ವೈಭವದ ಹೊಸರಿತ್ತಿ ಗುದ್ದಲೀಶ್ವರ ಶ್ರೀಗಳ ಮಹಾ ರಥೋತ್ಸವ

| Published : Jan 14 2025, 01:02 AM IST

ಸಾರಾಂಶ

ಹೊಸರಿತ್ತಿಯ ಶ್ರೀ ಗುದ್ದಲೀಶ್ವರ ಮಹಾಸ್ವಾಮಿಗಳ 125ನೇ ಯಾತ್ರಾ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಹೊಸರಿತ್ತಿಯ ಗುದ್ದಲೀಸ್ವಾಮೀಜಿಗಳ ಮಹಾ ರಥೋತ್ಸವ ಸಾವಿರಾರು ಭಕ್ತರ ನಡುವೆ ಸೋಮವಾರ ಸಂಜೆ ವೈಭವದಿಂದ ನೆರವೇರಿತು.

ಗುತ್ತಲ: ಹೊಸರಿತ್ತಿಯ ಶ್ರೀ ಗುದ್ದಲೀಶ್ವರ ಮಹಾಸ್ವಾಮಿಗಳ 125ನೇ ಯಾತ್ರಾ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಹೊಸರಿತ್ತಿಯ ಗುದ್ದಲೀಸ್ವಾಮೀಜಿಗಳ ಮಹಾ ರಥೋತ್ಸವ ಸಾವಿರಾರು ಭಕ್ತರ ನಡುವೆ ಸೋಮವಾರ ಸಂಜೆ ವೈಭವದಿಂದ ನೆರವೇರಿತು.ಬೆಳಗ್ಗೆಯಿಂದಲೇ ಐದನೇ ಪೀಠಾಧ್ಯಕ್ಷರ ಸಮ್ಮುಖದಲ್ಲಿ ಹಾಗೂ ಆಗಮಿಸದ ಶ್ರೀಗಳ ನೇತೃತ್ವದಲ್ಲಿ ಮಠದಲ್ಲಿ ವಿವಿಧ ಪೂಜಾ ಕೈಕಂರ್ಯಗಳು, ಮಹಾಗಣರಾಧನೆ ನಡೆದವು. ನಂತರ ಸಂಜೆ 5 ಗಂಟೆಗೆ ಗುದ್ದಲೀಶ್ವರ ಮಹಾಸ್ವಾಮಿಗಳು ಮತ್ತು ವಿವಿಧ ಮಠಗಳಿಂದ ಆಗಮಿಸಿದ ಶ್ರೀಗಳ ಸಮ್ಮುಖದಲ್ಲಿ ಮಹಾರಥೋತ್ಸವಕ್ಕೆ ಪೂಜಾ ವಿಧಿವಿಧಾನಗಳು ನಡೆದ ನಂತರ ಮಠದ ಮುಂಭಾಗದಲ್ಲಿ ನಿಂತಿರುವ ಮಹಾ ರಥೋತ್ಸವಕ್ಕೆ ಗುದ್ದಲೀಶ್ವರ ಸ್ವಾಮಿಗಳ ಸಮ್ಮುಖದಲಿ ಚಾಲನೆ ನೀಡಲಾಯಿತು. ಗದಿಗೆಪ್ಪಜ್ಜ ಸ್ವಾಮಿಗಳ ಮೂರ್ತಿ ಹೊತ್ತ ರಥಕ್ಕೆ ಚಾಲನೆ ನೀಡುತಿದ್ದಂತೆ ಹರಹರ ಮಹೇದೇವ, ಗುದ್ದಲೀಶ್ವರ ಸ್ವಾಮೀ ಕೀ ಜೈ, ಗದಿಗೆಪ್ಪಜ್ಜ ಕೀ ಜೈ, ಎಂಬ ಉಕ್ತಿಯನ್ನು ಕೊಗುವ ಮೂಲಕ ಭಕ್ತರು ಭಕ್ತಿ ಭಾವ ಮೆರೆದರು. ವರಾದ ಹೊಳೆಯ ಹತ್ತಿರ ಇರುವ ಗದ್ದುಗೆಗೆ ಪೂಜೆ ಮಾಡಿದ ನಂತರ ರಥೋತ್ಸವ ಮರಳಿ ಮಠಕ್ಕೆ ತಲುಪಿತು. ರಥೋತ್ಸವ ಮುಂದೆ ಸಾಗುತ್ತಿದಂತೆ ರಥಕ್ಕೆ ಭಕ್ತರು, ಉತ್ತತ್ತಿ, ಬಾಳೆಹಣ್ಣು, ಕಲ್ಲು ಸಕ್ಕರೆ ಚೂರುಗಳನ್ನು ಎಸೆದು ಭಕ್ತರು ತಮ್ಮ ಭಕ್ತಿ ಮೆರೆದರು. ಮಹಿಳೆಯರ ಕುಂಭ, ಕೋಲಾಟ, ಡೊಳ್ಳುಕುಣಿತ, ವೀರಗಾಸೆ, ಪುರವಂತರ ಹಾಗೂ ಡಿಜೆ ಹಾಡುಗಳಿಗೆ ಯುವಕರು ಕುಣಿತ ಇವು ಮಹಾರಥೋತ್ಸವಕ್ಕೆ ಮೆರುಗು ತಂದವು. ಚನ್ನೂರ, ಕೊರಡೂರ, ನೆಗಳೂರ, ಬಮ್ಮನಕಟ್ಟಿ, ಹಳೇರಿತ್ತಿ, ಕಿತ್ತೂರ, ಹಾಲಗಿ, ಮರೋಳ, ಮಣ್ಣೂರ, ಶಿರಮಾಪೂರ ಹಾವೇರಿ, ಗುತ್ತಲ, ತಿಪಟೂರ, ಕುರಬರಹಳ್ಳಿ, ತುಮಕೂರ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಭಕ್ತಸಮೂಹ ಹರಿದು ಬಂದಿತ್ತು.ಮುಂಜಾನೆ 10 ಗಂಟೆಗೆ ನಡೆದ ರಕ್ತದಾನ ಶಿಬಿರ ಗುದ್ದಲೀಶ ಗ್ರಾಮೀಣ ಮತ್ತು ನಗರ ಸಮಾಜ ಸೇವಾ ಸಂಸ್ಥೆ (ರಿ) ಹೊಸರಿತ್ತಿ ಮತ್ತು ಪ್ರೇರಣಾ ಎಜ್ಯುಕೇಶನ್ ಟ್ರಸ್ಟ್(ರಿ) ಹೊಸರಿತ್ತಿ ಇವರ ಸಹಯೋಗದಲ್ಲಿ ನಡೆಯಿತು. ಅನೇಕ ಜನ ಭಕ್ತರು ರಕ್ತದಾನ ಮಾಡಿದರು. ಗುದ್ದಲೀಶ್ವರ ಮಹಾಸ್ವಾಮಿಗಳು ರಕ್ತದಾನ ಶಿಬಿರಕ್ಕೆ ದೀಪ ಬೆಳಗಿಸುವ ಮುಖಾಂತರ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಸತೀಶ ಜಂಗಳಿ, ಸಿದ್ದರಾಜ ಕಲಕೋಟಿ, ಗಿರೀಶ ಅಂಕಲಕೋಟಿ, ಮುತ್ತಣ್ಣ ಮಠದ, ಚಂದ್ರಣ್ಣ ಅರಳಿ, ಸಿದ್ದರಾಮಶಟ್ರ ಶಟ್ಟರ, ಜಿ.ಪಿ. ಕೋರಿ, ಹೆಚ್. ಆರ್. ಯಡಳ್ಳಿ, ಅಜೀತ ಹಳ್ಳಿಕೇರಿ ಮತ್ತು ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ತಂಡದವರು ಭಾಗವಹಿಸಿದ್ದರು.