ಸಾರಾಂಶ
ಕನ್ನಡಪ್ರಭ ವಾರ್ತೆ ಕಂಪ್ಲಿ
ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗಣೇಶ ಚತುರ್ಥಿ ಉತ್ಸವದ 11ನೇ ದಿನವಾದ ಶನಿವಾರ ಸಂಜೆ ಗಣೇಶ ಮೂರ್ತಿಗಳ ಭವ್ಯ ವಿಸರ್ಜನೆ ಮೆರವಣಿಗೆ ಅದ್ಧೂರಿಯಾಗಿ ಜರುಗಿತು.ವೀರ ಕಂಪಿಲರಾಯ ವಿನಾಯಕ ಮಂಡಳಿಯಿಂದ ಪ್ರತಿಷ್ಠಾಪಿಸಲಾದ ಗೂಬೆ ಪ್ರಭಾವಳಿಯ ಗಣೇಶ ಮೂರ್ತಿಯ ವಿಸರ್ಜನೆ ಮೆರವಣಿಗೆ ವಿಶೇಷ ಆಕರ್ಷಣೆಯಾಗಿತ್ತು. ಮೆರವಣಿಗೆಯಲ್ಲಿ ತಾಷ-ರಾಮ್ ಡೋಲ್, ಡೊಳ್ಳು ಕುಣಿತ, ನಂದಿ ಕೋಲು, ಹಗಲು ವೇಷಗಾರರು, ಚಿಲಿಪಿಲಿ ಗೊಂಬೆಗಳು, ಜನಪದ ವಾದ್ಯ ಬಳಗಗಳು ಸೇರಿದಂತೆ ನೂರಾರು ಸಾಂಸ್ಕೃತಿಕ ಕಲಾವಿದರು ಪಾಲ್ಗೊಂಡು ಸಂಭ್ರಮ ಹೆಚ್ಚಿಸಿದರು. ಡೊಳ್ಳು ಬಾರಿಸುವ ಪ್ರತಿಧ್ವನಿಗೆ ತಕ್ಕಂತೆ ಭಕ್ತರು ನೃತ್ಯಮಗ್ನರಾಗಿದ್ದು, ಮೆರವಣಿಗೆಯ ಮಾರ್ಗದೆಲ್ಲೆಡೆ ಭಕ್ತರ ಹರ್ಷೋದ್ಗಾರ ಮೊಳಗಿದವು.
ಇದರ ಮೊದಲು, ಶುಕ್ರವಾರ ರಾತ್ರಿ ಪಟ್ಟಣದಲ್ಲಿ ಭಜನೆ ಕಾರ್ಯಕ್ರಮ ಜರುಗಿದ್ದು, ಶನಿವಾರ ಬೆಳಗ್ಗೆ ಐತಿಹಾಸಿಕ ಕಂಪ್ಲಿ ಕೋಟೆಯ ಪಂಪಾಪತಿ ದೇವಾಲಯದಿಂದ ಸೋಮೇಶ್ವರ ದೇವಾಲಯದವರೆಗೆ ವೀರ ಕಂಪಿಲರಾಯನ ಭಾವಚಿತ್ರ ಮೆರವಣಿಗೆ ನಡೆದಿತ್ತು.ಪಟ್ಟಣದ ಭಗತ್ ಸಿಂಗ್ ಬಾಯ್ಸ್, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವಕ ಮಂಡಳಿ, ಹಿಂದೂ ಸಾಮ್ರಾಟ್, ಅಂಬೇಡ್ಕರ್ ಯುವಕ ಮಂಡಳಿ, ಶಿವ ಗಜಾನನ ಯುವಕ ಮಂಡಳಿ ಸೇರಿ ಹತ್ತಕ್ಕೂ ಹೆಚ್ಚು ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆಗಳು ಅದ್ಧೂರಿಯಾಗಿ ಜರುಗಿದವು. ಪ್ರತಿಯೊಂದು ಮಂಡಳಿಯೂ ತಮ್ಮ ತಮ್ಮ ವೈಶಿಷ್ಟ್ಯಪೂರ್ಣ ಶೈಲಿಯಲ್ಲಿ ಮೆರವಣಿಗೆ ನಡೆಸಿದ್ದು, ಪೂರ್ತಿ ಪಟ್ಟಣವೇ ಉತ್ಸವದ ವಾತಾವರಣದಿಂದ ಕಂಗೊಳಿಸಿತು.
ಅನ್ನ ಸಂತರ್ಪಣೆ:ಗಣೇಶ ಚತುರ್ಥಿಯ ಅಂಗವಾಗಿ ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಲಯನ್ಸ್ ಗ್ರೂಪ್ ವತಿಯಿಂದ ಅನ್ನ ಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಯಿತು. ಇದೇ ಸಂದರ್ಭ ಕಾಳಿಕಾ ದೇವಿ ಸಹಿತ ಗಣೇಶ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ವಿಸರ್ಜನೆ ಮೆರವಣಿಗೆ ವೇಳೆ ಭಕ್ತರು ''''''''ಗಣಪತಿ ಬಪ್ಪಾ ಮೋರಯಾ'''''''', ''''''''ಮಂಗಲಮೂರ್ತಿ ಮೋರಯಾ'''''''' ಘೋಷಣೆ ಕೂಗುತ್ತಾ ಭಕ್ತಿ ಭಾವದಿಂದ ಉತ್ಸವವನ್ನು ಆಚರಿಸಿದರು. ತುಂಗಭದ್ರಾ ನದಿಯಲ್ಲಿ ಮೂರ್ತಿಗಳ ವಿಸರ್ಜನೆಯೊಂದಿಗೆ 11 ದಿನಗಳ ಗಣೇಶೋತ್ಸವಕ್ಕೆ ತೆರೆ ಬಿದ್ದಿತು.