆಗೆ ಪದವಿಪೂರ್ವ ಕಾಲೇಜು ಮಂಜೂರು ಮಾಡಿಕೊಡಬೇಕು. ಕರಿಕೆ ಗ್ರಾಮದ ಪಚ್ಚೆಪಿಲಾವು ಮೂಲಕ ಪೆರಾಜೆ ಗ್ರಾಮದ ನಿಡ್ಯಮಲೆಗೆ ಹೊಸ ಸಂಪರ್ಕ ರಸ್ತೆ ನಿರ್ಮಿಸಿಕೊಡಬೇಕು. ಕರಿಕೆ ಗ್ರಾಮದ ವಿವಿಧ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಕಾಲೋನಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಿಕೊಡಬೇಕು. ಕರಿಕೆ ಗ್ರಾ.ಪಂ. ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಲೋನಿಗಳಲ್ಲಿ ಸಮುದಾಯ ಭವನಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.