ಚಳ್ಳಕೆರೆ ತಾಲೂಕು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರಸಿದ್ಧ ಗೌರಸಮುದ್ರ ಮಾರಮ್ಮನ ಜಾತ್ರಾ ಮಹೋತ್ಸವ ಅಪಾರ ಭಕ್ತ ಸಮೂಹದೊಂದಿಗೆ ವಿಜೃಂಭಣೆಯಿಂದ ನೆರವೇರಿತು.

ಸಚಿವ ರಘುಮೂರ್ತಿ ದೇವಿಗೆ ವಿಶೇಷ ಪೂಜೆ । ಬೇವಿನುಡುಗೆ ಉಟ್ಟು ಹರಕೆ ತೀರಿಸಿದ ಭಕ್ತರು । ದೇವಿಯ ದರ್ಶನಕ್ಕೆ ನೂಕುನುಗ್ಗಲುಕನ್ನಡಪ್ರಭ ವಾರ್ತೆ ಚಳ್ಳಕೆರೆ

ಮಧ್ಯ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೌರಸಮುದ್ರ ಮಾರಮ್ಮದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಸೆಪ್ಟೆಂಬರ್ 15ರ ಮಂಗಳವಾರದಂದು ಲಕ್ಷಾಂತರ ಭಕ್ತಾಧಿಗಳ ಭಕ್ತಿಪೂರ್ವಕ ವಿಶಿಷ್ಟ ಆಚರಣೆಯೊಂದಿಗೆ ತುಂಬಲು ಪ್ರದೇಶದಲ್ಲಿ ಅತ್ಯಂತ ವಿಜೃಂಭಣೆ ಹಾಗೂ ಸಡಗರದಿಂದ ನೆರವೇರಿತು.

ತುಂಬಲಿನಲ್ಲಿರುವ ಮಾರಮ್ಮನ ದೇವಸ್ಥಾನಕ್ಕೆ ಭಕ್ತರು ಮೂರು ಸುತ್ತು ಪ್ರದಕ್ಷಿಣೆ ಹಾಕಿ, ದೀಪದ ಕಂಬಕ್ಕೆ ಎಣ್ಣೆ ದೀಪ ಹಚ್ಚಿ ತಮ್ಮ ಕಷ್ಟಗಳನ್ನು ಪರಿಹರಿಸುವಂತೆ ಪ್ರಾರ್ಥಿಸಿದರು. ನಂತರ ಮಾರಮ್ಮ ದೇವಿಯನ್ನು ವಿಶೇಷವಾಗಿ ಸಜ್ಜುಗೊಳಿಸಲಾಗಿದ್ದ ಕಟ್ಟೆಯ ಮೇಲೆ ಕೂರಿಸಲಾಯಿತು. ಈ ಸಂದರ್ಭದಲ್ಲಿ ಸಹಸ್ರಾರು ಭಕ್ತರು ತಮ್ಮ ನೆಚ್ಚಿನ ದೇವಿಗೆ ನಮಿಸುವ ಮೂಲಕ ಭಕ್ತಿಯನ್ನು ಪ್ರದರ್ಶಿಸಿದರು.

ಇದಲ್ಲದೇ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಮಾಡಿಕೊಂಡ ಹರಕೆ ತೀರಿಸುವ ಆಚರಣೆಯೂ ಇಲ್ಲಿ ನಡೆಯಿತು. ಬೇವಿನುಡುಗೆ ಉಟ್ಟು ಹರಕೆ ತೀರಿಸುವವರೂ ಅಲ್ಲಲ್ಲಿ ಕಂಡುಬಂದರು. ಇನ್ನು ಕೆಲವರು ಮೂರು ಸುತ್ತು ಪ್ರದಕ್ಷಿಣೆ ಹಾಕುವ ಮೂಲಕ ದೇವಿಯ ಕೃಪೆಗೆ ಪಾತ್ರರಾದವರು ನೂರಾರು ಮಂದಿ ತಮ್ಮ ಭಕ್ತಿಯ ಪರಾಕಾಷ್ಠೆ ಮೆರೆಯುತ್ತಿರುವುದು ಕಂಡು ಬಂದಿತು.

ಉರಿಬಿಸಿಲನ್ನೂ ಲೆಕ್ಕಿಸದೇ ಸಾವಿರಾರು ಭಕ್ತಾಧಿಗಳು ದೇವಿಯ ದರ್ಶನಕ್ಕೆ ನೂಕುನುಗ್ಗಲಿನಲ್ಲೂ ನಾ ಮುಂದು ತಾ ಮುಂದು ಎಂಬಂತೆ ಅವಸರದಿಂದಲೇ ಸಾಗುತ್ತಿರುವುದು ಸಾಮಾನ್ಯವಾಗಿತ್ತು.

ತುಂಬಲು ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಟಿ.ರಘುಮೂರ್ತಿ ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮೊಳಕಾಲ್ಮುರು ಶಾಸಕ ಎನ್.ವೈ.ಗೋಪಾಲಕೃಷ್ಣ, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಡಾ.ಬಿ. ಯೋಗೀಶ್ ಬಾಬು ಮತ್ತಿತರರು ಹಾಜರಿದ್ದರು.

*ಮಧ್ಯಾಹ್ನದ ಮಾರಿಗೆ ಬಹು ಪರಾಕ್:

ಗೌರಸಮುದ್ರ ಗ್ರಾಮದಿಂದ ತುಂಬಲು ಪ್ರದೇಶಕ್ಕೆ ದೇವಿಯನ್ನು ಕರೆತರುವಾಗ ಉರಿಮೆ ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ತಂದಾಗ ನೆರೆದಿದ್ದ ಭಕ್ತ ಸಮೂಹ ಹರ್ಷೋದ್ಘಾರದಿಂದ ದೇವಿಗೆ ನಮಿಸುತ್ತಿರುವುದು ಉರಿವ ಬಿಸಿಲಿನಲ್ಲೂ ನೆಚ್ಚಿನ ದೇವತೆಯನ್ನು ಕಣ್ತುಂಬಿಕೊಂಡ ಕ್ಷಣಗಳಿಗೆ ಸಾಕ್ಷಿಯಾಗಿತ್ತು.

ಮಧ್ಯಾಹ್ನದ ಹೊತ್ತಿಗೆ ಯಾರೊಬ್ಬರೂ ತುಂಬಲು ಪ್ರದೇಶದಲ್ಲಿ ಇಲ್ಲದೇ ಇರುವ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಈ ಬಾರಿಯೂ ಅದು ಮುಂದುವರೆದಿದೆ.

ಸೆ.15 ರಂದು ತುಂಬಲು ಪ್ರದೇಶದಿಂದ ದೇವಿ ಜಾತ್ರೆಯ ಬಳಿಕ ಸಂಜೆ ಗ್ರಾಮಕ್ಕೆ ವಾಪಸ್‌ ಆಗಲಿದ್ದು, ಭವ್ಯ ಮೆರವಣಿಗೆಯ ನಂತರ ಗುಡಿ ತುಂಬಿಸಲಾಗುವುದು. ಸೆ.16 ಬುಧವಾರ ಸಂಜೆ ದೇವಸ್ಥಾನದ ಮುಂಭಾಗದಲ್ಲಿ ದೇವಿಗೆ ಸಾಂಪ್ರದಾಯಿಕ ‘ಸಿಡಿ’ ಉತ್ಸವದ ಮೂಲಕ ಭಕ್ತಿ ಸಮರ್ಪಣೆ ನಡೆಯಲಿದೆ. ಸೆ.17 ಗುರುವಾರ ಸಂಜೆ ಓಕಳಿ, ಮಹಾಮಂಗಳಾರತಿ ನೆರವೇರಲಿದ್ದು, ದೇವರನ್ನು ಮರಳಿ ಗರ್ಭಗುಡಿಗೆ ಪ್ರವೇಶಿಸುವ ಮೂಲಕ ಈ ವರ್ಷದ ದೊಡ್ಡ ಪರಿಷೆಗೆ ಅಧಿಕೃತ ತೆರೆ ಬೀಳಲಿದೆ.

ಪೊಲೀಸ್ ಬಿಗಿ ಬಂದೋಬಸ್ತ್ :

ಜಾತ್ರೆ ಅಂಗವಾಗಿ ಚಿತ್ರದುರ್ಗ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು. ಆಂದ್ರದ ಕಡೆಯಿಂದ ಬರುವ ಮಾರ್ಗಗಳೂ ಸೇರಿದಂತೆ ಎಲ್ಲಾ ಕಡೆಗೂ ಪೊಲೀಸರ ನಿಯೋಜನೆ ಅಚ್ಚುಕಟ್ಟಾಗಿತ್ತು. ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿತ್ತು.

ಜಾತ್ರೆ ಹಿನ್ನೆಲೆ:

ಜನಪದರ ನಂಬಿಕೆಯ ಪ್ರಕಾರ, ನೂರಾರು ವರ್ಷಗಳ ಹಿಂದೆ ಈ ಭಾಗದಲ್ಲಿ ತೀವ್ರವಾದ ಸಾಂಕ್ರಾಮಿಕ ರೋಗಗಳು ಪ್ಲೇಗ್, ಕಾಲರಾ, ಸಿಡುಬು ಮುಂತಾದವು ಹರಡಿದಾಗ, ಸ್ಥಳೀಯ ಭಕ್ತರು ಈ ಮಾರಮ್ಮ ದೇವಿಯನ್ನು ಆರಾಧಿಸಲು ಮತ್ತು ರಕ್ಷಣೆಗಾಗಿ ಪ್ರಾರ್ಥಿಸಲು ಪ್ರಾರಂಭಿಸಿದರು. ದೇವಿಯು ಭಕ್ತರ ಕಷ್ಟಗಳನ್ನು ನಿವಾರಿಸಿ, ಸಾಂಕ್ರಾಮಿಕ ರೋಗಗಳಿಂದ ಇಡೀ ನಾಡನ್ನು ಕಾಪಾಡಿದಳು ಎಂಬ ಗಾಢ ನಂಬಿಕೆ ಇಲ್ಲಿದೆ.

ದೇವಸ್ಥಾನದ ಮುಂಭಾಗದಲ್ಲಿ ನಡೆಯುವ ಸಿಡಿ ಉತ್ಸವವು ದೇವಿಯ ಶಕ್ತಿಯನ್ನು ಮತ್ತು ಭಕ್ತರ ಸಮರ್ಪಣಾ ಮನೋಭಾವವನ್ನು ಬಿಂಬಿಸುತ್ತದೆ. ಹೊಸ ವಾಹನಗಳನ್ನು ಖರೀದಿಸಿದಾಗ ಅಥವಾ ಪ್ರಯಾಣದ ಸುರಕ್ಷತೆಗಾಗಿ ಈ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಪದ್ಧತಿ ಇಂದಿಗೂ ನಡೆದುಕೊಂಡು ಬಂದಿದೆ.