ಕನ್ನಡಪ್ರಭ ವಾರ್ತೆ ಮೇಲುಕೋಟೆ

ಮಹಾಲಕ್ಷ್ಮಿ ಯದುಗಿರಿನಾಯಕಿ ಅಮ್ಮನವರ ವರ್ಧಂತ್ಯುತ್ಸವ ಶುಕ್ರವಾರ ವೈಭವದಿಂದ ನಡೆದರೆ, ಶನಿವಾರ ಶ್ರೀದೇವಿ-ಭೂದೇವಿ, ಕಲ್ಯಾಣನಾಯಕಿ-ಚೆಲುವನಾರಾಯಣಸ್ವಾಮಿಯವರ ಶೇರ್ತಿಸೇವೆ ನೆರವೇರಿತು.

ಶೇರ್ತಿಸೇವೆಯಲ್ಲಿ ರಾಮಾನುಜಾಚಾರ್ಯರು, ಕಲಿಯನ್ ಮತ್ತು ನಮ್ಮಾಳ್ವಾರ್‌ರೊಂದಿಗೆ ವಿಶೇಷ ಪೂಜಾ ಕೈಂಕರ್ಯಗಳು ವೈಭವದಿಂದ ನೆರವೇರಿದವು. ಶ್ರಾವಣ ಶನಿವಾರದ ಕಾರಣ ಇಡೀ ದಿನ ಸಹಸ್ರಾರು ಭಕ್ತರು ಶೇರ್ತಿಸೇವೆಯಲ್ಲಿ ಸ್ವಾಮಿಯ ವೈಭವವನ್ನು ಕಣ್ತುಂಬಿಕೊಂಡರು. ವಿಶೇಷ ಪಾರಾಯಣ ಮಹಾಮಂಗಳಾರತಿಯ ನಂತರ ರಾತ್ರಿ ಸ್ವಾಮಿಯ ಉತ್ಸವ ಸ್ವಸ್ಥಾನಕ್ಕೆ ಮರಳಿತು.

ಮಹಾಲಕ್ಷ್ಮಿ ಯದುಗಿರಿನಾಯಕಿ ಅಮ್ಮನವರ ವರ್ಧಂತ್ಯುತ್ಸವದ ಅಂಗವಾಗಿ ಶುಕ್ರವಾರ ಮಹಾಲಕ್ಷ್ಮಿಕಲ್ಯಾಣನಾಯಕಿ ಅಮ್ಮನವರಿಗೆ ಬೆಳಗ್ಗೆ ಶೇಷ ವಾಹನೋತ್ಸವ ಮತ್ತು ಅಭಿಷೇಕನಡೆದರೆ ನಡೆದರೆ, ರಾತ್ರಿ ಚೆಲುವನಾರಾಯಣಸ್ವಾಮಿಯವರಿಗೆ ಕಲ್ಯಾಣನಾಯಕಿ ಅಮ್ಮನವರೊಂದಿಗೆ ಪುಷ್ಪಾಲಂಕೃತ ಬಂಗಾರದ ಪಲ್ಲಕ್ಕಿ ಉತ್ಸವ ವಿಶೇಷ ಮಂಗಳವಾದ್ಯ ಮತ್ತು ದಿವ್ಯಪ್ರಬಂಧ ಪಾರಾಯಣದೊಂದಿಗೆ ಅದ್ದೂರಿಯಾಗಿ ನಡೆಯಿತು. ಕಳೆದ ಆಗಸ್ಟ್ 9 ರಿಂದ ನಡೆಯುತ್ತಿದ್ದ ವರ್ಧಂತಿಯ ಕಾರ್ಯಕ್ರಮಗಳು ಶನಿವಾರ ಶೇರ್ತಿಸೇವೆಯೊಂದಿಗೆ ಮುಕ್ತಾಯವಾಯಿತು.

ವರ್ಧಂತಿ ಅಂಗವಾಗಿ ಅಮ್ಮನವರ ಸನ್ನಿಧಿಯ ಆವರಣಕ್ಕೆ ವಿಶೇಷ ಚಪ್ಪರ ಹಾಕಿ ತಳಿರು-ತೋರಣ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಮೂರನೇ ಸ್ಥಾನೀಕರಾದ ಕೋವಿಲ್ ನಂಬಿ ಪ್ರಸನ್ನಕುಮಾರ್ ಮತ್ತು ಸ್ಥಾನೀಕಂ ಮುಕುಂದನ್ ಪರಿಶ್ರಮ ಮತ್ತು ಆಸಕ್ತಿಯಪರಿಣಾಮ ಮಹಾಲಕ್ಷ್ಮಿ ಕಲ್ಯಾಣನಾಯಕಿ ಅಮ್ಮನವರ ವರ್ಧಂತಿ ಮಹೋತ್ಸವದ ಕಾರ್ಯಕ್ರಮಗಳು ವೈಭವದಿಂದ ನೆರವೇರುತ್ತಾ ಬಂದಿದ್ದು ಈ ವರ್ಷವೂ ಸಂಪ್ರದಾಯ ವೈಭವದ ವ್ಯವಸ್ಥೆಗಳೊಡನೆ ಮುಂದುವರೆಯಿತು.


ಇಂದು ಬದರೀನಾರಾಯಣಸ್ವಾಮಿ ಜಯಂತಿ:

ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದ ಮುಂಭಾಗ ಬೃಹತ್ ಎಲಚೀವೃಕ್ಷದ ಕೆಳಭಾಗ ದೇವಾಲಯದಲ್ಲಿ ವಿರಾಜಮಾನನಾಗಿರುವ ಕ್ಷೇತ್ರದೇವತೆ ಶ್ರೀಬದರೀನಾರಾಯಣಸ್ವಾಮಿಯವರ ಜಯಂತ್ಯುತ್ಸವ ಭಾನುವಾರ ನಡೆಯಲಿದೆ. ಸನ್ನಿಧಿಯಲ್ಲಿ ಬೆಳಗ್ಗೆ 9 ಗಂಟೆಗೆ ದಕ್ಷಿಣಬದರೀಕಾಶ್ರಮ ಎನಿಸಿರುವ ಮೇಲುಕೋಟೆ ಅರವಿಂದವಲ್ಲೀ ಸಮೇತ ಬದರೀ ನಾರಾಯಣಸ್ವಾಮಿ ಹಾಗೂ ಸನ್ನಿಧಿಯಲ್ಲಿರುವ ರಾಮಾನುಜಾಚಾರ್ಯರಿಗೆ ವೇದಘೋಷ ಮಂಗಳವಾದ್ಯದೊಂದಿಗೆ ಅಭಿಷೇಕ ನಡೆಯಲಿದೆ. ಮಧ್ಯಾಹ್ನ ದಿವ್ಯಪ್ರಬಂಧಪಾರಾಯಣ- ಶಾತ್ತುಮೊರೈ ಹಾಗೂ ಮಹಾಮಂಗಳಾರತಿ ನಡೆಯಲಿದೆ ಎಂದು ಅರ್ಚಕರಾದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ತಿಳಿಸಿದ್ದಾರೆ