ಸಾರಾಂಶ
ಹಾಸನದ ಅರಸೀಕೆರೆ ರಸ್ತೆ ಬಳಿ ಇರುವ ಬಿ.ಕಾಟಿಹಳ್ಳಿ ಕೊಪ್ಪಲಿನ ಆಂಜನೇಯ ದೇವಾಲಯದಲ್ಲಿ ವಿಶ್ವ ಯೋಗ ದಿನದ ಅಂಗವಾಗಿ ಹಾಸನದ ಈಶಾವಾಸ್ಯಮ್ ಸಂಸ್ಥೆಯಿಂದ ಅಗ್ನಿಹೋತ್ರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಹಾಸನದ ಈಶಾವಾಸ್ಯಮ್ ಸಂಸ್ಥೆ ನೇತೃತ್ವ । ವಿಶ್ವ ಯೋಗ ದಿನ ಅಂಗವಾಗಿ ಆಯೋಜನೆ
ಕನ್ನಡಪ್ರಭ ವಾರ್ತೆ ಹಾಸನನಗರದ ಸಮೀಪ ಅರಸೀಕೆರೆ ರಸ್ತೆ ಬಳಿ ಇರುವ ಬಿ.ಕಾಟಿಹಳ್ಳಿ ಕೊಪ್ಪಲಿನ ಆಂಜನೇಯ ದೇವಾಲಯದಲ್ಲಿ ವಿಶ್ವ ಯೋಗ ದಿನದ ಅಂಗವಾಗಿ ಹಾಸನದ ಈಶಾವಾಸ್ಯಮ್ ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿದ್ದ ಅಗ್ನಿಹೋತ್ರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಹೋಮವನ್ನು ಮಾಡುವ ನಾಲ್ಕು ಜನ ಮಾತೆಯರು ಸೇರಿದಂತೆ ೧೮ ಜನ ಮಾತೆಯರಿಗಾಗಿ ಹಾಸನದ ಬಿ.ಕಾಟಿಹಳ್ಳಿ ಕೊಪ್ಪಲಿನ ಆಂಜನೇಯ ದೇವಾಲಯದಲ್ಲಿ ೨೦ ದಿನಗಳ ಅಗ್ನಿಹೋತ್ರ ಕಲಿಕಾ ಶಿಬಿರವು ಕಳೆದ ಏಪ್ರಿಲ್ ನಲ್ಲಿ ನಡೆದಿತ್ತು. ಹಾಸನದ ಈಶಾವಾಸ್ಯಮ್ ಸಂಸ್ಥೆ ಸಾಧಕರು ಇವರಿಗೆ ಪ್ರೇರಕರು. ಈಶಾವಾಸ್ಯಮ್ ತಂಡ ಸೇರಿದಂತೆ ತಮ್ಮದೂ ಒಂದು ಟೀಮ್ ಆಗಬೇಕೆಂಬ ಬೇಡಿಕೆ ಕಾಟಿಹಳ್ಳಿ ಕೊಪ್ಪಲಿನ ಮಾತೆಯರದ್ದು ಆಗಿದೆ. ಅವರ ಆಸೆ ಶನಿವಾರ ಈಡೇರಿದೆ. ಅದೇ ಮಾತೆಯರು ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿ, ಎಲ್ಲಾ ವ್ಯವಸ್ಥೆ ಅವರೇ ಮಾಡಿದ್ದರು. ಅವರ ಜತೆಗೆ ಕಾರ್ಯಕ್ರಮದಲ್ಲಿ ಅಗ್ನಿಹೋತ್ರ ಮಂತ್ರ ಹೇಳಿದವರು.ಈಶಾವಾಸ್ಯಮ್ ಸಂಸ್ಥೆಯ ಸಾಧಕರು. ವೇದಿಕೆಯಲ್ಲಿ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ.ಪ್ರಸನ್ನ ಎನ್.ರಾವ್ ಉದ್ಘಾಟಿಸಿದರು. ಅವರ ಪತ್ನಿ ಡಾ.ಶೈಲಜಾ ರಾವ್ ಹಾಗೂ ಮಂಗಳೂರು ಪಬ್ಲಿಕ್ ಶಾಲೆಯ ಅಧ್ಯಕ್ಷ ಚಂದ್ರರಾಜ ಜೈನ್ ಇದ್ದರು. ಪತಂಜಲಿ ಪರಿವಾರದ ಪ್ರಭಾರಿಗಳಾದ ದೊರೆಸ್ವಾಮಿ, ನಾಗೇಶ್, ಪರಮೇಶ್ವರ್ ಸುಪರ್ಣಸ, ಶಾರದಾ ಹಾಗೂ ವೇದಭಾರತಿಯ ಹಾಸನ ನಗರ ಅಧ್ಯಕ್ಷ ಹೇಮಂತ್ ಕುಮಾರ್, ಉಪಾಧ್ಯಕ್ಷ ವಿಜಯಕುಮಾರ್, ಕಾರ್ಯದರ್ಶಿ ಸತೀಶ್, ಯೋಗ ಶಿಕ್ಷಕ ಚಿದಾನಂದ್, ಪತಂಜಲಿ ಯೋಗ ಶಿಕ್ಷಣ ಸಮಿತಿಯ ಶೋಭಾ ಯೋಗರಾಜ್ ಮತ್ತು ಮಂಗಳೂರು ಪಬ್ಲಿಕ್ ಸ್ಕೂಲಿನ ದಿನೇಶ್ ಹಾಗೂ ಬಡಾವಣೆಯ ನೂರಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಸನ್ನ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವೇದ ಪ್ರಸಾರವಾಗುತ್ತಿರುವ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ಚಂದ್ರರಾಜ ಜೈನ್ ಮತ್ತು ಡಾ. ಶೈಲಜಾ ರಾವ್ ಶುಭ ಹಾರೈಸಿದರು. ವೇದ ಭಾರತಿಯ ಸಂಯೋಜಕ ಹರಿಹರಪುರ ಶ್ರೀಧರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮವನ್ನು ಜಯ ನಾಗೇಶ್ ನಿರೂಪಣೆ ಮಾಡಿದರು. ಮಮತಾ ರಮೇಶ್ ಎಲ್ಲರನ್ನೂ ಸ್ವಾಗತಿಸಿದರು. ದೇವಾಲಯ ಸಮಿತಿಯ ಅಧ್ಯಕ್ಷ ಲೋಕೇಶ್ ವೇದ ಭಾರತಿಯ ನೂತನ ಶಾಖೆಯು ತಮ್ಮ ದೇವಾಲಯದಲ್ಲಿ ಶುರುವಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.