ಕಾಶಿಗೆ ಹೋದವರು ಈ ಎಲ್ಲ ದೇವರಗಳ ದರ್ಶನ ಸಹ ಮಾಡಿ ಬರುವುದು ವಾಡಿಕೆ. ಆದರೆ, ಕಾಶಿಯಲ್ಲಿ ಈ ದೇವರು ಸೇರಿದಂತೆ 20ಕ್ಕೂ ಹೆಚ್ಚು ದೇವರುಗಳ ಸಾನ್ನಿಧ್ಯಗಳಿದ್ದು, ಕಾಶಿಯ ಈ ಧಾರ್ಮಿಕ ಪರಂಪರೆ ಹಾಗೂ ವೈಶಿಷ್ಟ್ಯವನ್ನು ಧಾರವಾಡದ ಕಟ್ಟಿಮಠವು ನವರಾತ್ರಿ ಅಂಗವಾಗಿ ಅದ್ಭುತವಾಗಿ ತೆರೆದಿಟ್ಟಿದೆ.

ಬಸವರಾಜ ಹಿರೇಮಠಧಾರವಾಡ:

ಕಾಶಿ ಎಂದಾಕ್ಷಣ ವಿಶ್ವನಾಥ ದೇವರು, ಅನ್ನಪೂರ್ಣ ದೇವಿ ಹೆಚ್ಚೆಂದರೆ, ವಿಶಾಲಾಕ್ಷಿ ದೇವಿ ಹಾಗೂ ಸಂಕಟಮೋಚನ ಹನುಮಂತ ಸ್ಮರಣೆಯಲ್ಲಿ ಬರುವುದು ಸಾಮಾನ್ಯ. ಕಾಶಿಗೆ ಹೋದವರು ಈ ಎಲ್ಲ ದೇವರಗಳ ದರ್ಶನ ಸಹ ಮಾಡಿ ಬರುವುದು ವಾಡಿಕೆ. ಆದರೆ, ಕಾಶಿಯಲ್ಲಿ ಈ ದೇವರು ಸೇರಿದಂತೆ 20ಕ್ಕೂ ಹೆಚ್ಚು ದೇವರುಗಳ ಸಾನ್ನಿಧ್ಯಗಳಿದ್ದು, ಕಾಶಿಯ ಈ ಧಾರ್ಮಿಕ ಪರಂಪರೆ ಹಾಗೂ ವೈಶಿಷ್ಟ್ಯವನ್ನು ಧಾರವಾಡದ ಕಟ್ಟಿಮಠವು ನವರಾತ್ರಿ ಅಂಗವಾಗಿ ಅದ್ಭುತವಾಗಿ ತೆರೆದಿಟ್ಟಿದೆ.

ಇಲ್ಲಿಯ ಮಂಗಳವಾರ ಪೇಟೆಯಲ್ಲಿರುವ ಕಟ್ಟಿಮಠವು ಸುಮಾರು 200 ವರ್ಷಗಳ ಇತಿಹಾಸದ ಮನೆತನ ಇದೆ. ಚೆನ್ನಮ್ಮನ ಕಿತ್ತೂರು ಸಂಸ್ಥಾನದ ರಾಜಗುರುಗಳ ವಂಶಸ್ಥರು ಇವರು. ಹೀಗಾಗಿ ಇವರ ಮನೆಯಲ್ಲಿ ತಲೆ-ತಲಾಂತರಗಳಿಂದ ನವರಾತ್ರಿ ಆಚರಿಸುತ್ತ ಬರಲಾಗಿದೆ. ಈ ಕುಟುಂಬದ ಈಗಿನ ಕುಡಿ ಕಾರ್ತಿಕ ಕಟ್ಟಿಮಠ, ನವರಾತ್ರಿಯ ಅಂಗವಾಗಿ ಕಾಶಿ ಕಾ ಹೆಸರಿನಲ್ಲಿ ದೇವಿ ಅಲಂಕಾರದ ಜತೆಗೆ ಕಾಶಿಯ ದೇವಸ್ಥಾನಗಳ ವೈಭವನ್ನು ಧಾರವಾಡದ ಜನತೆಗೆ ತೆರೆದಿಟ್ಟಿದ್ದಾರೆ.

ಐಐಟಿ ಪದವೀಧರರ:

ಕಾರ್ತಿಕ್‌ ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌, ಕಾನ್ಪುರದಲ್ಲಿ ಐಐಟಿ ಮುಗಿಸಿ ಸದ್ಯ ಮುಂಬೈನಲ್ಲಿ ವೃತ್ತಿಯಲ್ಲಿದ್ದಾರೆ. ಕಳೆದ 18 ವರ್ಷಗಳಿಂದ ದೇವಿ ಆರಾಧನೆ ಹಿನ್ನೆಲೆಯಲ್ಲಿ ತಿಂಗಳುಗಟ್ಟಲೇ ಮುಂಚೆಯೇ ಧಾರವಾಡಕ್ಕೆ ಆಗಮಿಸಿ ಒಂಭತ್ತು ದಿನ ಸ್ವತಃ ದೇವಿಗೆ ತಮ್ಮದೇ ಕಲ್ಪನೆಯಲ್ಲಿ ವಿಭಿನ್ನವಾದ ಅಲಂಕಾರ ಮೂಲಕ ನವರಾತ್ರಿ ಹಬ್ಬಕ್ಕೆ ಕಳೆ ತರುತ್ತಿದ್ದಾರೆ. ದೇಶದ ಐತಿಹಾಸಿಕ ಹಾಗೂ ಪೌರಾಣಿಕ ದೇವಸ್ಥಾನಗಳನ್ನು ತಮ್ಮ ಮನೆಯಲ್ಲಿ ಕಲಾತ್ಮಕವಾಗಿ ಸೃಷ್ಟಿಸಿ, ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದಾರೆ.

ಕಾಶಿ ದೇವತೆಗಳ ವೈಭವ:

ಈ ಬಾರಿ ‘ಕಾಶಿಕಾ ನವರಾತ್ರಿ ಉತ್ಸವ’ ನಡೆಯುತ್ತಿದ್ದು, ಮನೆಯ ಮಧ್ಯೆದಲ್ಲಿ ನಿತ್ಯ ದೇವಿಗೆ ಅಲಂಕಾರ ನಡೆಯುತ್ತಿದ್ದು, ಅಂಗಳದಲ್ಲಿ ಕಾಶಿಯ ಧಾರ್ಮಿಕ ಪರಂಪರೆ ಹಾಗೂ ವೈಶಿಷ್ಟ್ಯವನ್ನು ಪರಿಚಯಿಸಿದ್ದಾರೆ. ಕಾಶಿ ವಿಶ್ವನಾಥ ಸೇರಿದಂತೆ ಢುಂಡೀರಾಜ ವಿನಾಯಕ, ಶಂಕರಾಚಾರ್ಯ ದ್ವಾರ, ಶ್ರೀ ಆದಿಕೇಶವ, ರತ್ನೇಶ್ವರ ಮಹಾದೇವ ಮಂದಿರ, ಶ್ರೀ ಆದಿತ್ಯ ಸ್ಥಾನ, ಕಾಶಿ ಕೋತ್ವಾಲ್‌ ಶ್ರೀ ಕಾಲಭೈರವ, ಶ್ರೀ ದಂಡಪಾಣಿ, ದ್ವಾದಶ ಜ್ಯೋತಿರ್ಲಿಂಗ್‌, ಛಪ್ಪನ್‌ ವಿನಾಯಕ, ಅನ್ನಪೂರ್ಣ ದೇವಿ, ನವಚಂಡಿ, ನವದುರ್ಗಾ, ನವಗೌರಿ, ಚೌಸಠ್‌ ಯೋಗಿನಿ ಮಾತಾ, ಸಾಕ್ಷಿ ವಿನಾಯಕ, ಮೂಲ ದೇವತಾ, ನಂದಾದೀಪ ಸೇರಿದಂತೆ 23 ದೇವಸ್ಥಾನಗಳನ್ನು ಸೆಟ್‌ ರೂಪದಲ್ಲಿ ಕಾರ್ತಿಕ್‌ ಸೃಷ್ಟಿಸಿದ್ದಾರೆ.

ವಿಭಿನ್ನ ಕಲ್ಪನೆ:

ಕಾರ್ತಿಕ್‌ ಎರಡು ವರ್ಷದವನಿದ್ದಾಗಲೇ ದೇವಿ ಚಿತ್ರ ಬಿಡಿಸುವುದು ಸೇರಿದಂತೆ ಕಲೆಯಲ್ಲಿ ತುಂಬ ಆಸಕ್ತಿ ಇತ್ತು. ಇದೀಗ ಅದು ನವರಾತ್ರಿ ಉತ್ಸವಕ್ಕೆ ಬಂದು ನಿಂತಿದೆ. ಪ್ರತಿ ವರ್ಷ ಕಾರ್ತಿಕ್‌ ದೇವಿ ಅಲಂಕಾರವನ್ನು ವಿಭಿನ್ನ ಕಲ್ಪನೆಯಲ್ಲಿ ಮಾಡುತ್ತಿದ್ದು, ಅದಕ್ಕಾಗಿ ತಿಂಗಳುಗಟ್ಟಲೇ ಸಮಯ, ಸಂಶೋಧನೆ ಹಾಗೂ ಸಾಕಷ್ಟು ವೆಚ್ಚ ಸಹ ಮಾಡುತ್ತಿದ್ದಾನೆ. ಯಾರ ಸಹಾಯ ಇಲ್ಲದೇ ದೇವಿಯ ಆರಾಧನೆಯ ಕಾರ್ಯ ಮಾಡುತ್ತಿರುವ ಕಾರ್ತಿಕ್‌ ಕಾರ್ಯವನ್ನು ಧಾರವಾಡ ಜನತೆ ಸಹ ಮೆಚ್ಚಿದೆ ಎಂದು ಎಂದು ವಿಜಯಲಕ್ಷ್ಮಿ ಕಟ್ಟಿಮಠ ಹೆಮ್ಮೆ ವ್ಯಕ್ತಪಡಿಸಿದರು.

ಕಟ್ಟಿಮಠದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ನಿತ್ಯ ದೇವಿಗೆ ವಿಶೇಷ ಅಲಂಕಾರ, ಪೂಜೆ, ಭಜನೆ ಹಾಗೂ ಮಹಾಮಂಗಳಾರತಿ, ಸಂಗೀತ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆಯುತ್ತಿವೆ. ಕಾಶಿಯ ಆಧ್ಯಾತ್ಮಿಕ ಪರಂಪರೆಯನ್ನು ಸ್ಥಳೀಯವಾಗಿ ಪರಿಚಯಿಸುವ ಈ ಉತ್ಸವವು ಭಕ್ತರಲ್ಲಿ ವಿಶೇಷ ಆಸಕ್ತಿ ಮೂಡಿಸಿದೆ. ವಿವಿಧ ಕಲಾತ್ಮಕ ಮೂರ್ತಿಗಳು, ಚಿತ್ರಕಲೆಗಳ ಮೂಲಕ ಕಾಶಿಯ ಆಧ್ಯಾತ್ಮಿಕತೆ ತಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕಟ್ಟಿಮಠದಲ್ಲಿ ನವರಾತ್ರಿ ಸಂದರ್ಭದಲ್ಲಿ ನಿತ್ಯ ನಡೆಯುವ ಅಲಂಕಾರ ಕಣ್ತುಂಬಿಕೊಳ್ಳಲು ದೇವಸ್ಥಾನಕ್ಕೆ ಬಂದಂತೆ ಜನರು ಬರುತ್ತಿದ್ದಾರೆ. ನವರಾತ್ರಿ ಕೊನೆ ದಿನ ಧಾರವಾಡ-ಹುಬ್ಬಳ್ಳಿಯ ಮಠಗಳ ಮಠಾಧೀಶರು ಸಹ ಭೇಟಿ ನೀಡುವುದು ವಿಶೇಷ.

ಕಾಶಿಕಾ ಉತ್ಸವದ ಕಲ್ಪನೆ..

ಕಾಶಿಯ ಪ್ರತಿಯೊಂದು ತೀರ್ಥ, ದೈವ ಸಾನ್ನಿಧ್ಯ ಮತ್ತು ಯಾತ್ರಾಪಥವೂ ಈ ಮಹಾಕ್ಷೇತ್ರದ ಮಹಿಮೆಯ ಒಂದೊಂದು ಅನುಭೂತಿಯನ್ನು ತೆರೆದಿಡುತ್ತದೆ. ಕಾಶಿ ಯಾತ್ರೆಯನ್ನು ಕೆಲವೇ ದಿನಗಳು ಮಾತ್ರವಲ್ಲದೇ ತಿಂಗಳುಗಟ್ಟಲೇ ಮಾಡಬೇಕು, ಅಷ್ಟೊಂದು ಧಾರ್ಮಿಕ ಪರಂಪರೆ ಅಲ್ಲಿದೆ ಎಂಬುದು ನಾನು ಕಂಡುಕೊಂಡ ಸಂಶೋಧನೆಯಿಂದ ತಿಳಿಯಿತು. ಕಾಶಿ ಯಾತ್ರೆಯು ದರ್ಶನದಿಂದ ದರ್ಶನಕ್ಕೆ ಸಾಗುತ್ತಾ, ಅಂತರಂಗದಲ್ಲಿ ಶಿವಸ್ಮರಣೆ ಜಾಗೃತಗೊಳಿಸುವ ಪವಿತ್ರ ಪಯಣ. ಈ ಹಿನ್ನೆಲೆಯಲ್ಲಿ ಈ ಬಾರಿ ಕಾಶಿಕಾ ನವರಾತ್ರಿ ಉತ್ಸವ ಕಲ್ಪನೆ ಚಿಂತನೆ ಹೊಳೆಯಿತು.

ಕಾರ್ತಿಕ್‌ ಕಟ್ಟಿಮಠ, ದೇವಿ ಆರಾಧಕರು