ಅದ್ಧೂರಿಯ ಮಾರುತೇಶ್ವರ ಜಾತ್ರಾ ಮಹೋತ್ಸವ

| Published : Feb 02 2025, 11:47 PM IST

ಸಾರಾಂಶ

ತಾಲೂಕಿನ ಹಳೇ ಬಂಡಿಹರ್ಲಾಪುರ ಗ್ರಾಮದ ಮಾರುತೇಶ್ವರ ಜಾತ್ರಾ ಮಹೋತ್ಸವ ಹಾಗೂ 3ನೇ ವರ್ಷದ ರಥೋತ್ಸವ ಶನಿವಾರ ವಿಜೃಂಭಣೆಯಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಕೊಪ್ಪಳ

ತಾಲೂಕಿನ ಹಳೇ ಬಂಡಿಹರ್ಲಾಪುರ ಗ್ರಾಮದ ಮಾರುತೇಶ್ವರ ಜಾತ್ರಾ ಮಹೋತ್ಸವ ಹಾಗೂ 3ನೇ ವರ್ಷದ ರಥೋತ್ಸವ ಶನಿವಾರ ವಿಜೃಂಭಣೆಯಿಂದ ಜರುಗಿತು.

ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು. ಸಾಯಂಕಾಲ ರಥೋತ್ಸವಕ್ಕೆ ತೊಗಲು ಗೊಂಬೆಯಾಟ ಕಲಾವಿದೆ ಪದ್ಮಶ್ರೀ ಪ್ರಶಸ್ತಿಯ ಪುರಸ್ಕೃತೆ ಭೀಮವ್ವ ಶಿಳ್ಳೆಕ್ಯಾತರ ಚಾಲನೆ ನೀಡಿದರು.

ರಥಕ್ಕೆ ಅನ್ನಬಲಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನಡೆದವು. ಡೊಳ್ಳು ಕುಣಿತ, ಸಮಾಳ, ಗೊಂಬೆ ಕುಣಿತ, ವೀರಭದ್ರ ಕುಣಿತ, ಭಾಜ ಭಜಂತ್ರಿಯೊಂದಿಗೆ ಪ್ರಮುಖ ಬೀದಿಗಳಲ್ಲಿ ಮಹಿಳೆಯರು ಕುಂಭ ಹೊತ್ತು ಸಾಗಿದರು. ಮನೆ, ಮಾಳಿಗೆ ಮೇಲೆ ನಿಂತ ಭಕ್ತರು ಬಾಳೆಹಣ್ಣು, ಉತ್ತತ್ತಿ, ಹೂ ಎಸೆದು ಧನ್ಯತೆ ಮೆರೆದರು. ಅನ್ನ ದಾಸೋಹ ನಡೆಯಿತು.

ಕುಕನೂರು ಅನ್ನದಾನೇಶ್ವರ ಮಹಾದೇವ ಸ್ವಾಮಿಗಳು ಮಾತನಾಡಿ, ಒಬ್ಬ ವ್ಯಕ್ತಿ ಎತ್ತರಕ್ಕೆ ಬೆಳೆಯಬೇಕಾದರೆ ಎಷ್ಟು ನಿಷ್ಠೆ ಕಾಯಕ ಬೇಕು ಎಂಬುದಕ್ಕೆ ಭೀಮವ್ವ ಅಜ್ಜಿ ಏಕಾಗ್ರತೆಯೇ ಸಾಕ್ಷಿ ಕಲೆ ಗೌರವಿಸಿ ಬದುಕು ಕಟ್ಟಿಕೊಂಡ ಭೀಮವ್ವನ ಸಾಧನೆಗೆ ಶ್ರೀಗಳು ತಲೆಬಾಗಿ ಗೌರವಿಸಿದರು.

ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಒಗ್ಗಟ್ಟಿನಲ್ಲಿ ಬಲವಿದೆ ಒಗ್ಗಟ್ಟಿನಿಂದ ರಥವನ್ನು ಎಳೆಯುವ ಮೂಲಕ ಮುಖಂಡರು ಗ್ರಾಮದಲ್ಲಿ ಸೌಹಾರ್ದತೆ ಮೆರೆದಿದ್ದಾರೆ. ಹಿಂದಿನ ಹಿರಿಯರು ಸಾಮೂಹಿಕ ವಿವಾಹಗಳನ್ನು ಹಬ್ಬದ ರೀತಿಯಲ್ಲಿ ಆಚರಿಸುವ ಮೂಲಕ ಒಗ್ಗೂಡಿಸುತ್ತಿದ್ದರು ಎಂದರು.

ಹರಾಜು:

ಆಂಜನೇಯ ಧ್ವಜ ಕಳೆದ ವರ್ಷ ₹1 ಲಕ್ಷಕ್ಕೆ ಮಾರುತಿ ಮಂಡಲಗೇರಿಯವರಿಗೆ ಹರಾಜಾಗಿತ್ತು. ಈ ವರ್ಷ ಕಾಂಗ್ರೆಸ್ ಮುಖಂಡ ಕೆ. ಎಂ. ಸೈಯದ್ ₹1.55 ಲಕ್ಷಕ್ಕೆ ಪಡೆದರು.

ರಥೋತ್ಸವದ ನಿಮಿತ್ತ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಂಜುನಾಥ ಆಗೋಲಿ, ಶೃತಿ ಹ್ಯಾಟಿ ಸಂಗಡಿಗರು ನಡೆಸಿಕೊಟ್ಟರು. ಕೊಪ್ಪಳ ರೆಡ್ ಕ್ರಾಸ್ ಸಂಸ್ಥೆ ಹಾಗೂ ಮಂಜು ಬೆಣಕಲ್, ಪಂಪಾಪತಿ ಶಿವಪುರ ಸಹಯೋಗದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು.

ಮರಿಯಮ್ಮನಹಳ್ಳಿ ಮಲ್ಲಿಕಾರ್ಜುನ ಶಿವಾಚಾರ್ಯ, ಮೈನಳ್ಳಿ ಸಿದ್ಧೆಶ್ವರ ಶಿವಾಚಾರ್ಯ, ನಗರಗಡ್ಡಿ ಶಾಂತಲಿಂಗೇಶ್ವರ ಮಹಾಸ್ವಾಮಿಗಳು, ಇಲಕಲ್ ಹಜರತ್ ಸೈಯದ್ ಮುರ್ತುಜಾ ಷಾ, ಕೆ. ಚಂದ್ರಶೇಖರ್, ಜಾತ್ರಾ ಸಮಿತಿ ಅಧ್ಯಕ್ಷ ಭೀಮರಾಯ ಬಿಳೆಭಾವಿ, ಹನುಮಂತಪ್ಪ ಕಾಟ್ರಳ್ಳಿ, ಪಂಪಣ್ಣ ಪೂಜಾರ, ಯಮನೂರಪ್ಪ ವಡ್ಡರ್ ಸೇರಿದಂತೆ ಅನೇಕರಿದ್ದರು. ಹಿಟ್ನಾಳ, ಶಿವಪುರ, ಅಗಳಕೇರಾ, ಮಹ್ಮದ್ ನಗರ, ಬಸಾಪುರ, ನಾರಾಯಣ ಪೇಟೆ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಭಕ್ತರು ಭಾಗವಹಿಸಿದ್ದರು.