ಪಾರಂಪರಿಕ ಕಲೆಕ್ಟರ್ಸ್‌ ಆಫೀಸ್‌ ಕಟ್ಟಡಕ್ಕೆಬೇಕಿ ಮೀನ ಮೇಷ!

| Published : Dec 18 2024, 12:48 AM IST

ಸಾರಾಂಶ

ಸ್ಮಾರ್ಟ್‌ ಸಿಟಿ ಅಡಿಯಲ್ಲಿ ಕಟ್ಟಡ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿತ್ತು. ಪ್ರವಾಸೋದ್ಯಮಕ್ಕೆ ಪೂರಕವಾಗಿ ಮ್ಯೂಸಿಯಂ ನಿರ್ಮಾಣದ ಯೋಜನೆಯಿತ್ತು. ಆದರೆ ಜಿಲ್ಲಾಡಳಿತಕ್ಕೆ ಅಗತ್ಯವಿರುವ ದಾಖಲೆಗಳು ಈ ಕಟ್ಟಡದಲ್ಲಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಅಭಿವೃದ್ಧಿ ಕೆಲಸವನ್ನು ಕೈಬಿಡಲಾಗಿದೆ. ಆದಷ್ಟು ಬೇಗ ಕಟ್ಟಡಕ್ಕೆ ಮರುಜೀವ ನೀಡುವ ಅಗತ್ಯವಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಸುಮಾರು 2 ಶತಮಾನಗಳಷ್ಟು ಹಳೆಯ, ಕಲೆಕ್ಟರ್ಸ್‌ ಆಫೀಸ್‌ ಎಂದೇ ಕರೆಯಲ್ಪಡುತ್ತಿದ್ದ ಮಂಗಳೂರಿನ ಹಳೆ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಶಿಥಿಲಾವಸ್ಥೆ ತಲುಪುವ ಹಂತದಲ್ಲಿದ್ದು, ಈ ಪುರಾತನ ಕಟ್ಟಡಕ್ಕೆ ಮರುಜೀವ ನೀಡಿ ಗತವೈಭವ ಉಳಿಸಿಕೊಳ್ಳುವ ಅಗತ್ಯವಿದೆ.

ಟಿಪ್ಪು ಸುಲ್ತಾನ್‌ ಆಡಳಿತ ಕಾಲದಲ್ಲಿ ಕೇಂದ್ರ ಕಚೇರಿಯಾಗಿ ಈ ಕಟ್ಟಡ ಬಳಕೆಯಾಗಿತ್ತು. ಅದರ ಬಳಿಕ ಬ್ರಿಟಿಷರ ಕಾಲದಲ್ಲೂ ಮುಖ್ಯ ಕಚೇರಿಯಾಗಿ ಕಲೆಕ್ಟರ್ಸ್‌ ಆಫೀಸ್‌ ಎಂದೇ ಜನಜನಿತವಾಗಿತ್ತು. ಬಳಿಕ ಈಗಿನ ಜಿಲ್ಲಾಧಿಕಾರಿ ಕಟ್ಟಡ ನಿರ್ಮಾಣವಾಗುವವರೆಗೂ ಈ ಕಟ್ಟಡದಲ್ಲೇ ಡಿಸಿ ಕಚೇರಿ ಕಾರ್ಯಾಚರಿಸುತ್ತಿತ್ತು.

ಪ್ರಸ್ತುತ ಈ ಕಟ್ಟಡದ ಒಂದು ಭಾಗದಲ್ಲಿ ಗ್ರಂಥಾಲಯಾಧಿಕಾರಿ, ನೋಂದಣಿ ಅಧಿಕಾರಿ ಕಚೇರಿ, ಇನ್ನೊಂದು ಭಾಗದಲ್ಲಿ ದಾಖಲೆಗಳ ಸಂಗ್ರಹವಿದೆ. ಉಳಿದ ಬಹುತೇಕ ಕಟ್ಟಡ ಜೀರ್ಣಾವಸ್ಥೆ ತಲುಪುತ್ತಿದೆ. ಅತ್ಯಂತ ಹಳೆಯ ಕಟ್ಟಡವಾದರೂ ಗೋಡೆಗಳು ಇನ್ನೂ ಗಟ್ಟಿಮುಟ್ಟಾಗಿಯೇ ಇವೆ. ಆದರೆ ಮರದ ಮುಚ್ಚಿಗೆಯ ಛಾವಣಿ ಸೇರಿದಂತೆ ವಿವಿಧ ಕಡೆಗಳಲ್ಲಿ ಮರಮಟ್ಟು ಶಿಥಿಲಗೊಂಡಿವೆ. ನಿರ್ವಹಣೆಯೇ ಇಲ್ಲದೆ ಇಷ್ಟೂ ವರ್ಷ ಗಟ್ಟಿಯಾಗಿರುವ ಈ ಕಟ್ಟಡ ಇನ್ನೂ ಹಾಗೇ ಬಿಟ್ಟರೆ ಕುಸಿದು ಬೀಳುವ ಸಾಧ್ಯತೆಯಿದೆ. ಇದರೊಂದಿಗೆ ಮಂಗಳೂರಿನ ಗತ ವೈಭವದ ಬಹುಮುಖ್ಯ ಕುರುಹೂ ಮರೆಯಾಗುವ ಅಪಾಯವಿದೆ.

ಇತ್ತೀಚೆಗೆ ಇದೇ ಮೊದಲ ಬಾರಿಗೆ ಈ ಕಟ್ಟಡದಲ್ಲಿ ಪಾರಂಪರಿಕ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇಡೀ ಕಟ್ಟಡ ವೈಭವವನ್ನು ವೀಕ್ಷಿಸುವ ಅವಕಾಶವನ್ನು ಸಾರ್ವಜನಿಕರಿಗೆ ಒದಗಿಸಲಾಗಿತ್ತು. ಅಪೂರ್ವ ರೀತಿಯಲ್ಲಿ ಕಟ್ಟಿರುವ ಈ ಕಟ್ಟಡವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಆಡಳಿತಕ್ಕೆ ಸೇರಿದ್ದು.

ಮಹಾಯುದ್ಧದ ಕುರುಹು: 1914-1919ರ ಮಹಾಯುದ್ಧದಲ್ಲಿ ಮಂಗಳೂರಿನ ಸುತ್ತಮುತ್ತಲಿನ ಹಳ್ಳಿಗಳಿಂದ 88 ಮಂದಿ ಭಾಗವಹಿಸಿದ್ದರು. ಅವರಲ್ಲಿ 2 ಮಂದಿ ಮರಣ ಹೊಂದಿದ್ದಾರೆ ಎಂಬ ಕುತೂಹಲಕಾರಿಯಾದ ಮಾಹಿತಿ ಫಲಕ ಈ ಹಳೆಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಾಣಸಿಗುತ್ತದೆ. ಈ ಫಲಕ ಹಾಗೂ ಗೋಪುರ ಈಗಲೂ ಇದೆ.

ಸ್ಮಾರ್ಟ್‌ ಸಿಟಿ ಅಡಿಯಲ್ಲಿ ಕಟ್ಟಡ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿತ್ತು. ಪ್ರವಾಸೋದ್ಯಮಕ್ಕೆ ಪೂರಕವಾಗಿ ಮ್ಯೂಸಿಯಂ ನಿರ್ಮಾಣದ ಯೋಜನೆಯಿತ್ತು. ಆದರೆ ಜಿಲ್ಲಾಡಳಿತಕ್ಕೆ ಅಗತ್ಯವಿರುವ ದಾಖಲೆಗಳು ಈ ಕಟ್ಟಡದಲ್ಲಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಅಭಿವೃದ್ಧಿ ಕೆಲಸವನ್ನು ಕೈಬಿಡಲಾಗಿದೆ. ಆದಷ್ಟು ಬೇಗ ಕಟ್ಟಡಕ್ಕೆ ಮರುಜೀವ ನೀಡುವ ಅಗತ್ಯವಿದೆ.