ಸಾರಾಂಶ
ಕನ್ನಡ ನಾಡು ಕಂಡ ಮಹಾ ದಾರ್ಶನಿಕ, ಕಂಡದ್ದನ್ನು ಕಂಡ ಹಾಗೆ ಕೆಂಡದಂತೆ ಅಭಿವ್ಯಕ್ತಿಸುವ ಮಹಾನಿಷ್ಠುರವಾದಿ, ಅರಮನೆ, ಗುರುಮನೆಗಳ ಹಂಗಿಲ್ಲದೆ ಲೋಕಸಂಚಾರಿಯಾಗಿ ಕನ್ನಡ ನಾಡಿನಲ್ಲಿ ನಡೆದಾಡಿದ ಬಿಚ್ಚು ಮಾತಿನ ಕೆಚ್ಚೆದೆಯ ಸರ್ವಜ್ಞ ಎಂದು ಶಾಸಕ ಯು.ಬಿ.ಬಣಕಾರ ಹೇಳಿದರು.
ಹಿರೇಕೆರೂರು: ಸರಳವಾದ ನುಡಿಗಟ್ಟುಗಳಲ್ಲಿ ಸಮಾಜ ಪರಿವರ್ತಿಸಲು ಹೊರಟ ಮಹಾಸಂತ ಸರ್ವಜ್ಞ ಎಂದು ಶಾಸಕ ಯು.ಬಿ.ಬಣಕಾರ ಹೇಳಿದರು.
ಪಟ್ಟಣದಲ್ಲಿ ಸರ್ವಜ್ಞ ಸ್ಮಾರಕ ಸಮಿತಿ ಹಾಗೂ ಸಿಇಎಸ್ ವಿದ್ಯಾಸಂಸ್ಥೆಯ ಸಹಯೋಗದಲ್ಲಿ ನಡೆದ ಸರ್ವಜ್ಞ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ನಾಡು ಕಂಡ ಮಹಾ ದಾರ್ಶನಿಕ, ಕಂಡದ್ದನ್ನು ಕಂಡ ಹಾಗೆ ಕೆಂಡದಂತೆ ಅಭಿವ್ಯಕ್ತಿಸುವ ಮಹಾನಿಷ್ಠುರವಾದಿ, ಅರಮನೆ, ಗುರುಮನೆಗಳ ಹಂಗಿಲ್ಲದೆ ಲೋಕಸಂಚಾರಿಯಾಗಿ ಕನ್ನಡ ನಾಡಿನಲ್ಲಿ ನಡೆದಾಡಿದ ಬಿಚ್ಚು ಮಾತಿನ ಕೆಚ್ಚೆದೆಯ ಸರ್ವಜ್ಞ ಎಂದು ಹೇಳಿದರು.ಲೌಖಿಕ ಬದುಕಿನಲ್ಲಿ ಸಮಾಜವಾದಿ, ಆಧ್ಯಾತ್ಮಿಕ ಜೀವನದ ಮಹಾ ಅನುಭಾವಿ, ದಾರ್ಶನಿಕ, ಕ್ರಾಂತಿಕಾರಿ ಬಂಡಾಯ ಮನೋಧರ್ಮದ ಮನೋಭಾವುಳ್ಳ ಸರ್ವಜ್ಞ ಸಮಾಜದಲ್ಲಿ ಕಣ್ಣಿಗೆ ಕಂಡದ್ದನ್ನು ತ್ರಿಪದಿಗಳ ಮೂಲಕ ಹೇಳಿದರು. ಸಮಾಜಕ್ಕೆ ಛಾಟಿ ಬೀಸಿದರು. ಕನ್ನಡ ಭಾಷೆ ಹಾಗೂ ಆ ಭಾಷೆಯ ಅನಂತ ಸಾಧ್ಯತೆಗಳನ್ನು ವಿಸ್ತರಿಸುತ್ತ, ಜಾತಿ, ಮತ, ಧರ್ಮ ಇವುಗಳ ಬಂಧನಕ್ಕೆ ಅಂಟಿಕೊಳ್ಳದ ಮಹಾ ಮಾನವತಾವಾದಿ ಸರ್ವಜ್ಞ ಎಂದು ಬಣಕಾರ ಹೇಳಿದರು.ಸರ್ವಜ್ಞ ಪ್ರಾಧಿಕಾರ, ಸರ್ವಜ್ಞ ಅಧ್ಯಯನ ಪೀಠ ಇವುಗಳಿಗೆ ಸಂಬಂಧಪಟ್ಟಂತೆ ಅಬಲೂರು, ಮಾಸೂರು ಹಾಗೂ ಹಿರೇಕೆರೂರು 3 ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆದು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಬಣಕಾರ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸರ್ವಜ್ಞ ಸ್ಮಾರಕ ಸಮಿತಿ ಅಧ್ಯಕ್ಷ ಎಸ್.ಎಸ್. ಪಾಟೀಲ್ ಮಾತನಾಡಿ, ಭಾರತೀಯ ಸಾಹಿತ್ಯ ನಿರ್ಮಾಣಕಾರರಲ್ಲಿ ಓರ್ವನಾದ ತ್ರಿಪದಿ ಸಾಹಿತ್ಯದ ಮೇರು ಪರ್ವತವೆನಿಸಿದ ಸರ್ವಜ್ಞನ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ಮಾಡಿ, ಸರ್ವಜ್ಞನ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬೇಕು ಎಂದರು. ಸರ್ವಜ್ಞ ಪ್ರಾಧಿಕಾರ ಹಾಗೂ ಸರ್ವಜ್ಞ ಅಧ್ಯಯನ ಕೇಂದ್ರ, ಸಂಶೋಧನಾ ಕೇಂದ್ರ, ಗ್ರಂಥಾಲಯ ಇವುಗಳಿಗೆ ಭವ್ಯ ಕಟ್ಟಡದ ಅಗತ್ಯವಿದೆ. ಅದಕ್ಕೆ ಸರ್ಕಾರ ಮುಂದಾದರೆ ₹50 ಲಕ್ಷ ನಮ್ಮ ವಿದ್ಯಾಸಂಸ್ಥೆಯಿಂದ ದೇಣಿಗೆ ನೀಡಿ ಆ ಕಾರ್ಯಕ್ಕೆ ಸಹಕರಿಸುತ್ತೇವೆ ಎಂದು ಕರೆ ನೀಡಿದರು.ಲಿಂಗರಾಜ ಚಪ್ಪರದಳ್ಳಿ, ಎಸ್.ಬಿ. ತಿಪ್ಪಣ್ಣನವರ, ಜಗದೀಶ ತಂಬಾಕದ ನುಡಿ ನಮನ ಸಲ್ಲಿಸಿದರು. ತಾಲೂಕು ಕುಂಬಾರ ಸಮಾಜದ ಅಧ್ಯಕ್ಷ ಸಿ.ಬಿ. ಚಕ್ರಸಾಲಿ, ಸಿಇಎಸ್ ವಿದ್ಯಾಸಂಸ್ಥೆಯ ನಿರ್ದೇಶಕರಾದ ಆನಂದಪ್ಪ ಹಾದಿಮನಿ, ಶೋಭಾ ಅಂಗಡಿ, ದುರುಗಪ್ಪ ನೀರಲಗಿ, ಮಂಜುನಾಥ ಬ. ತಂಬಾಕದ, ಪವಿತ್ರಾ ಮುದಿಗೌಡ್ರ, ಹೂವಪ್ಪ ಕವಲಿ, ಮಹೇಶ ಗುಬ್ಬಿ, ರಾಮನಗೌಡ ಪಾಟೀಲ, ಶಿವಯೋಗಿ ನಾಗಪ್ಪನವರ, ವಿವೇಕಾನಂದ ರಂಗನಗೌಡ್ರ, ಮಂಜುಳಾ ಬಾಳಿಕಾಯಿ, ಶೇಖಪ್ಪ ಹೊಂಡದ, ಮೋಹನಗೌಡ ಪಾಟೀಲ ಉಪಸ್ಥಿತರಿದ್ದರು.
ಆಡಳಿತಾಧಿಕಾರಿಗಳಾಗ ಎಸ್. ವೀರಭದ್ರಯ್ಯ ಸ್ವಾಗತಿಸಿದರು. ಪ್ರಾಚಾರ್ಯ ಹಾಗೂ ಸರ್ವಜ್ಞ ಸ್ಮಾರಕ ಸಮಿತಿ ಕಾರ್ಯದರ್ಶಿಗಳಾದ ಎಸ್.ಬಿ. ಚನ್ನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಶಿಕ್ಷರಾದ ಗಂಗಾಧರ ಉಪನ್ಯಾಸ ನೀಡಿದರು. ಆರ್.ಎಂ. ಕರೇಗೌಡ್ರ ಕಾರ್ಯಕ್ರಮ ನಿರೂಪಿಸಿದರು. ಆರ್.ಎಚ್. ಬೆಟ್ಟಳ್ಳೇರ ವಂದಿಸಿದರು. ಸಮಾರಂಭದಲ್ಲಿ ಬಿಇಡಿ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಸರ್ವಜ್ಞನ ನೂರಾರು ವಚನಗಳನ್ನು ಗಾಯನ ಮಾಡಿದರು.