ಅದ್ಧೂರಿಯ ಹುಚ್ಚುರಾಯಸ್ವಾಮಿಯ ಬ್ರಹ್ಮರಥೋತ್ಸವ

| Published : Apr 13 2025, 02:02 AM IST

ಸಾರಾಂಶ

ಶಿಕಾರಿಪುರ: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಹುಚ್ಚುರಾಯಸ್ವಾಮಿಯ ವೈಭವದ ಬ್ರಹ್ಮರಥೋತ್ಸವ ಶನಿವಾರ ಬೆಳಿಗ್ಗೆ ನಾಡಿನ ಮೂಲೆ ಮೂಲೆಯಿಂದ ಆಗಮಿಸಿದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಬಹು ವಿಜೃಂಭಣೆಯಿಂದ ನಡೆಯಿತು.

ಶಿಕಾರಿಪುರ: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಹುಚ್ಚುರಾಯಸ್ವಾಮಿಯ ವೈಭವದ ಬ್ರಹ್ಮರಥೋತ್ಸವ ಶನಿವಾರ ಬೆಳಿಗ್ಗೆ ನಾಡಿನ ಮೂಲೆ ಮೂಲೆಯಿಂದ ಆಗಮಿಸಿದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಬಹು ವಿಜೃಂಭಣೆಯಿಂದ ನಡೆಯಿತು.

ಶ್ರೀ ಹುಚ್ಚುರಾಯಸ್ವಾಮಿಯ ಬ್ರಹ್ಮರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಬೆಳಗಿನ ಜಾವದಿಂದ ಶ್ರೀ ಗಣಪತಿ ಪೂಜೆ, ಅಷ್ಟದಿಕ್ಪಾಲಕರ ಮಹಾಬಲಿ, ಮಹಾಮಂಗಳಾರತಿಯ ಮೂಲಕ ಋತ್ವಿಜರ ವೇದಮಂತ್ರ ಘೋಷದೊಂದಿಗೆ ಬೆಳಿಗ್ಗೆ 8.30ರ ವೃಷಭ ಲಗ್ನದಲ್ಲಿ ಹುಚ್ಚುರಾಯಸ್ವಾಮಿಯ ಉತ್ಸವ ಮೂರ್ತಿಯನ್ನು ರಥಕ್ಕೆ ಪ್ರದಕ್ಷಿಣೆ ಮೂಲಕ ನಡೆದ ರಥಾರೋಹಣದಿಂದ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಆಗಸದಲ್ಲಿ ಗರುಡ ರಥಕ್ಕೆ ಪ್ರದಕ್ಷಿಣೆ ಹಾಕಿ ಎಲ್ಲರ ಗೆಮನ ಸೆಳೆಯಿತು.ದೇವಸ್ಥಾನದಿಂದ ರಥಬೀದಿಯ ಮುಖ್ಯರಸ್ತೆಯ ಮೂಲಕ ಸಹಸ್ರಾರು ಸಂಖ್ಯೆಯ ಭಕ್ತರು ಹುಚ್ಚುರಾಯಸ್ವಾಮಿ, ಗೋವಿಂದ ನಾಮಸ್ಮರಣೆಯ ಜತೆಗೆ ವಿಪ್ರರ ವೇದಮಂತ್ರ ಘೋಷಣೆಯ ಮೂಲಕ ರಥವನ್ನು ಎಳೆದು ಮಾರಿಕಾಂಬ ಗದ್ದುಗೆ ಬಳಿ ತಂದು ನಿಲ್ಲಿಸಲಾಯಿತು. ಮಧ್ಯದಲ್ಲಿ ಭಕ್ತರು ಬಾಳೆ ಹಣ್ಣು, ಹೂವು, ಧವನವನ್ನು ರಥಕ್ಕೆ ಎಸೆದು ಭಕ್ತಿ ಸಮರ್ಪಿಸಿದರು.ನಾಡಿನ ಮೂಲೆ ಮೂಲೆಯಿಂದ ಧಾವಿಸಿದ್ದ ಭಕ್ತರಿಗೆ ಬಿಸಿಲಿನ ಧಗೆಯನ್ನು ತಣಿಸಲು ಹಿಂದೂ ಮಹಾಸಭಾ ಸಹಿತ ಹಲವು ಸಂಘ ಸಂಸ್ಥೆಗಳ ವತಿಯಿಂದ ಪಾನಕ, ಮಜ್ಜಿಗೆ ಸಹಿತ ತಂಪು ಪಾನೀಯ ವಿತರಣೆ ಹಲವು ಕಡೆ ನಡೆಯಿತು.

ದೇವಸ್ಥಾನ ಭಕ್ತರಿಂದ ಕಿಕ್ಕಿರಿದು ಸರತಿ ಸಾಲು ವಿಪರೀತವಾಗಿತ್ತು. ಪುರಸಭೆ ವತಿಯಿಂದ ರಥಬೀದಿಯ ತರಳಬಾಳು ಕಲ್ಯಾಣ ಮಂಟಪದಲ್ಲಿ ಶುಕ್ರವಾರ ರಾತ್ರಿ ಊಟ, ಶನಿವಾರ ಬೆಳಿಗ್ಗೆ ಉಪಹಾರ ನಂತರದಲ್ಲಿ ಪಾನಕ ಸೇವೆ ನಿರಂತರವಾಗಿ ಹಮ್ಮಿಕೊಳ್ಳಲಾಗಿತ್ತು. ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಕಾರ್ಯದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಪುತ್ರರಾದ ಸಂಸದ ರಾಘವೇಂದ್ರ, ಶಾಸಕ ವಿಜಯೇಂದ್ರ ಕುಟುಂಬ ವರ್ಗದ ಜತೆ ಪಾಲ್ಗೊಂಡು ಪೂಜಾ ಕಾರ್ಯ ನೆರವೇರಿಸಿ ರಥೋತ್ಸವದ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಈ ಸಂದರ್ಭದಲ್ಲಿ ಸೊಸೆ ತೇಜಸ್ವಿನಿ, ಪ್ರೇಮಾ, ಮೊಮ್ಮಕ್ಕಳು, ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ, ಪುರಸಭಾಧ್ಯಕ್ಷೆ ಸುನಂದ, ತಾ.ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಮ ಪಾರಿವಾಳದ, ಮುಖಂಡ ಶಾಂತವೀರಪ್ಪಗೌಡ, ಹಾಲಪ್ಪ, ವಸಂತಗೌಡ, ಎನ್.ವಿ.ಈರೇಶ್, ಸುಧೀರ ಮಾರವಳ್ಳಿ, ರಮೇಶ್ [ರಾಮಿ], ಸುರೇಶ್ ಧಾರವಾಡದ, ವಿಹಿಂಪ ಮಾಜಿ ಉಪಾಧ್ಯಕ್ಷ ಪ್ರಕಾಶ್ ಜಿನ್ನು ಸಹಿತ ಹಲವರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದ್ದರು.ಸಂಜೆ ವೇಳೆಯಲ್ಲಿ ರಥವನ್ನು ಮಾರಿಕಾಂಬಾ ಗದ್ದುಗೆಯಿಂದ ಶಿವಮೊಗ್ಗ ವೃತ್ತಕ್ಕೆ ಎಳೆದು ತರಲಾಯಿತು.